Advertisement

Vegetables: ಬೆಂಗಳೂರಿಗೆ ಪೂರೈಕೆಯಾಗುವ ತರಕಾರಿಯಲಿ ಭಾರ ಲೋಹ ಪತ್ತೆ

10:11 AM Nov 07, 2023 | Team Udayavani |

ಬೆಂಗಳೂರು: ಬೆಂಗಳೂರಿಗೆ ಪೂರೈಕೆಯಾಗುತ್ತಿರುವ ತರಕಾರಿಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಭಾರ ಲೋಹಗಳ ಅಂಶ ಇರುವುದನ್ನು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಪತ್ತೆ ಹಚ್ಚಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ವಿಚಾರದ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ನಿಷ್ಕಾಳಜಿ ತೋರುತ್ತಿರುವುದು ದುರದೃಷ್ಟಕರ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌)ಯ ರಾಜ್ಯ ಕಾರ್ಯದರ್ಶಿ ಇಂದಿರಾ ರೆಡ್ಡಿ ಹೇಳಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬೆಂಗಳೂರಿನ ಕೊಳಚೆ ನೀರನ್ನು ಕೆ.ಸಿ.ವ್ಯಾಲಿ, ಎಚ್‌.ಎನ್‌. ವ್ಯಾಲಿ ಯೋಜನೆಯ ಮೂಲಕ ಸೂಕ್ತ ರೀತಿ ಯಲ್ಲಿ ಶುದ್ಧೀಕರಿಸದೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲಾಗುತ್ತಿದೆ. ಈ ನೀರು ಅಲ್ಲಿನ ಜನರಿಗೆ ಹಾಗೂ ಈ ಭಾಗದಲ್ಲಿ ಬೆಳೆಯುವ ಸೊಪ್ಪು, ತರಕಾರಿಯನ್ನು ಅವಲಂಬಿಸಿರುವ ಬೆಂಗಳೂರಿನ ಜನತೆಗೆ ಶಾಪವಾಗಿ ಪರಿಣಮಿಸಿದೆ. ಒಂದು ರೀತಿಯಲ್ಲಿ ಸರ್ಕಾರವೇ ಮುಂದೆ ನಿಂತು ಜನರಿಗೆ ವಿಷವುಣಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಲ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಿ: ಎಂಪ್ರಿಯ ಈ ಅಧ್ಯಯನವು 2022ರ ನವೆಂಬರ್‌ನಲ್ಲಿ ಪ್ರಕಟಣೆಯಾಗಿದೆ. ಆದರೆ, ಇದರ ಬಗ್ಗೆ ಸರ್ಕಾರ ಗಮನಹರಿಸದೆ ಹೊಣೆಗೇಡಿತನ ಪ್ರದರ್ಶಿಸಿದೆ. ಈಗ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಬಳಿಕ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆಯು ನಗರದಲ್ಲಿ ಮಾರಾಟವಾಗುತ್ತಿರುವ ತರಕಾರಿಗಳಲ್ಲಿ ವಿಷಕಾರಿ ಅಂಶಗಳ ಬಗ್ಗೆ ಪರೀಕ್ಷೆ ಮಾಡುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ ವಿಷಕಾರಿ ತರಕಾರಿ ಮಾರುವವರ ವಿರುದ್ಧ ಕ್ರಮ ಕೈಗೊಂಡು ಅವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಅದು ಹೇಳಿದೆ.

ಇದು ಹಾಸ್ಯಾಸ್ಪದ. ಈ ಪರಿಸ್ಥಿತಿಗೆ ಕಾರಣವಾಗಿರುವ ಬೆಂಗಳೂರು ಜಲ ಮಂಡಳಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಇಂದಿರಾ ರೆಡ್ಡಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ದೀಪಕ್‌ ಉಪಸ್ಥಿತರಿದ್ದರು.

ಕೊಳಚೆ ನೀರು ಸಂಸ್ಕರಣೆಯಲ್ಲಿ ಅಕ್ರಮ: ಕೆಆರ್‌ಎಸ್‌ ಪಕ್ಷ ಸಂಗ್ರಹಿಸಿರುವ ದಾಖಲೆಗಳಿಂದ ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಸಂಸ್ಕರಿಸಲು ಸ್ಥಾಪಿಸಲಾಗಿರುವ ಸಂಸ್ಕರಣಾ ಘಟಕಗಳ ಸ್ಥಾಪನೆಯಲ್ಲಿ, ಕಾರ್ಯನಿರ್ವಹಣೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಕಂಡುಬರುತ್ತದೆ. ಕೊಳಚೆ ನೀರು ಸಂಸ್ಕರಣಾ ಘಟಕಗಳಲ್ಲಿ ಹಲವು ಲೋಪಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮುಚ್ಚಿಹಾಕಲಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌)ಯ ರಾಜ್ಯ ಕಾರ್ಯದರ್ಶಿ ಇಂದಿರಾ ರೆಡ್ಡಿ ತಿಳಿಸಿದ್ದಾರೆ.

Advertisement

ಎಸ್‌ಟಿಪಿಯ ನಿರ್ಮಾಣ ಮತ್ತು ಕಾರ್ಯನಿರ್ವಹಣೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು. ಕೊಳಚೆ ನೀರಿನ ತೃತೀಯ ಹಂತದ ಸಂಸ್ಕರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು ಮತ್ತು ತಕ್ಷಣವೇ ಪಾರದರ್ಶಕ ರೀತಿಯಲ್ಲಿ ಈ ಭಾಗದ ಕೆರೆಗಳ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕೆಲಸ ನಡೆಸಬೇಕು ಎಂದು ಇಂದಿರಾ ರೆಡ್ಡಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next