Advertisement
ಮೂರು ದಿನಗಳಲ್ಲಿ ಉತ್ತರಪ್ರದೇಶದಲ್ಲಿ 54 ಮಂದಿ ಮೃತಪಟ್ಟರೆ, ಬಿಹಾರದಲ್ಲಿ 44 ಮಂದಿ ಸಾವಿಗೀಡಾಗಿದ್ದಾರೆ. ಉ.ಪ್ರದೇಶದ ಬಲ್ಲಿಯಾ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿದ್ದ 54 ಮಂದಿ ಜೂ.15, 16 ಮತ್ತು 17ರಂದು ತಾಪ ತಡೆಯಲಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನೂ 400ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಬಿಸಿಗಾಳಿಯಿಂದ ಉಂಟಾದ ಜ್ವರ, ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಗಂಭೀರದಿಂದ ಅತಿ ಗಂಭೀರ ಬಿಸಿಗಾಳಿಯು ಬೀಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ. ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ಜಾರ್ಖಂಡ್, ವಿದರ್ಭ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಈ ಎಚ್ಚರಿಕೆ ನೀಡಲಾಗಿದೆ. ಬಿಹಾರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
Related Articles
ಬಿಹಾರದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದು, ತಾಪದಿಂದಾಗಿ ಮನೆಯಿಂದ ಹೊರಗೆ ಕಾಲಿಡಲೂ ಕಷ್ಟ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಪಾಟ್ನಾ ಜಿಲ್ಲಾಡಳಿತವು 12ನೇ ತರಗತಿವರೆಗೆ ಬೇಸಗೆ ರಜೆಯನ್ನು ವಿಸ್ತರಿಸಿದರೆ, ಇನ್ನು ಕೆಲವೆಡೆ ಶಾಲೆಗಳಿಗೆ ಜೂ.24ರವರೆಗೆ ರಜೆ ನೀಡಲಾಗಿದೆ. ಜಾರ್ಖಂಡ್. ಗೋವಾ, ಛತ್ತೀಸ್‌ಗಡ ಮತ್ತು ಆಂಧ್ರಪ್ರದೇಶಗಳಲ್ಲೂ ಬೇಸಗೆ ರಜೆಯನ್ನು ವಿಸ್ತರಿಸಲಾಗಿದೆ.
Advertisement
ಕರಗಿದ ಹಳಿ; ತಪ್ಪಿದ ರೈಲು ದುರಂತಬಿಹಾರದಲ್ಲಿ ಬಿಸಿಲಿನ ಬೇಗೆ ಎಷ್ಟಿದೆಯೆಂದರೆ, ವಿಪರೀತ ಶಾಖದಿಂದ ಲಕ್ನೋದ ನಿಗೋಹಾನ್ ರೈಲು ನಿಲ್ದಾಣದ ಲೂಪ್‌ಲೈನ್‌ನಲ್ಲಿನ ಹಳಿಯೇ ಮೆಲ್ಟ್ ಆಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ನೀಲಾಂಚಲ್ ಎಕ್ಸ್‌ಪ್ರೆಸ್ ರೈಲು ಮೈನ್ ಲೈನ್‌ನಲ್ಲಿ ಸಂಚರಿಸುವ ಬದಲು ಲೂಪ್‌ಲೈನ್‌ನಲ್ಲಿ ಸಂಚರಿಸಿತ್ತು. ಈ ವೇಳೆ ಹಳಿ ಕರಗಿತ್ತು. ತಕ್ಷಣ ಎಚ್ಚೆತ್ತ ಚಾಲಕ ರೈಲನ್ನು ನಿಲ್ಲಿಸಿ, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ಕೂಡಲೇ ಅಲ್ಲಿಗೆ ಬಂದ ಎಂಜಿನಿಯರಿಂಗ್ ವಿಭಾಗದ ಸಿಬ್ಬಂದಿ, ಹಾನಿಗೀಡಾದ ಹಳಿಯ ರಿಪೇರಿ ಕೆಲಸ ಆರಂಭಿಸಿದರು.