Advertisement

ಮಹಾ ಮಳೆಗೆ ಹಳ್ಳ ಉಕ್ಕಿ ಎರಡು ಸೇತುವೆ ಮುಳುಗಡೆ : ನಗರ ರಸ್ತೆ ಸಂಪರ್ಕ ಕಡಿತ

07:58 PM Aug 30, 2021 | Team Udayavani |

ವಾಡಿ (ಚಿತ್ತಾಪುರ): ಮಹಾ ಮಳೆಯಿಂದ ತಿಂಗಳ ಹಿಂದಷ್ಟೇ ಜಲ ಗಂಡಾಂತರ ಎದುರಿಸಿದ್ದ ಚಿತ್ತಾಪುರ ತಾಲೂಕಿನ ಬಳವಡಗಿ ಹಾಗೂ ಕೊಂಚೂರು ಗ್ರಾಮಗಳು, ರವಿವಾರ ರಾತ್ರಿ ಸುರಿದ ಸತತ ಮಳೆಯಿಂದ ಮತ್ತೆ ಪ್ರವಾಹದ ತೆಕ್ಕೆಗೆ ಜಾರಿವೆ.

Advertisement

ಹಳ್ಳ ಉಕ್ಕಿ ನೀರು ಊರು ಹೊಕ್ಕುವ ಪ್ರಸಂಗ ಇದೇ ಮೊದಲೇನಲ್ಲ. ನಿರಂತರ ಮಳೆ ಬಂದರೆ ಸಾಕು ಅಕ್ಕಪಕ್ಕದಲ್ಲಿರುವ ಕೊಂಚೂರು ಮತ್ತು ಬಳವಡಗಿ ಗ್ರಾಮಗಳ ಸೇತುವೆಗಳು ಸಂಪೂರ್ಣ ಮುಳುಗುತ್ತವೆ. ಇದರಿಂದ ಬಳವಡಗಿ ಗ್ರಾಮಸ್ಥರಿಗೆ ಮಾತ್ರ ಭಾರಿ ತೊಂದರೆಯಾಗುತ್ತದೆ. ಹಳ್ಳ ಉಕ್ಕಿದಾಗಲೊಮ್ಮೆ ಎತ್ತರದಲ್ಲಿರುವ ಕೊಂಚೂರು ಗ್ರಾಮ ಜಲ ಸಂಕಟದಿಂದ ರಕ್ಷಣೆಯಾದರೆ, ಹಳ್ಳದ ದಡದಲ್ಲಿರುವ ಬಳವಡಗಿ ಗ್ರಾಮ ಅಕ್ಷರಶಃ ಪ್ರವಾಹದ ಕೆನ್ನಾಲಿಗೆಗೆ ತುತ್ತಾಗುತ್ತದೆ. ರವಿವಾರ ಮತ್ತು ಸೋಮವಾರ ರಾತ್ರಿ ಹಗಲೆನ್ನದೆ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಮತ್ತೊಮ್ಮೆ ಈ ಎರಡೂ ಗ್ರಾಮಗಳ ಸೇತುವೆಗಳು ಮುಳುಗಡೆಯಾಗುವ ಮೂಲಕ ವಾಡಿ ನಗರದ ರಸ್ತೆ ಸಂಪರ್ಕ ಕಡಿದುಕೊಂಡಿವೆ.

ಇದನ್ನೂ ಓದಿ : ಸಾಂಗ್‌ ಆಫ್ ದಿ ಸ್ಪ್ಯಾರೋಸ್‌ : ಜೀವನೋತ್ಸಾಹವನ್ನು ನಮ್ಮೊಳಗೆ ಬಿತ್ತುವ ಚಿತ್ರ

ಬಳವಡಗಿ ಗ್ರಾಮವನ್ನು ಸುತ್ತುವರೆದಿರುವ ಹಳ್ಳದ ನೀರು, ಜನರಲ್ಲಿ ಪ್ರಾಣ ಭೀತಿ ಹುಟ್ಟಿಸಿದೆ. ಸೋಮವಾರ ಬೆಳಗ್ಗೆಯಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ಜನರು ಪರದಾಡಿದ ಪ್ರಸಂಗ ನಡೆದಿದೆ. ಶ್ರೀ ಏಲಾಂಬಿಕೆ ದೇವಸ್ಥಾನ ಮತ್ತು ಮಸೀದಿ ನೀರಿನ ಮಧ್ಯೆ ನಿಂತು ಪ್ರವಾಹದ ತೀವ್ರತೆ ತೋರಿಸಿದಂತಿತ್ತು. ಯುವಕರು ಊರು ಸೇರಲು ನೀರಿನಲ್ಲೇ ಸಾಗಿದರು. ಇದು ಪ್ರತಿವರ್ಷದ ಪರಸ್ಥಿತಿಯಾದ್ದರಿಂದ ಹಲವು ಕುಟುಂಬಗಳು ನಿರಾಶ್ರಿತರ ಕಾಲೋನಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಳೆಗಾಲದಲ್ಲಿ ಹೀಗೆ ನಿರೀಕ್ಷಿತವಾಗಿ ಮುಳುಗಡೆಯಾಗುವ ಬಳವಡಗಿ ಗ್ರಾಮಕ್ಕೆ ಜಿಲ್ಲಾಡಳಿತವಾಗಲಿ ಅಥವ ಸರಕಾರದ ಜನಪ್ರತಿನಿಧಿಗಳಾಗಲಿ ಯಾವೂದೇ ಶಾಶ್ವತ ಪರಿಹಾರ ಒದಗಿಸದಿರುವುದು ಬೇಜವಾಬ್ದಾರಿಯ ಪರಮಾವಧಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next