ನವದೆಹಲಿ: ದೇಶದ ಯಾವುದೇ ಭಾಗದಲ್ಲಾಗಲಿ ಅಕ್ಟೋಬರ್ 1ರವರೆಗೆ ಖಾಸಗಿ ಕಟ್ಟಡ, ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ(Bulldozer Action) ನಡೆಸದಂತೆ ಸುಪ್ರೀಂಕೋರ್ಟ್ (Supreme court) ಮಂಗಳವಾರ (ಸೆ.17) ಕಟ್ಟುನಿಟ್ಟಿನ ಆದೇಶ ನೀಡಿದೆ.
“ಬುಲ್ಡೋಜರ್ ಕಾರ್ಯಾಚರಣೆ ನಡೆಸಬಾರದು ಎಂಬ ಆದೇಶಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇದರಿಂದಾಗಿ ಬುಲ್ಡೋಜರ್ ಕಾರ್ಯಾಚರಣೆಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಅದಕ್ಕೆ ಸುಪ್ರೀಂ ಪೀಠದ ಜಸ್ಟೀಸ್ ಬಿಆರ್ ಗವಾಯಿ ಮತ್ತು ಜಸ್ಟೀಸ್ ಕೆವಿ ವಿಶ್ವನಾಥನ್, ಮುಂದಿನ ವಿಚಾರಣೆವರೆಗೆ(ಅ.01) ಕಾರ್ಯಾಚರಣೆ ಸ್ಥಗಿತಗೊಂಡರೆ ಆಕಾಶ ಕಳಚಿ ಬೀಳುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:Raghu Thatha: ಓಟಿಟಿಯಲ್ಲಿ ರಿಲೀಸ್ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ
ಕಳೆದ ಬಾರಿಯ ವಿಚಾರಣೆ ವೇಳೆಯೂ ಬುಲ್ಡೋಜರ್ ಜಸ್ಟೀಸ್ ವಿರುದ್ಧ ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಈ ಕಾರ್ಯಾಚರಣೆಯನ್ನು ವೈಭವೀಕರಿಸಬೇಡಿ. ಮುಂದಿನ ವಿಚಾರಣೆವರೆಗೆ ನಮ್ಮ (Supreme court) ಅನುಮತಿ ಇಲ್ಲದೇ ಬುಲ್ಡೋಜರ್ ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ತಿಳಿಸಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಿಯಾದ ಅಥವಾ ಆರೋಪಿಯಾದ ವ್ಯಕ್ತಿಯ ಮನೆ ಮತ್ತು ವಾಣಿಜ್ಯ ಸಂಕೀರ್ಣಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದ ಪ್ರಕರಣದ ಕುರಿತ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ನಡೆಸುತ್ತಿದೆ.