Advertisement

ಕರಾವಳಿಯಾದ್ಯಂತ ವರುಣನ ಅಬ್ಬರ, ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

11:16 AM Aug 07, 2019 | Team Udayavani |

ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಸೋಮವಾರದಿಂದ ಆಶ್ಲೇಷಾ ಮಳೆ ಅಬ್ಬರಿಸುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ ಕಾಣಿಸಿಕೊಂಡಿದೆ. ಬಿರುಸಿನ ಮಳೆಯ ಜತೆ ವೇಗವಾಗಿ ಗಾಳಿ ಕೂಡ ಬೀಸುತ್ತಿರುವುದರಿಂದ ನೂರಾರು ಮರಗಳು ಉರುಳಿದ್ದು, ಜನರು ಆತಂಕಗೊಂಡಿದ್ದಾರೆ.

Advertisement

ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಕೊಡಗು ಜಿಲ್ಲೆಗಳಲ್ಲಿ ಸೋಮವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರ ಅದು ಇನ್ನಷ್ಟು ಬಿರುಸಾಗಿದೆ. ಮಳೆಯೊಂದಿಗೆ ವೇಗವಾಗಿ ಗಾಳಿ ಬೀಸಿ ಸಾವಿರಾರು ಮರಗಳು ಉರುಳಿವೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು, ನೂರಾರು ವಿದ್ಯುತ್‌ ಕಂಬಗಳು ಧರಾಶಾಯಿಯಾಗಿವೆ.

ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಸಾವಿರಾರು ಎಕರೆ ಕೃಷಿ ಪ್ರದೇಶ ಮುಳುಗಡೆಯಾಗಿದೆ. ನದಿ ಬದಿ ಯಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗಿದೆ. ಕೊಡಗಿನಲ್ಲಿ ತ್ರಿವೇಣಿ ಸಂಗಮ ವಾಗಿದ್ದರೆ, ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಿದೆ. ಧರ್ಮಸ್ಥಳದಲ್ಲಿ ನೇತ್ರಾವತಿ ಉಕ್ಕಿ ಹರಿಯುತ್ತಿದೆ. ವಾರಾಹಿ ಯಿಂದ ಹೆಚ್ಚುವರಿ ನೀರು ಬಿಡುವ ಎಚ್ಚರಿಕೆ ನೀಡಲಾಗಿದೆ.

ಎಚ್ಚರಿಕೆ ವಹಿಸಲು ಸೂಚನೆ
ನಿರಂತರ ಮಳೆ ಸುರಿಯುತ್ತಿರುವುದರಿಂದ ಜನರು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ತಗ್ಗು ಪ್ರದೇಶ, ನದಿ ತೀರಕ್ಕೆ ಮಕ್ಕಳು ಹೋಗದಂತೆ ಹೆತ್ತವರು ನೋಡಿಕೊಳ್ಳಬೇಕು. ಮುಂದಿನ ಮೂರು ದಿನ ಮೀನು ಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು. ಸಾರ್ವಜನಿಕರು ಮತ್ತು ಪ್ರವಾಸಿಗರು ಸಮುದ್ರ ತೀರಕ್ಕೆ ತೆರಳಬಾರದು. ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟದ ವರೆಗಿನ ಎಲ್ಲ ಅಧಿಕಾರಿಗಳು ತಮ್ಮ ಕೇಂದ್ರಸ್ಥಾನ ಬಿಟ್ಟು ತೆರಳಬಾರದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬಸ್‌ ರದ್ದು
ಭಾರೀ ಮಳೆಯಿಂದಾಗಿ ಕೆಲವೆಡೆ ರಸ್ತೆ ಜಲಾವೃತ ಗೊಂಡಿ ರುವುದು ಮತ್ತು ಹಾನಿಯಾಗಿರುವುದರಿಂದ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗವು ಮುಂಬಯಿ, ಪುಣೆ, ಕೊಲ್ಲಾಪುರಕ್ಕೆ ತೆರಳುವ ಬಸ್‌ಗಳ ಸಂಚಾರವನ್ನು ಮಂಗಳವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ರವಿವಾರ ಮಂಗಳೂರಿನಿಂದ ಮುಂಬಯಿಗೆ ಹೊರಟಿದ್ದ ಮಲ್ಟಿ ಆ್ಯಕ್ಸೆಸ್‌ ಬಸ್‌ ಅನ್ನು ಮಹಾರಾಷ್ಟ್ರದ ಬಳಿ ಸ್ಥಗಿತಗೊಳಿಸಲಾಗಿದೆ.

Advertisement

ಚಾರ್ಮಾಡಿ ಗುಡ್ಡ ಕುಸಿತ
ಚಾರ್ಮಾಡಿ ಘಾಟಿ ರಸ್ತೆಯ ಅಲ್ಲಲ್ಲಿ ಗುಡ್ಡ ಕುಸಿಯು ತ್ತಿದ್ದು, ಸವಾರರು ಆತಂಕದಿಂದ ಸಾಗುವಂತಾಗಿದೆ. 3, 4 ಮತ್ತು 7ನೇ ತಿರುವಿನಲ್ಲಿ ಆಗಾಗ್ಗೆ ಮಣ್ಣು ಕುಸಿಯುತ್ತಿದ್ದು, ಬದಿಯಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಕೆಲವು ಪ್ರದೇಶಗಳಲ್ಲಿ ಮರ ಕೂಡ ಬಿದ್ದಿದ್ದು, ತೆರವು ಮಾಡಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹೆಬ್ರಿ: ರಾ.ಹೆ. ಬಂದ್‌
ಸೀತಾನದಿ ತುಂಬಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯು  ತ್ತಿರುವುದರಿಂದ ಹೆಬ್ರಿ-ಸೋಮೇಶ್ವರ ರಾ. ಹೆದ್ದಾರಿ  ಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಆಗುಂಬೆಗೆ ಸಂಚರಿಸುತ್ತಿರುವ ವಾಹನಗಳು ಹೆಬ್ರಿ- ಕುಚ್ಚಾರು- ಮಡಾಮಕ್ಕಿ ರಸ್ತೆಯಲ್ಲಿ ಸಾಗುತ್ತಿವೆ.

ಹಳಿ ಮೇಲೆ ನೀರು: ಮತ್ಸಗಂಧ ರೈಲು ಒಂದು ಗಂಟೆ ಸ್ಥಗಿತ
ರೈಲು ಹಳಿಯ ಮೇಲೆ ಭಾರೀ ಪ್ರಮಾಣದ ನೀರು ನಿಂತಿದ್ದ ರಿಂದ ಕೊಂಕಣ ರೈಲು ಮಾರ್ಗದ ಕುಂದಾಪುರ ತಾಲೂಕಿನ ಕೆದೂರಿನಲ್ಲಿ ಮತ್ಸ  éಗಂಧ ರೈಲು ಒಂದು ಗಂಟೆ ಹಳಿಯಲ್ಲಿಯೇ ನಿಲ್ಲುವಂತಾಯಿತು. ಸ್ಥಳೀಯರು ನೀರು ಹರಿದುಹೋಗುವುದಕ್ಕೆ ವ್ಯವಸ್ಥೆ ಮಾಡಿದ ಬಳಿಕ ರೈಲು ಸಂಚಾರವನ್ನು ಮುಂದುವರಿಸಿತು. ಉಡುಪಿ ರೈಲು ನಿಲ್ದಾಣದಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ನೇತ್ರಾವತಿ ಎಕ್ಸ್‌ ಪ್ರಸ್‌ ರೈಲಿನ ಮೇಲೆ ಮರದ ರೆಂಬೆ ಬಿದ್ದು ಸ್ವಲ್ಪ ಸಮಯ ಸಂಚಾರ ಸ್ಥಗಿತಗೊಂಡಿತು. ಕೂಡಲೇ ಮರ ತೆರವು ಮಾಡಲಾಯಿತು.

ಬೆಂಗಳೂರು ರೈಲು ರದ್ದು
ಶಿರಾಡಿ ಘಾಟಿಯಲ್ಲಿ ಗುಡ್ಡ ರೈಲು ಹಳಿಗಳ ಮೇಲೆ ಕುಸಿದಿರುವುದರಿಂದ ಮಂಗಳೂರು-ಬೆಂಗಳೂರು ನಡುವಿನ ರೈಲು ಸೇವೆ ರದ್ದುಗೊಂಡಿದೆ. ಮಣ್ಣು ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ಬಿರುಸಾಗಿ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಮಂಗಳವಾರ ಈ ಮಾರ್ಗದಲ್ಲಿ ರೈಲು ಓಡಾಡಿಲ್ಲ. ಬುಧವಾರದ ಕಾರವಾರ-ಯಶವಂತಪುರ ರೈಲನ್ನೂ (ರೈಲು ಸಂಖ್ಯೆ 16515)ರದ್ದುಗೊಳಿಸಲಾಗಿದೆ.

ಶಾಲೆ, ಕಾಲೇಜುಗಳಿಗೆ ಇಂದು ರಜೆ
ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ 2 ದಿನ ಭಾರೀ ಮಳೆ ಸುರಿ ಯುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಇದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ (ಆ. 7) ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿಯೂ ರಜೆ ಘೋಷಿಸಲಾಗಿದೆ.

ರಾಜ್ಯಾದ್ಯಂತ ಮಳೆ ಅಬ್ಬರ: 4 ಸಾವು
ಹುಬ್ಬಳ್ಳಿ/ಬೆಂಗಳೂರು: ಒಂದೆಡೆ ಮಹಾರಾಷ್ಟ್ರದಿಂದ ಹರಿದು ಬಂದ ನೀರು, ಮತ್ತೂಂದೆಡೆ ಧಾರಾಕಾರ ಮಳೆಯಿಂದಾಗಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕೃಷ್ಣಾ, ಭೀಮಾ, ದೂಧ್‌ಗಂಗಾ, ವೇದಗಂಗಾ, ಘಟಪ್ರಭಾ, ತುಂಗಭದ್ರಾ, ಕಾಳಿ, ಅಘನಾಶಿನಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಮಲೆನಾಡು ಪ್ರದೇಶಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಮಂಗಳವಾರ ರಾಜ್ಯಾದ್ಯಂತ 4 ಮಂದಿ ಸಾವಿಗೀಡಾಗಿದ್ದಾರೆ. ಹಲವೆಡೆ ರೈಲು ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿದೆ.

ತುರ್ತು ಸೇವೆಗಳಿಗೆ ಟೋಲ್‌ಫ್ರೀ ಸಂಖ್ಯೆ 1077

Advertisement

Udayavani is now on Telegram. Click here to join our channel and stay updated with the latest news.

Next