ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಮಲೆನಾಡಿನ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಕುಂಭ ದ್ರೋಣ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿ ನೆರೆ ಪೀಡಿತವಾಗಿದೆ. ಈಗಾಗಲೇ ಮಹಾ ಮಳೆ ಮೂವರನ್ನು ಬಲಿ ಪಡೆದಿದೆ.
ಪುತ್ತೂರಿನ ಹೆಬ್ಬಾರಬೈಲಿನಲ್ಲಿ ಭಾರೀ ಮಳೆಗೆ ತಡೆಗೋಡೆ ಮನೆಯ ಮೇಲೆ ಕುಸಿದು ಬಿದ್ದು ವೃದ್ದೆ ಪಾರ್ವತಿ(65) ಮತ್ತು ಮೊಮ್ಮಗ ಧನುಷ್(11) ದಾರುಣವಾಗಿ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರಿನಲ್ಲಿ ಶೃಂಗೇರಿ ಠಾಣಾ ವ್ಯಾಪ್ತಿಯ ಗೋಣಿ ಬೈಲು ಎಂಬಲ್ಲಿ ನೀರು ತುಂಬಿ ಜಮೀನಿಗೆ ಸಮತಟ್ಟಾಗಿದ್ದ ಕೃಷಿ ಹೊಂಡದಲ್ಲಿ ಬಿದ್ದು ರೈತ ಸುರೇಂದ್ರ (45) ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸೇತುವೆ ಕುಸಿತ
ಕೊಡಗು ಜಿಲ್ಲೆಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ತಿತಿಮತಿ ಸೇತುವೆ ಕುಸಿದಿದ್ದು ಸಂಚಾರ ಸ್ಥಗಿತಗೊಂಡಿದ್ದು , ವಾಹನ ಸವಾರರು ಪರದಾಡಬೇಕಾಗಿದೆ.
ಹೆದ್ದಾರಿಗೆ ನೀರು
ಉಡುಪಿಯ ಪಡುಬಿದ್ರಿ ಹೆದ್ದಾರಿಗೆ ನೀರು ಬಂದಿದ್ದು ವಾಹನ ಸಂಚಾರ ಅಸ್ತವ¤ಸ್ತವಾಗಿದೆ.
ಮಂಗಳೂರು , ಉಡುಪಿಯ ನದಿ ಪಾತ್ರದ ಜನರನ್ನು ರಕ್ಷಿಸಲಾಗಿದೆ. ಹಲವೆಡೆ ಆತಂಕಕಾರಿ ಎಂಬಂತೆ ನದಿ ನೀರಿನ ಮಟ್ಟ ಏರ ತೊಡಗಿದ್ದು ಜನರನ್ನು ಬೋಟ್‌ಗಳ ಮೂಲಕ ರಕ್ಷಣೆ ನಡೆಸಲಾಗಿದೆ.
ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ತುರ್ತು ರಕ್ಷಣಾ ಕಾರ್ಯಕ್ಕೆ ಅಗತ್ಯವಾಗಿರುವ ಎಲ್ಲಾ ಸಿದ್ದತೆಗಳನ್ನು ಮಾಡಿದೆ.ಅಗ್ನಿ ಶಾಮಕ ದಳದ ಸಿಬಂದಿಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದಾರೆ. ಈಗಾಗಲೇ ನೆರೆಗೆ ಸಿಲುಕಿದ್ದ 50 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಿದ್ದಾರೆ.