Advertisement
ಮುಖ್ಯಮಂತ್ರಿ ಯಡಿಯೂರಪ್ಪ ನವರು ಮಾರ್ಚ್ 5ರಂದು 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ವಿತ್ತ ಖಾತೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ಮಂಡಿ ಸಲಿರುವ ಪೂರ್ಣಾವಧಿ ಬಜೆಟ್ ಇದು. ಈಗಾ ಗಲೇ ಬಜೆಟ್ ಬಗ್ಗೆ ಹಲವಾರು ಸರಕಾರಿ ಇಲಾಖೆ, ವ್ಯಾಪಾರೋದ್ಯಮ, ಸಂಘ ಸಂಸ್ಥೆ, ಬುದ್ಧಿ ಜೀವಿಗಳೊಡನೆ ಪೂರ್ವಭಾವಿ ಸಮಾಲೋಚನೆ ನಡೆಸಿದ್ದಾರೆ.
Related Articles
Advertisement
ಅಲ್ಲದೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯ ಸರಕಾರ ಕೇಳಿದ ಮುಂದಿನ ಆರ್ಥಿಕ ವರ್ಷದ ರೂ. 5,495 ಕೋಟಿ ಅನುದಾನ ಕೇಂದ್ರ ಸರಕಾರ ನೀಡಿಲ್ಲ. 15ನೇ ವಿತ್ತೀಯ ಆಯೋಗ ರಾಜ್ಯ ಸರಕಾರಗಳಿಗೆ ತೆರಿಗೆ ಹಂಚುವ ನೀತಿಯಲ್ಲಿ ಶೇ.1 ಕಡಿತ ಮಾಡಿದೆ. ಇದರಿಂದಾಗಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದು ಸ್ವಲ್ಪ ಕಷ್ಟ.
ಒಂದು ರೀತಿಯಲ್ಲಿ ರಾಜ್ಯ ಬಜೆಟ್‌ಗೆ ಅಧಿಕ ಖರ್ಚಿನ ಬಾಬತ್ತುಗಳು ಎಂದರೆ ಜನಪರ ಕಾರ್ಯಕ್ರಮಗಳು. ಈ ವರ್ಷ ಮೀನುಗಾರಿಕೆ ಉದ್ಯಮ ಮತ್ಸ್ಯ ಕ್ಷಾಮದಿಂದ ಕಂಗಾಲಾಗಿದೆ. ಬಂದರು ಅಭಿವೃದ್ಧಿ ಕಾರ್ಯ ನಿಂತಿದೆ. ರೈತರ ಸಾಲ ಮನ್ನಾ ಮಾದರಿಯಲ್ಲಿ ಮೀನುಗಾರರು ಸಾಲ ಮನ್ನಾಕ್ಕೆ ಒತ್ತಾಯಿಸುತ್ತಿದ್ದಾರೆ. ಉತ್ತರ ಕರ್ನಾಟಕ, ಕೊಡಗು, ಮಲೆನಾಡು ಕಡೆ ನೆರೆಹಾವಳಿಯಲ್ಲಿ ಅಲ್ಪಸ್ವಲ್ಪ ಪರಿಹಾರ ತಾತ್ಕಾಲಿಕವಾಗಿ ದೊರೆತಿರುವುದು ಬಿಟ್ಟರೆ ಬೆಳೆಹಾನಿ, ಮನೆ ಹಾನಿ ಇದಕ್ಕೆ ಪರಿಹಾರ ಸಾಲದು. ನೆರೆ ವಿಕೋಪಕ್ಕೆ ಒಂದು ಶಾಶ್ವತ ಯೋಜನೆಯೇ ಬೇಕು.
ಹಾಗೆಯೇ ರಾಜ್ಯ ಸರಕಾರ ನೂರಾರು ಸೌಲಭ್ಯಗಳನ್ನು ಬಡಬಗ್ಗರಿಗೆ ನೀಡಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಿಗುತ್ತಿಲ್ಲ. ಸರಕಾರಿ ಸವಲತ್ತುಗಳನ್ನು ಒಂದೆಡೆ ಸೇರಿಸಿ ಜನರು ಅಲೆದಾಡುವುದನ್ನು ತಪ್ಪಿಸುವುದು ಒಳ್ಳೆಯದು. ಹಾಗೆಯೇ ಗ್ರಾಮೀಣ ರಸ್ತೆ, ಕುಡಿಯುವ ನೀರು ಬಗ್ಗೆ ಬಜೆಟ್ ಒತ್ತು ಕೊಡಬೇಕು. ಜೊತೆಗೆ ಉದ್ಯೋಗಾವಕಾಶ, ಖಾಲಿ ಇರುವ ಸರಕಾರಿ ನೌಕರಿಗಳ ಭರ್ತಿ ತ್ವರಿತಗತಿಯಲ್ಲಿ ಆಗಬೇಕು.
ಪ್ರತಿ ವರ್ಷ ರಾಜ್ಯ ಬಜೆಟ್ ಗಾತ್ರ ಏರುತ್ತಲೇ ಇರುತ್ತದೆ. ಹೊಸ ಯೋಜನೆಗಳಿಗೆ ಬಜೆಟ್‌ನ ದೊಡ್ಡ ಪಾಲು ಖರ್ಚಾಗುತ್ತದೆ. ಆದರೆ ಸಕಾಲದಲ್ಲಿ ಅವುಗಳು ಮುಗಿಯದೆ, ನಿಖರವಾದ ಕಾಲಮಿತಿ ಇಲ್ಲದೆ ಮತ್ತೆ ಹೆಚ್ಚುವರಿ ಹಣ ಖರ್ಚು ಮಾಡುವುದು, ಇಲ್ಲವೇ ಮುಂದಿನ ಬಜೆಟ್‌ಗೆ ಹೆಚ್ಚುವರಿ ಅನುದಾನಕ್ಕಾಗಿ ಮುಂದೂಡುವುದು ನಡೆ ಯುತ್ತಿದೆ. ಇದರಿಂದ ಅನವಶ್ಯಕವಾಗಿ ಕೊರತೆ ಬಜೆಟ್ ಸೃಷ್ಟಿಯಾಗುತ್ತಿದೆ. ಮುಖ್ಯಮಂತ್ರಿಗಳು ಇಂತಹ ಕ್ಲಿಷ್ಟ ವಿಷಯಗಳಿಗೆ ನೀತಿ ನಿರೂಪಣೆ ಘೋಷಿಸಬೇಕು. ಸರಕಾರಿ ದುಡ್ಡು ಖಾಲಿ ಮಾಡುವ ಅನುಷ್ಠಾನ ಆಗಬಾರದು. ಪೂರಾ ಸಾಲಮನ್ನಾ ಅಲ್ಲದಿದ್ದರೂ ಸುಸ್ತಿ ಸಾಲಬಡ್ಡಿ ಮನ್ನಾ ಮಾಡುವ ಯೋಚನೆ ಮುಖ್ಯಮಂತ್ರಿಗಳಿಗೆ ಇದೆ. ಆಯವ್ಯಯದಲ್ಲಿ ಈ ಬಗ್ಗೆ ಘೋಷಣೆ ಹೊರಬೀಳಬಹುದು.
ಇನ್ನು ವಾಸ್ತವಿಕವಾಗಿ ಹೇಳಬೇಕೆಂದರೆ, ರಾಜ್ಯ ಬಜೆಟ್‌ನಲ್ಲಿ ಕಾಲು ಭಾಗ, ಅಂದರೆ ಸುಮಾರು ರೂ.75,000 ಕೋಟಿ ಸರಕಾರಿ ನೌಕರರ ಸಂಬಳಕ್ಕೆ ಖರ್ಚಾಗುತ್ತದೆ. ಹಾಲಿ ಸವಲತ್ತುಗಳನ್ನು ಕಡಿತ ಮಾಡಿದರೆ ರಾಜಕೀಯ ಬಣ್ಣಕ್ಕೆ ತಿರುಗುತ್ತದೆ. ಜನರು ತಿರುಗಿ ಬೀಳುತ್ತಾರೆ. ಆದುದರಿಂದ ಯಡಿಯೂರಪ್ಪನವರು ಆಯವ್ಯಯದಲ್ಲಿ ಎಲ್ಲರಿಗೂ ಖುಷಿ ಕೊಡಲು ಭಾರೀ ಸರ್ಕಸ್ ಮಾಡಬೇಕಾಗಿದೆ. ವಿತ್ತೀಯ ಕೊರತೆಯನ್ನು ನಿಯಮದಂತೆ ಜಿಡಿಪಿಯ ಶೇ.25ರ ಮಿತಿಯೊಳಗಿಟ್ಟುಕೊಳ್ಳಬೇಕಾಗಿದೆ.
– ನಾಗ ಶಿರೂರು