Advertisement

ಸಿರುಗುಪ್ಪ: ಅಕಾಲಿಕ ಮಳೆಗೆ ಮೆಣಸಿನಕಾಯಿ ಬೆಳೆಗಾರರು ಕಂಗಾಲು

01:32 PM Jan 09, 2021 | Team Udayavani |

ಸಿರುಗುಪ್ಪ: ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯ ಶಾನವಾಸಪುರ ಮತ್ತು ಸಿರಿಗೇರಿ ಕ್ರಾಸ್‌ ಸುತ್ತಮುತ್ತ 2 ದಿನ ಸುರಿದ ಅಕಾಲಿಕ ಮಳೆಯಿಂದಾಗಿ ಒಣ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ಈ ಭಾಗದಲ್ಲಿ ಸುಮಾರು 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಒಣ ಮೆಣಸಿನಕಾಯಿ ಬೆಳೆ ಬೆಳೆದಿದ್ದು, ಈಗಾಗಲೇ ರೈತರು ಮೆಣಸಿನಕಾಯಿಯನ್ನು ಬಿಡಿಸಿ ಸಿರಿಗೇರಿ ಕ್ರಾಸ್‌ನ ಕೆಇಬಿ ಮೈದಾನ ಮತ್ತು ಜಮೀನುಗಳಲ್ಲಿ ಒಣಗಲು ಹಾಕಿದ್ದು, ಬುಧವಾರ ಮತ್ತು ಗುರುವಾರ ಸುರಿದ ಅಕಾಲಿಕ ಮಳೆಗೆ ಒಣ ಹಾಕಿದ ಮೆಣಸಿನಕಾಯಿ ತೋಯ್ದಿದ್ದು, ಮೆಣಸಿನಕಾಯಿಯ ಬಣ್ಣ ಕೆಟ್ಟು
ಹೋಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಬೆಲೆಯು ಕಡಿಮೆಯಾಗುತ್ತದೆ ಎನ್ನುವ ಆತಂಕದಲ್ಲಿಯೇ ಶುಕ್ರವಾರ ಬಿಸಿಲಿಗೆ
ಮೆಣಸಿನಕಾಯಿಯನ್ನು ಹರಡುವ ದೃಶ್ಯಗಳು ಈ ಭಾಗದಲ್ಲಿ ಕಂಡು ಬಂದವು.

ಬ್ಯಾಡಗಿ, ಗುಂಟೂರು, ಸಿಜೆಂಟಾ, ಡಬ್ಬೆ ತಳಿಯ ಮೆಣಸಿನಕಾಯಿಗಳನ್ನು ರೈತರು ಒಣಗಿಸಲು ಮೈದಾನದ ತುಂಬ ಹರಡಿದ್ದರು. ಆದರೆ ಬುಧುವಾರ ಏಕಾಏಕಿ ಒಂದುವರೆ ತಾಸು ಸುರಿದ ಭಾರಿ ಮಳೆಗೆ ಒಣಗಲು ಹಾಕಿದ್ದ ಒಣ ಮೆಣಸಿನಕಾಯಿ ಮಳೆ ನೀರಿನೊಂದಿಗೆ ಕೊಚ್ಚಿ ಹೋಗುವುದನ್ನು ತಡೆಯಲು ರೈತರು ಹರಸಾಹಸಪಟ್ಟರು.

ಇದನ್ನೂ ಓದಿ:5ಎ ಕಾಲುವೆ ಅನುಷ್ಠಾನಕ್ಕೆ ಧರಣಿ: ಬೀದಿಗಿಳಿದ ರೈತರು,‌ ಮಸ್ಕಿ‌ ಹೆದ್ದಾರಿಗಳೆಲ್ಲಾ ಬಂದ್

ಗುರುವಾರವು ಜಿಟಿಜಿಟಿ ಮಳೆ ಸುರಿದಿದ್ದರಿಂದ ಮೆಣಸಿನಕಾಯಿಯನ್ನು ಒಣಗಿ ಹಾಕಲು ಸಾಧ್ಯವಾಗಿರಲಿಲ್ಲ. ಆದರೆ ಶುಕ್ರವಾರ ಉತ್ತಮ ಬಿಸಿಲು ಬಿದ್ದಿದ್ದರಿಂದ ರೈತರು ರಾಶಿಹಾಕಿದ ಒಣ ಮೆಣಸಿನಕಾಯಿಯನ್ನು ಮೈದಾನದಲ್ಲಿ ಮತ್ತು ಹೊಲದಲ್ಲಿ ಹರಡಿ
ಬಿಸಿಲಿಗೆ ಒಣಗಿಸುವ ಕಾರ್ಯದಲ್ಲಿ ತೊಡಗಿದ್ದರು.

Advertisement

ಮೆಣಸಿನಕಾಯಿ ಬೆಳೆ ಬಂದಿದೆ, ಆದರೆ ಅಕಾಲಿಕ ಮಳೆಗೆ ಮೆಣಸಿನಕಾಯಿ ತೊಯ್ದಿರಿವುದರಿಂದ ಮಚ್ಚೆ ಕಾಣಿಸಿಕೊಂಡ
ಮೆಣಸಿನಕಾಯಿಗೆ ಬೆಲೆ ಕಡಿಮೆ ಸಿಗುತ್ತದೆ.

ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂದು ಶಾನವಾಸಪುರ ಗ್ರಾಮದ ಮೆಣಸಿನಕಾಯಿ ಬೆಳೆಗಾರ ಪತ್ರೇಶ್‌ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next