ಬೆಂಗಳೂರು : ಮುಖ್ಯಮಂತ್ರಿಯಾಗಿದ್ದಾಗ ಸಂಪುಟ ವಿಸ್ತರಣೆಗಾಗಿ ಪದೇ ಪದೇ ದೆಹಲಿಗೆ ತೆರಳಿದರೂ ಸುಲಭಕ್ಕೆ ಸಿಗದ ವರಿಷ್ಠರ ಭೇಟಿ ಈಗ ಯಡಿಯೂರಪ್ಪನವರಿಗೆ ಸಲೀಸಾಗಿದ್ದೇಕೆ ?ಇಂಥದೊಂದು ಚರ್ಚೆ ಈಗ ಬಿಜೆಪಿ ವಲಯದಲ್ಲಿ ಬಿರುಸಾಗಿ ನಡೆಯುತ್ತಿದೆ.
ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ಯಡಿಯೂರಪ್ಪ ನೇಮಕಗೊಂಡ ಬೆನ್ನಲ್ಲೇ ಶುಕ್ರವಾರ ದಿಲ್ಲಿಗೆ ತೆರಳಿದ್ದ ಅವರಿಗೆ ಚಿಟಿಕೆ ಹೊಡೆಯುವಷ್ಟು ಸಲೀಸಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವುದಕ್ಕೆ ಅವಕಾಶ ಲಭಿಸಿದೆ. ಪ್ರಧಾನಿ ಮೋದಿ ಜತೆಯಲ್ಲಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ.
ಇದೆಲ್ಲಕ್ಕಿಂತ ಮಿಗಿಲಾಗಿ ಬಿ.ಎಲ್.ಸಂತೋಷ್ ಅವರನ್ನು ಯಡಿಯೂರಪ್ಪ ಭೇಟಿ ಮಾಡಿರುವುದು. ಯಡಿಯೂರಪ್ಪ ಅವರ ಈ ಹಿಂದಿನ ದಿಲ್ಲಿ ಪ್ರವಾಸ ಸಂದರ್ಭದಲ್ಲಿ ಸಂತೋಷ್ ಕಚೇರಿಗೆ ಭೇಟಿಕೊಟ್ಟ ದೃಷ್ಟಾಂತಗಳು ಕಡಿಮೆ. ಆದರೆ ಇದಕ್ಕಿದ್ದಂತೆ ನಡೆಯುತ್ತಿರುವ ಈ ವಿದ್ಯಮಾನಗಳು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಂತೋಷ್ ಅವರಂತೂ ತಮ್ಮ ಫೇಸ್ ಬುಕ್ ಸ್ಟೇಟಸ್ ನಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದೆ ಎಂದು ಬರೆದುಕೊಂಡಿದ್ದಾರೆ.
ಹಾಗಾದರೆ ಇದು ವಿಧಾನಸಭೆ ಹಾಗೂ ಲೋಕಸಭಾ ಚುನಾವಣಾ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಓಲೈಕೆ ನಡೆಸಲಾಗುತ್ತಿದೆಯೋ ಅಥವಾ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಪ್ರಯತ್ನವೋ ? ಎಂಬ ಚರ್ಚೆ ನಡೆಯುತ್ತಿದೆ.
ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪನವರಿದ್ದರೂ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಮಾತ್ರ ಅವರ ಸಲಹೆ ಕೇಳುವ ಸಾಧ್ಯತೆ ಇದ್ದು, ಉಳಿದ ರಾಜ್ಯಗಳ ವಿದ್ಯಮಾನ ಸಂದರ್ಭದಲ್ಲಿ ಯಡಿಯೂರಪ್ಪ ಉಪಸ್ಥಿತಿಗೆ ಮಾತ್ರ ಸೀಮಿತರಾಗಬಹುದಾಗಿದೆ.