ನವದೆಹಲಿ: ಕೆಲವು ದಿನಗಳಿಂದ ಸುರಿಯುತ್ತಿರುವ ಮುಸಲಧಾರೆ ಮಳೆಗೆ ಮಹಾರಾಷ್ಟ್ರದಲ್ಲಿ 16 ಜನರು ಸಾವಿಗೀಡಾಗಿದ್ದಾರೆ. ಕೊಲಾಪುರ, ಪುಣೆ, ಸತಾರಾ, ಸಾಂಗ್ಲಿ, ಸೋಲಾ ಪುರ ಜಿಲ್ಲೆಗಳಲ್ಲಿ ಸುಮಾರು 1.32 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹ ಪೀಡಿತ ಸ್ಥಳಗಳ ಸಮೀಕ್ಷೆಯನ್ನು ಸಿಎಂ ದೇವೇಂದ್ರ ಫಡ್ನವಿಸ್ ನಡೆಸಿದ್ದಾರೆ.
ತೀವ್ರ ಮಳೆ ಬಾಧೆಗೆ ಸಿಲುಕಿರುವ ಛತ್ತೀಸ್‌ಗಡದ ದಕ್ಷಿಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಡಿಶಾದ ಮಲ್ಕನ್‌ಗಿರಿ, ರಾಯಗಢ, ಕೊರಾಪಟ್, ಕಂದಮಾಲ್ ಹಾಗೂ ಗಜಪತಿ ಜಿಲ್ಲೆಗಳಲ್ಲಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಇದೇ ವೇಳೆ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗಿ ಪ್ರವಾಹದ ಸ್ಥಿತಿ ಉಂಟಾಗಿದೆ. ಮುಂದಿನ 2 ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಮೇಘ ಸ್ಫೋಟದಿಂದಾಗಿ ಪ್ರವಾಹ ಉಂಟಾಗಿದೆ. ಆಂಧ್ರಪ್ರದೇಶದ ಪ್ರಮುಖ ನದಿಗಳಲ್ಲಿಯೂ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಕೇರಳದಲ್ಲಿ ತ್ರಿಶೂರು, ಪಾಲಕ್ಕಾಡ್, ವಯನಾಡ್, ಕಣ್ಣೂರು, ಕಾಸರಗೋಡು, ಇಡುಕ್ಕಿ, ಮಲಪ್ಪುರಂ, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಆ. 10ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.