ನಗರ: ಮಂಗಳವಾರ ಪುತ್ತೂರಿನಾದ್ಯಂತ ಭಾರೀ ಮಳೆ ಸುರಿದಿದೆ. ಬೆಳಗ್ಗೆಯಿಂದಲೇ ಮಳೆ ಇತ್ತಾದರೂ ನಡುವೆ ಸ್ವಲ್ಪ ಬಿಡುವು ಪಡೆದುಕೊಂಡಿತು. 11 ಗಂಟೆ ಸುಮಾರಿಗೆ ಮತ್ತೆ ಶುರುವಾದ ಮಳೆ, ನಿರಂತರವಾಗಿ ಸುರಿಯಿತು. ಪುತ್ತೂರು ಗ್ರಾಮೀಣ ಭಾಗವೇ ಆಗಿರುವುದರಿಂದ, ಮಳೆ ಹಾನಿ ದೊಡ್ಡ ಪ್ರಮಾಣದಲ್ಲಿ ಸಂಭವಿಸುವುದಿಲ್ಲ. ಸಾಮಾನ್ಯವಾಗಿ ಕಂಡುಬರುವಂತೆ ಗುಡ್ಡ ಕುಸಿತ, ಚರಂಡಿ ಬ್ಲಾಕ್ ಮೊದಲಾದ ಸಮಸ್ಯೆಗಳು ಆಗಿವೆ.
ಬೈಪಾಸ್ ಜೈನ ಭವನ ಬಳಿ ಗುಡ್ಡ ಜರಿದು, ವಿಠ್ಠಲ ಪ್ರಭು ಅವರ ಮನೆಗೆ ಹೋಗುವ ರಸ್ತೆ ಬ್ಲಾಕ್ ಆಗಿದೆ. ಗುಡ್ಡದ ಮೇಲ್ಭಾಗದಲ್ಲಿ ಇವರ ಮನೆಯಿದೆ. ಮಣ್ಣು ಸಂಪೂರ್ಣ ಬಿದ್ದಿರುವುದರಿಂದ ದಾರಿ ಇಲ್ಲದಂತಾಗಿದೆ. ಇನ್ನು ಪರ್ಯಾಯ ದಾರಿಯ ವ್ಯವಸ್ಥೆ ಆಗಬೇಕಷ್ಟೇ. ಆದರೆ ಹೆದ್ದಾರಿ ಸಂಪರ್ಕಕ್ಕೆ ತೊಡಕಾಗಿಲ್ಲ.
ಪುತ್ತೂರು ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಚರಂಡಿ ಬ್ಲಾಕ್ ಆಗಿ, ನೀರು ರಸ್ತೆಯಲ್ಲೇ ನಿಂತಿದೆ. ಸಮರ್ಪಕ ಚರಂಡಿ ಇಲ್ಲದೇ ಇರುವುದರಿಂದ ನೀರು ಹರಿವಿಗೆ ಅಡ್ಡಿಯಾಗಿದೆ. ಒಂದು ಕಡೆ ಸರಕಾರಿ ಆಸ್ಪತ್ರೆ, ಇನ್ನೊಂದು ಕಡೆ ಉಪನೋಂದಣಿ ಕಚೇರಿ ಇದೆ. ಇದರ ನಡುವಿನಲ್ಲಿ ಬ್ಲಾಕ್ ಆದ ಚರಂಡಿ ಇದೆ. ಇದೇ ಸರಕಾರಿ ಆಸ್ಪತ್ರೆ ಮುಂಭಾಗದ ಚರಂಡಿಯಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಪರಿಣಮಿಸುತ್ತಿದೆ.
ರೈಲ್ವೇ ಸಂಪರ್ಕ ರಸ್ತೆ
ಪ್ರತಿವರ್ಷದಂತೆ ರೈಲ್ವೇ ಸಂಪರ್ಕ ರಸ್ತೆ ಸಂಚಾರ ಮತ್ತೆ ದುಸ್ತರವಾಗಿದೆ. ಹಾರಾಡಿ ಕಡೆಯಿಂದ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಬರುವುದೇ ಕಷ್ಟ ಎಂಬಂತಾಗಿದೆ. ಸ್ವಲ್ಪ ಭಾಗಕ್ಕೆ ಡಾಮರು ಹಾಕಲಾಗಿದೆ. ಆದರೆ ಉಳಿದ ರಸ್ತೆ ಹೊಂಡ – ಗುಂಡಿಗಳಿಂದಕೂಡಿದೆ. ಇದೀಗ ಮಳೆನೀರು ಹೊಂಡದಲ್ಲಿ ನಿಂತು, ಆಳ ಗೊತ್ತಾಗುತ್ತಿಲ್ಲ. ರಿಕ್ಷಾ, ಕಾರು ಸಹಿತ ಘನ ವಾಹನಗಳು ಹೇಗೋ ಬರುತ್ತವೆ. ಆದರೆ ಬೈಕ್, ಸ್ಕೂಟರ್ ಸಂಚಾರ ಕಷ್ಟ.