Advertisement

Kinnigoli: ಬಳ್ಕುಂಜೆಯ ಕಬ್ಬಿಗೆ ಭಾರೀ ಬೇಡಿಕೆ, ಬೆಳೆ, ಬೆಲೆಯಲ್ಲಿ ಏರಿಕೆ

07:24 PM Sep 02, 2024 | Team Udayavani |

ಕಿನ್ನಿಗೋಳಿ: ಮೂಲ್ಕಿ ತಾಲೂಕಿನ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಕರ್ನಿರೆ ಪ್ರದೇಶದಲ್ಲಿ 40 ಕ್ಕೂ ಹೆಚ್ಚಿನ ರೈತರು 50 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದು ಈ ಬಾರೀ ದಾಖಲೆಯ ಸಂಖ್ಯೆಯಲ್ಲಿ ಇಳುವರಿ ನೀಡಿದೆ. ಗಣೇಶ ಚತುರ್ಥಿಗೆ ಉಭಯಜಿಲ್ಲೆಗಳಿಗೆ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರುಗಳಿಗೂ ಬಳ್ಕುಂಜೆಯಿಂದ 5 ಲಕ್ಷಕ್ಕೂ ಹೆಚ್ಚು ಕಬ್ಬು ಪೂರೈಕೆಯಾಗಲು ಕಟಾವು ಕಾರ್ಯ ಆರಂಭವಾಗಿದೆ.

Advertisement

ಗಣೇಶ ಚತುರ್ಥಿ ಸಂದರ್ಭ ಉಭಯಜಿಲ್ಲೆಗಳ ಮಾರುಕಟ್ಟೆಗೆ ಅತೀ ಹೆಚ್ಚು ಕಬ್ಬು ಪೂರೈಕೆಯಾಗುವುದು ಇಲ್ಲಿಂದಲೇ. ಈ ಬಾರಿ ಸೆ.7ಕ್ಕೆ ಚೌತಿಯಾದರೆ, ಮರುದಿನ ಕ್ರೈಸ್ತರ ತೆನೆ ಹಬ್ಬ. ಹಾಗಾಗಿ ಚಿಕ್ಕಮಗಳೂರು, ಶಿವಮೊಗ್ಗ, ನಿಡ್ಡೋಡಿ, ಕಿನ್ನಿಗೋಳಿ ಚರ್ಚ್‌ಗಳಿಗೂ ಕಬ್ಬು ಎಂದಿನಂತೆ ನೀಡಲಾಗುತ್ತದೆ.

ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ನಾಟಿ ಪ್ರಾರಂಭಿಸುವ ರೈತ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಚೌತಿ ಹಬ್ಬದ ಸಂದರ್ಭ ಕಟಾವು ಮಾಡುತ್ತಾರೆ. ಕಟಾವಿನ ತನಕ ಈ ಬೆಳೆಗಾಗಿ ಸಾಕಷ್ಟು ಕಷ್ಟ ಪಡಬೇಕು. ಜೂನ್‌ ತಿಂಗಳಲ್ಲಿಯೇ ವ್ಯಾಪಾರಿಗಳು ಬಂದು ಮುಂಗಡ ಹಣ ಕೊಟ್ಟು ಹೋಗುತ್ತಾರೆ. ಕಬ್ಬು ಕಟಾವು ಮಾಡಿ 12 ಕಬ್ಬುಗಳಿಗೊಂದರಂತೆ ಒಂದು ಕಟ್ಟನ್ನು ಮಾಡಿ ಕೊಡಲಾಗುತ್ತದೆ. ಕೆಲವು ರೈತರು ಸ್ವತಃ ತಾವೇ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಕಬ್ಬು ಬೆಳೆಗಾರ ರೋಹಿತ್‌ ಡಿ’ಸೋಜಾ ಬಳ್ಕುಂಜೆ, ಎಲಿಯಾಸ್‌ ಡಿ’ಸೋಜಾ ಬಳ್ಕುಂಜೆ.

ಕೂಲಿ ಕೆಸಲಕ್ಕೆ ಒರಿಸ್ಸಾ ಮೂಲದ ಕೆಲಸಗಾರರು

ಇಲ್ಲಿ ಕೂಲಿ ಕೆಲಸಗಾರರ ಸಮಸ್ಯೆ ಇದ್ದು, ಒರಿಸ್ಸಾದಿಂದ ಬಂದಿರುವ ಇಪ್ಪತ್ತಕ್ಕೂ ಹೆಚ್ಚು ಕಾರ್ಮಿಕರಿಂದ ಕಟಾವು ಕಾರ್ಯ ಮಾಡಿಸಿದ್ದೇವೆ. ಎರಡು ಎಕರೆಯಲ್ಲಿ 22 ಸಾವಿರ ಕಬ್ಬು ಬೆಳೆಸಿದ್ದೇವೆ. ಕಳೆದ ವರ್ಷ 15 ಸಾವಿರ ಕಬ್ಬು ಬೆಳೆಸಿದ್ದೆವು. ಈ ಬಾರಿ ಭತ್ತದ ಬೆಳೆಯ ಬದಲಿಗೆ ಕಬ್ಬನ್ನೇ ಹಾಕಿದ್ದೇವೆ ಎನ್ನುತ್ತಾರೆ ಎಲಿಜಾ ಡಿ’ಸೋಜಾ

Advertisement

ಉತ್ತಮ ಇಳುವರಿ

ಜುಲೈ ತಿಂಗಳಿನಲ್ಲಿ ಮಳೆ ಜಾಸ್ತಿ ಬಂದಿದರಿಂದ ನೆರೆ ಹಾವಳಿ ಸ್ಪಲ್ಪ ತೊಂದರೆಯಾಗಿತ್ತು. ಒಂದು ಎಕರೆಯಷ್ಟು ಜಾಗದಲ್ಲಿ ಕಬ್ಬು ಬೆಳೆದಿದ್ದೇವೆ. 10 ರಿಂದ 13ಸಾವಿರ ಕಬ್ಬು ಇಳುವರಿ ಚೆನ್ನಾಗಿ ಬಂದಿದೆ. ಆದರೆ ಕೆಲಸಗಾರರ ಸಮಸ್ಯೆ ಜಾಸ್ತಿ ಇದೆ. ಒಂದು ಕಬ್ಬಿಗೆ 28 ರೂ. ತನಕ ಹೋಗಿದೆ. ನಾವೇ ಸ್ವತಃ ಪಡುಬಿದ್ರೆಯಲ್ಲಿ ಮಾರಾಟ ಮಾಡುತ್ತೇವೆ. ಕಾರ್ಕಳ, ಕಾಪು, ಕಿನ್ನಿಗೋಳಿ, ಪಡುಬಿದ್ರೆ. ಪಕ್ಷಿಕೆರೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಲಾಭದಾಯಕ ಬೆಳೆ. ಇಲ್ಲಿನ ರೈತರು ವರ್ಷದಿಂದ ವರ್ಷಕ್ಕೆ ಕಬ್ಬು ಬೆಳೆ ಜಾಸ್ತಿ ಬೆಳೆಸುತ್ತಿದ್ದಾರೆ ಎನ್ನುತ್ತಾರೆ ವಿಶ್ವನಾಥ್‌ ಶೆಟ್ಟಿ.

45 ಸೆಂಟ್ಸ್‌ನಲ್ಲಿ ಹತ್ತು ಸಾವಿರದಷ್ಟು ಕಬ್ಬು ಬೆಳೆದಿದ್ದೇವೆ. ಸುಣ್ಣ, ಕೋಳಿಗೊಬ್ಬರ, ಹಟ್ಟಿ ಗೊಬ್ಬರ(ಹುಡಿ) ಶಿಲಾರಂಜಕ, ಸ್ವಲ್ಪ ಪ್ರಮಾಣದಲ್ಲಿ ಎನ್‌ಪಿಕೆ ಬಳಸುತ್ತೇವೆ. ಕಪ್ಪು ಕೀಚಿ ಸ್ವಲ್ಪ ದಾಸ ಕಬ್ಬು ಬೆಳೆಸುತ್ತೇವೆ ಎನ್ನುತ್ತಾರೆ ಕಬ್ಬು ಬೆಳೆಗೆ ಉದಯ ಬಳ್ಕುಂಜೆ.

ಮೋಂತಿ(ತೆನೆ) ಹಬ್ಬಕ್ಕೆ ಮೂಡಿಗೆರೆ, ಮಂಗಳೂರು, ಉಜಿರೆ, ಕಾರ್ಕಳ, ಬಂಟ್ವಾಳ, ಉಡುಪಿ, ಕೊಕ್ಕಡ ಹೀಗೆ ಅನೇಕ ಚರ್ಚುಗಳಿಗೆ ಮೂವತ್ತರಿಂದ ನಲವತ್ತು ಸಾವಿರದಷ್ಟು ಕಬ್ಬು ಹೋಗುತ್ತದೆ. ಇಲ್ಲಿನ ಕಬ್ಬಿಗೆ ರುಚಿ ಜಾಸ್ತಿ. ಹಾಗೆ ಬೇಡಿಕೆ ಹೆಚ್ಚು. ಚೌತಿಗೆ ಕರಾವಳಿಯ ಮಂದಿ ಸಾಕಷ್ಟು ಕಬ್ಬು ಕೊಂಡೊಯ್ಯುವುದರಿಂದ ಕಬ್ಬು ಮಾರಾಟಗಾರರಿಗೂ, ಬೆಳೆಸುವವರಿಗೂ ಉತ್ತಮ ಆದಾಯ ಎನ್ನುತ್ತಾರೆ ರಿಚರ್ಡ್‌.

ಕಬ್ಬಿನ ಜತೆಗೆ ತರಕಾರಿ
ಚೌತಿ ಹಬ್ಬದ ದಿನ ನೋಡಿ ಡಿಸೆಂಬರ್‌ನಲ್ಲಿ ನಾಟಿ ಮಾಡಲು ಬೇರೆಯೇ ಕಬ್ಬು ಬೆಳೆಯಲಾಗುತ್ತದೆ. ನವೆಂಬರ್‌, ಡಿಸೆಂಬರ್‌ನಲ್ಲಿ ಮತ್ತೆ ಬಿತ್ತನೆ ಕಾರ್ಯಮಾಡಲಾಗುತ್ತದೆ. ಪ್ರಾರಂಭದಲ್ಲಿ ಕಬ್ಬು ಬೆಳೆಯ ಜತೆ ಸೌತೆ ಇತ್ಯಾದಿ ತರಕಾರಿ ಬೆಳೆಯುತ್ತಾರೆ. ಸಾವಯವ ರೀತಿಯಲ್ಲಿ ಕಬ್ಬು ಬೆಳೆಯಲಾಗುತ್ತದೆ. ಸುಮಾರು 40 ವರ್ಷಗಳಿಂದ ಇಲ್ಲಿ ಕಬ್ಬು ಬೆಳೆಯಲಾಗುತ್ತಿದೆ.

ಭತ್ತ ಬೇಸಾಯ ಬಿಟ್ಟು ಕಬ್ಬು ಬೆಳೆ
ಬಳ್ಕುಂಜೆಯ ಮಣ್ಣು ಕಬ್ಬು ಬೆಳೆಗೆ ಉತ್ತಮವಾಗಿದೆ. ಇಲ್ಲಿನ ಸುಮಾರು 40ಕ್ಕಿಂತಲೂ ಹೆಚ್ಚು ರೈತರು ಸುಮಾರು 50 ಎಕರೆ ಪ್ರದೇಶದಲ್ಲಿ ಪ್ರತೀ ವರ್ಷ ಕಬ್ಬು ಬೆಳೆಯುತ್ತಾರೆ. ರಾಸಾಯನಿಕ ಗೊಬ್ಬರ ಹಾಕದೆ, ಸುಡುಮಣ್ಣು, ಹಟ್ಟಿ ಗೊಬ್ಬರ ಬಳಸುವುದರಿಂದ ಮತ್ತು ಇಲ್ಲಿನ ಕಬ್ಬು ರುಚಿಯಾಗಿರುವುದರಿಂದ ಇಲ್ಲಿನ ಕಬ್ಬುಗೆ ಪ್ರಸಿದ್ಧಿ ಮತ್ತು ಬೇಡಿಕೆ. ಈ ಬಾರಿ ದಾಸ ಕಬ್ಬಿಗೆ 35 ರೂ., ಕಪ್ಪು ಕಬ್ಬಿಗೆ 30ರೂ. ಮಾರಾಟಗಾರರು ಕಬ್ಬು ಖರೀದಿಸಿದ್ದಾರೆ  ಎನ್ನುತ್ತಾರೆ ಇಲ್ಲಿನ ರೈತರು.

-ರಘನಾಥ್‌ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next