Advertisement

ಕಾವೇರಿದ ಬಿಸಿಲು; ರಾಜಕಾರಣಿಗಳಿಗೆ ದಿಗಿಲು

04:21 AM Apr 03, 2019 | Team Udayavani |

ರಾಯಚೂರು: ಕಳೆದ ವರ್ಷ ವಿಧಾನಸಭಾ ಚುನಾವಣೆಯನ್ನು ರಣಬಿಸಿಲಲ್ಲೇ ಎದುರಿಸಿದ್ದ ಹೈದರಾಬಾದ್‌-ಕರ್ನಾಟಕ ಭಾಗದ ಜನತೆ ಈ ಬಾರಿ ಲೋಕಸಭಾ ಚುನಾವಣೆಯನ್ನೂ ಅಂಥದ್ದೇ ಸ್ಥಿತಿಯಲ್ಲಿ ಎದುರಿಸುವಂತಾಗಿದೆ. ಹೈ-ಕ ಜಿಲ್ಲೆಗಳಲ್ಲಿ ಈಗಾಗಲೇ ಬಿಸಿಲಿನ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟಿದ್ದು, ಚುನಾವಣೆ ವೇಳೆಗೆ ಅದು 42-44 ಡಿಗ್ರಿ ಆಸುಪಾಸು ತಲುಪುವ ಸಾಧ್ಯತೆ ಇದೆ. ಬಿಸಿಲಿನ ಪ್ರತಾಪಕ್ಕೆ ಹೆದರಿ ಏಪ್ರಿಲ್‌, ಮೇನಲ್ಲಿ ಹೈ-ಕ ಭಾಗದ ಸರ್ಕಾರಿ ಕಚೇರಿಗಳ ಸಮಯ ಬದಲಿಸಲಾಗುತ್ತದೆ. ಅಲ್ಲದೆ, ಸರ್ಕಾರವೇ ಈ ಭಾಗದ ಬಿಸಿಲಿನ ಸಮಸ್ಯೆ ಅರಿತು ಹೆಲ್ಮೆಟ್‌ ಧರಿಸಲು ವಿನಾಯಿತಿ ನೀಡಿದೆ. ಇಂತಹ ಹೊತ್ತಲ್ಲಿಯೇ ಲೋಕಸಭಾ ಚುನಾವಣಾ ಅಖಾಡ ಸಿದ್ಧಗೊಳ್ಳುತ್ತಿದ್ದು, ಅ ಧಿಕಾರಿಗಳಿಗೆ,
ಅಭ್ಯರ್ಥಿಗಳಿಗೆ, ಅವರ ಬೆಂಬಲಿಗರಿಗೆ ಸಂಕಟ ಎದುರಾಗಿದೆ.

Advertisement

0.8 ಡಿಗ್ರಿ ತಾಪಮಾನ ಹೆಚ್ಚಳ: ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ 0.5ರಿಂದ 0.8 ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಹವಾಮಾನ ತಜ್ಞರು. ಕಳೆದ ಮುಂಗಾರು, ಹಿಂಗಾರು ಸಂಪೂರ್ಣ
ಕೈಕೊಟ್ಟಿರುವ ಪರಿಣಾಮ ಉಷ್ಣಾಂಶದ ಪ್ರಮಾಣ ಕಡಿಮೆ ಆಗಿಲ್ಲ. ಅದು ಚಳಿಗಾಲದ ಮೇಲೂ ಪರಿಣಾಮ ಬೀರಿದ್ದು, ಈ ಬಾರಿ ಹೇಳಿಕೊಳ್ಳುವ ಚಳಿ ಇರಲಿಲ್ಲ. ಒಂದೆರಡು ಬಾರಿ ಚಂಡಮಾರುತಗಳ ತಂಪುಗಾಳಿ ಬೀಸಿ ಚಳಿಯ ಅನುಭವ ಆಗಿದ್ದು ಬಿಟ್ಟರೆ ಚಳಿಗಾಲ ಅಷ್ಟೊಂದು
ಪರಿಣಾಮಕಾರಿಯಾಗಿರಲಿಲ್ಲ. ಬೇಸಿಗೆ ಮೇಲೂ ಅದರ ಪರಿಣಾಮ ಬೀರುವ ಸಾಧ್ಯತೆ ಇದ್ದು, 0.5ರಿಂದ 0.8 ಡಿಗ್ರಿ ಸೆಲ್ಸಿಯಸ್‌ ಸರಾಸರಿ
ಬಿಸಿಲಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಬಾರಿ ಏಪ್ರಿಲ್‌ನಲ್ಲಿ ಸರಾಸರಿ ಬಿಸಿಲಿನ ಪ್ರಮಾಣ 49 ಡಿಗ್ರಿ ಸೆಲ್ಸಿಯಸ್‌ ಆಗಿತ್ತು. ಈ ಬಾರಿ ಅದು ಇನ್ನೂ ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ.

ಸಂಜೆ ಹೊತ್ತಲ್ಲಿ ನಡೆಯಲಿವೆ ಸಮಾವೇಶಗಳು: ಬಿಸಿಲಿನ ಪ್ರಖರತೆಗೆ ಜನರನ್ನು ಕರೆ ತರುವುದು ಸುಲಭವಲ್ಲ ಎಂಬುದು ರಾಜಕೀಯ ನಾಯಕರಿಗೆ ಮನವರಿಕೆ ಆಗಿದೆ. ಹೀಗಾಗಿ, ಸಮಾವೇಶ, ಸಭೆ ಸಮಾರಂಭಗಳನ್ನು, ಪ್ರಚಾರ ಕಾರ್ಯಗಳನ್ನು ಸಂಜೆ ಹೊತ್ತಲ್ಲಿಯೇ ಹೆಚ್ಚಾಗಿ ನಡೆಸುವ ಯೋಜನೆ ರೂಪಿಸುತ್ತಿದ್ದಾರೆ. ಇದರಿಂದ ಖರ್ಚೂ ಕಡಿಮೆ ಆಗಲಿದೆ ಎಂಬ ಲೆಕ್ಕಾಚಾರ ಅಭ್ಯರ್ಥಿಗಳದ್ದು.

ಕರಾವಳಿಯಲ್ಲೂ ಸೆಕೆಯ ಕಿರಿಕಿರಿ
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲೂ ಸೆಕೆ ಏರುತ್ತಿದ್ದು, ಮಧ್ಯಾಹ್ನದ ವೇಳೆ 36 ಡಿ.ಸೆ.ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಹೀಗಾಗಿ, ನಗರಗಳ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನದ
ವೇಳೆ ಜನ ಸಂಚಾರ ಕೂಡ ವಿರಳವಾಗಿರುತ್ತವೆ. ಈ ಭಾಗದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಏರಿದ್ದು, ಬಿಸಿಲಿನ ತಾಪಕ್ಕೆ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಹೈರಾಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ರೀತಿಯ ಉರಿ ಬಿಸಿಲು ಕರಾವಳಿಯಲ್ಲಿತ್ತು. 2017ರ ಮಾ.2ರಂದು 39.6 ಡಿ.ಸೆ.ಗರಿಷ್ಠ ತಾಪಮಾನ ದಾಖಲಾಗಿತ್ತು. ಇದಾದ ಬಳಿಕ, 2016ರಲ್ಲಿಯೂ ಮಾ.12ರಂದು 36.8 ಡಿ.ಸೆ. ತಾಪಮಾನ ದಾಖಲಾಗಿತ್ತು. ಇದೀಗ 2019ರಲ್ಲಿಯೂ ಸುಮಾರು 37 ಡಿ.ಸೆ.ನಷ್ಟು ತಾಪಮಾನ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ
ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಚುನಾವಣೆ ಹೊತ್ತಲ್ಲಿ 43 ಡಿಗ್ರಿ ತಾಪಮಾನ?
ಕಳೆದ ಬಾರಿ ಮೇನಲ್ಲಿ 43 ಡಿಗ್ರಿ ಸೆಲ್ಸಿಯಸ್‌ ಅತಿ ಹೆಚ್ಚು ಬಿಸಿಲಿನ ಪ್ರಮಾಣ ದಾಖಲಾಗಿತ್ತು. ಆದರೆ, ಈ ಬಾರಿ ಈಗಲೇ 41 ಡಿಗ್ರಿ ಸೆಲ್ಸಿಯಸ್‌ ಗಡಿ ತಲುಪಿರುವ ಕಾರಣ ಚುನಾವಣೆ ಹೊತ್ತಿಗೆ 42ರಿಂದ 43 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಹವಾಮಾನ ತಜ್ಞರು.

Advertisement

ಕಲಬುರಗಿಯಲ್ಲಿ 42.8 ಡಿ.ಸೆ. ತಾಪಮಾನ: ಮಂಗಳವಾರ ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 42.8 ಡಿ.ಸೆ.ತಾಪಮಾನ ದಾಖಲಾಯಿತು.

ಕಳೆದ ವರ್ಷ ಮಳೆಗಾಲ ಸರಿಯಾಗಿ ಆಗದ ಪರಿಣಾಮ ಈ ಬಾರಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಮಾರ್ಚ್‌ನ ಸರಾಸರಿ ಬಿಸಿಲಿನ ಪ್ರಮಾಣ ಈಗಲೇ ದಾಖಲಾಗಿದೆ. ಏಪ್ರಿಲ್‌ನಲ್ಲಿ ಅದು ಮತ್ತಷ್ಟು ಹೆಚ್ಚಾಗಬಹುದು. ಮೇನಲ್ಲಿ ದಾಖಲಾಗುತ್ತಿದ್ದ 42ರಿಂದ 43 ಡಿಗ್ರಿ ಸೆಲ್ಸಿಯಸ್‌ ಬಿಸಿಲು ಈ ಬಾರಿ ಏಪ್ರಿಲ್‌ನಲ್ಲಿಯೇ ದಾಖಲಾಗಬಹುದು.
●ಸತ್ಯನಾರಾಯಣ, ಸಹ ಸಂಶೋಧನಾ ನಿರ್ದೇಶಕ, ಹವಾಮಾನ ವಿಭಾಗ, ಕೃಷಿ ವಿವಿ

●ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next