Advertisement

ಮಲೆನಾಡು, ಕರಾವಳಿಯಲ್ಲಿ ಮಳೆ ಆರ್ಭಟ​​​​​​​

06:00 AM Aug 13, 2018 | Team Udayavani |

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ, ಕೊಡಗಿನಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಇನ್ನೂ ಮೂರು ದಿನ ಭಾರೀ ಮಳೆ ಆಗುವ ಸಾಧ್ಯತೆಯಿದೆ. ಈ ಮಧ್ಯೆ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಭಾನುವಾರ ಬೆಳಗ್ಗೆ ಅತಿ ಹೆಚ್ಚು 200 ಮಿ.ಮೀ.ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ ವ್ಯಕ್ತಿಯೊಬ್ಬ ನೀರು ಪಾಲಾಗಿದ್ದಾನೆ. ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳು ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಕೆಲ ತಾಲೂಕುಗಳ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

Advertisement

ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಜಲಾಶಯದಿಂದ 16 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 40 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ನೀರಿನ ಮಟ್ಟ 1811.60 ಅಡಿಗಳಿಗೆ ಏರಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮತ್ತೂಮ್ಮೆ ಮುಳುಗುವ ಹಂತ ತಲುಪಿದೆ. ಕುದುರೆಮುಖ ವ್ಯಾಪ್ತಿಯಲ್ಲಿ ಧರೆಗಳು ಉರುಳಿದ್ದು, ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 2 ಗಂಟೆಗೂ ಹೆಚ್ಚು ಸಮಯ ಸಂಚಾರ ಸ್ಥಗಿತಗೊಂಡಿತ್ತು. ತುಂಗಭದ್ರಾ ಜಲಾಶಯದಿಂದಲೂ 1 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿ ತೀರದ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹದ ಭೀತಿ ಕಾಡುತ್ತಿದೆ. 

ಕರಾವಳಿಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ಕಾಲುಸಂಕ ದಾಟುತ್ತಿದ್ದಾಗ ನದಿಗೆ ಬಿದ್ದು, ಬೋಯ್‌ದಾಸ್‌ (65) ಎಂಬುವರು ನೀರು ಪಾಲಾಗಿದ್ದಾರೆ. ಕಾರ್ಕಳದಲ್ಲಿ ಶಾಲಾ ಕಟ್ಟಡವೊಂದು ಕುಸಿದು ಬಿದ್ದಿದೆ. ಹೊಸಮಠ ಸೇತುವೆ ಜಲಾವೃತಗೊಂಡಿದ್ದು, ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ತೊಡಕಾಗಿದೆ. ನೇತ್ರಾವತಿ, ಕುಮಾರಧಾರಾ, ಪಯಸ್ವಿನಿ ನದಿ, ಸೀರೆ ಹೊಳೆಗಳು ತುಂಬಿ ಹರಿಯುತ್ತಿವೆ. ಇದೇ ವೇಳೆ, ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ಆಳಸಮುದ್ರ ಬೋಟ್‌ಗಳು ಶನಿವಾರ ಮುಳುಗಡೆಗೊಂಡಿವೆ. ಒಂದು ಬೋಟ್‌ ಗಂಗೊಳ್ಳಿ ಸಮೀಪ ಮತ್ತೂಂದು ಬೋಟ್‌ ಭಟ್ಕಳ ಸಮೀಪ ಸಮುದ್ರದಲ್ಲಿ ಮುಳುಗಡೆಯಾಗಿವೆ. ಎರಡು ಬೋಟ್‌ಗಳಲ್ಲಿ ಒಟ್ಟು 16 ಮಂದಿ ಮೀನುಗಾರರಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ. ಆ.9ರಂದು ರಾತ್ರಿ ಮಲ್ಪೆ ಮೀನುಗಾರಿಕೆ ಬಂದರಿನಿಂದ ಈ ಎರಡು ಬೋಟುಗಳು ಮೀನುಗಾರಿಕೆಗೆ ತೆರಳಿದ್ದವು.

ಕೇರಳದ ವೈನಾಡಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಕಪಿಲಾ ನದಿಯಲ್ಲಿ ಪ್ರವಾಹ ಬಂದಿದೆ. ಇದರಿಂದಾಗಿ ನಂಜನಗೂಡು ತಾಲೂಕಿನ ಬೊಕ್ಕಳ್ಳಿ ಗ್ರಾಮ ಜಲಾವೃತವಾಗಿದ್ದು, ಇಲ್ಲಿನ 14ಕ್ಕೂ ಹೆಚ್ಚು ಕುಟುಂಬಗಳಿಗೆ ಗ್ರಾಮ ಸಮೀಪದ ಸರ್ಕಾರಿ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ.

ಇಂದು ಶಾಲೆಗಳಿಗೆ ರಜೆ: ಭಾರೀ ಮಳೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕುಗಳು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕುಗಳು ಹಗೂ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

Advertisement

ಹಲವು ರಾಜ್ಯಗಳಲ್ಲಿ ಮಳೆಯ ಅಬ್ಬರ
ಕರ್ನಾಟಕ, ಕೇರಳ ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಕೆಲವೆಡೆ ಹಾನಿ ಸಂಭವಿಸಿದೆ. ಕೇರಳದಲ್ಲಿ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿ ದುರಂತದಲ್ಲಿ ಭಾನುವಾರ ಒಂದೇ ದಿನ ಐವರು ಅಸುನೀಗಿದ್ದಾರೆ. ಒಡಿಶಾದಲ್ಲಿ ಧಾರಾಕಾರ ಮಳೆಯಾಗಿ ಜನಜೀವನ ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಪಂಜಾಬ್‌ನಲ್ಲಿಯೂ ಮಳೆಯಾಗಿದೆ. ಜಮ್ಮುವಿನ ಮಚಲಿಯಾನ್‌ ಗ್ರಾಮದಲ್ಲಿ ಹಠಾತ್‌ ಪ್ರವಾಹ ಸಂಭವಿಸಿ ಮನೆಗಳು ಕೊಚ್ಚಿಕೊಂಡು ಹೋಗಿವೆ. 15ರವರೆಗೂ ವರುಣನ ಅಬ್ಬರ ತೀವ್ರವಾಗಿರಲಿದೆ ಎಂದು ಶನಿವಾರವೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next