Advertisement

ದ.ಕ. ಜಿಲ್ಲೆಯಲ್ಲಿ ಕೆಲಸ ಮಾಡಲು ಸಾಕಷ್ಟಿದೆ: ಕೋಟ

02:24 AM Sep 19, 2019 | mahesh |

ಕೋಟ: ಉಡುಪಿ ಜಿಲ್ಲೆಯ ಐವರು ಶಾಸಕರಿಗೆ ಅವರವರ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ಮುಖ್ಯ ಮಂತ್ರಿಗಳನ್ನು ಭೇಟಿಯಾ ಗಿರ ಬಹುದೇ ಹೊರತು ನನಗೆ ಜಿಲ್ಲೆಯ ಉಸ್ತುವಾರಿ ಸ್ಥಾನ ತಪ್ಪಿಸಲು ಭೇಟಿ ಯಾಗಿದ್ದಾರೆ ಎನ್ನುವ ಭಾವನೆ ನನಗಿಲ್ಲ ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು ಮಂಗಳವಾರ ಚೇಂಪಿಯಲ್ಲಿ ವಿಶ್ವಕರ್ಮ ಯಜ್ಞ ಮಹೋತ್ಸವಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದ 30 ಜಿಲ್ಲೆಗಳ ಉಸ್ತುವಾರಿಯನ್ನು 16 ಸಚಿವರಿಗೆ ಹಂಚಬೇಕಾ ಗಿರುವುದರಿಂದ ಒಂದಷ್ಟು ಸಚಿವರಿಗೆ ಅಕ್ಕ-ಪಕ್ಕದ ಜಿಲ್ಲೆಯ ಹೊಣೆಗಾರಿಕೆ ನೀಡಲಾಗಿದೆ. ಇದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು ಯಾವುದೇ ಕಾರಣಕ್ಕೆ ಪ್ರಶ್ನಿಸಲಾರೆ; ನೀಡಿದ ಜವಬ್ದಾರಿಯನ್ನು ಪ್ರೀತಿಯಿಂದ ಸ್ವೀಕರಿಸಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

ಅಭಿವೃದ್ಧಿಗೆ ಸಾಕಷ್ಟು ಅವಕಾಶವಿರುವ ರಾಜ್ಯದ ಜಿಲ್ಲೆಗಳಲ್ಲಿ ಬೆಂಗಳೂರಿನ ಅನಂತರದ ಸ್ಥಾನ ದ.ಕ. ಜಿಲ್ಲೆಗಿದೆ. 250 ಗ್ರಾ.ಪಂ.ಗಳಿವೆ. ನಮ್ಮದೇ ಪಕ್ಷದ 7 ಮಂದಿ ಶಾಸಕರು, ಸಂಸದರಿದ್ದಾರೆ. ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯ ದೇಗುಲಗಳಿದ್ದು ಮುಜರಾಯಿ ಸಚಿವನಾಗಿರುವುದರಿಂದ ಅವುಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ.

ಅನೇಕ ಕಿರುಬಂದರು, ಬೃಹತ್‌ ಬಂದರುಗಳಿದ್ದು ಅವುಗಳನ್ನು ಅಭಿವೃದ್ಧಿ ಮಾಡುತ್ತೇನೆ. ಮೀನುಗಾರಿಕೆ ಅಭಿವೃದ್ಧಿಗೆ, ಬೋಟ್‌ ಹೌಸ್‌ಗಳ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ ಎಂದು ಹೇಳಿದರು.

ಒಟ್ಟಾಗಿ ದುಡಿಯುವ
ಉಡುಪಿ ಜಿಲ್ಲೆಯ ಉಸ್ತುವಾರಿ ಸ್ಥಾನ ತಪ್ಪಿದಕ್ಕೆ ಕೆಲವು ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ ಕುರಿತು ಪ್ರಶ್ನಿಸಿದಾಗ, ಈ ವಿಚಾರ ನನಗೆ ತಿಳಿದಿಲ್ಲ. ಆದರೆ ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಒಂದಾಗಿ ಕೆಲಸಗಳನ್ನು ಮಾಡಬೇಕೆಂದು ಬಯಸುತ್ತೇನೆ ಎಂದರು.

Advertisement

ಉಡುಪಿಯನ್ನು ಮರೆಯಲಾರೆ
ನನಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಸ್ಥಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಈ ಜಿಲ್ಲೆಯನ್ನು ಮರೆಯಲಾರೆ. ನನ್ನ ಖಾತೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಮರಳು ಸಮಸ್ಯೆಗೆ ಸಾಕಷ್ಟು ಹೋರಾಟ ನಡೆಸಿದ್ದು ಒಂದು ವಾರದಲ್ಲಿ 171 ಗುತ್ತಿಗೆದಾರರಿಗೆ ಮರಳು ಪರವಾನಿಗೆ ನೀಡಿ ಮನೆಬಾಗಿಲಿಗೆ ಮರಳು ದೊರೆಯುವಷ್ಟು ಕೆಲಸ ಕಾರ್ಯಗಳಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.