Advertisement
ಕರಾವಳಿಯಲ್ಲಿ ಉಷ್ಣ ಅಲೆಯ (ಹೀಟ್ ವೇವ್) ಪ್ರಭಾವ ಎರಡು ದಿನ ಕಂಡು ಬಂದಿತ್ತು. ಆದರೆ ಇದು ಸಾಮಾನ್ಯವಾಗಿ ಉಂಟಾಗುವ ಹೀಟ್ ವೇವ್ ಅಲ್ಲ, ಬದಲಾಗಿ ಆಗಾಗ್ಗೆ ತಾಪಮಾನದ ದಿಢೀರ್ ಏರಿಕೆಯಿಂದ ಈ ರೀತಿ ಆಗಿದೆ. ಹಾಗಾಗಿ ಎರಡು ದಿನಗಳಿಗೆ ಸೀಮಿತಗೊಂಡು ಕಡಿಮೆಯಾಗಿದೆ. ಸಾಮಾನ್ಯವಾಗಿ ಏಪ್ರಿಲ್ -ಮೇ ತಿಂಗಳಲ್ಲಿ ಉಷ್ಣ ಅಲೆಯ ಪ್ರಮಾಣ ಹೆಚ್ಚಿರುತ್ತದೆ ಎನ್ನುತ್ತಾರೆ ಹವಾಮಾನ ವಿಶ್ಲೇಷಕರು.
ಉಷ್ಣ ಅಲೆಯ ಪರಿಣಾಮ ಶನಿವಾರ ವಾತಾವರಣದಲ್ಲಿ ಉಷ್ಣತೆಯ ಅನುಭವ ಹೆಚ್ಚಾಗಿತ್ತು. ಮಧ್ಯಾಹ್ನ ಉರಿ ಸೆಕೆ ಜನರನ್ನು ಬಳಲಿ ಬೆಂಡಾಗುವಂತೆ ಮಾಡಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ, ರುಮಾಲು, ಟೋಪಿ, ಮರದ ನೆರಳಿನ ಆಶ್ರಯ ಪಡೆಯುವುದು ಸಾಮಾನ್ಯವಾಗಿತ್ತು. ಸೀಯಾಳ, ಜ್ಯೂಸ್ ಅಂಗಡಿಗಳಲ್ಲಿ ಜನರು ಹೆಚ್ಚಾಗಿ ಕಂಡು ಬಂದಿದ್ದಾರೆ. ಬಸ್ಸು ಸಹಿತ ವಿವಿಧ ವಾಹನಗಳಲ್ಲಿ ತೆರಳುವವರಿಗೆ ಗಾಳಿಯಲ್ಲಿ ಬಿಸಿ ಹೆಚ್ಚಿರುವುದು ಅನುಭವಕ್ಕೆ ಬಂದಿದೆ.
ಶನಿವಾರ ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 36.6 ಡಿಗ್ರಿ ಸೆ. ದಾಖಲಾದರೆ, ಕನಿಷ್ಠ 20.8 ಡಿಗ್ರಿ ಸೆ. ದಾಖಲಾಗಿದೆ. ಉಷ್ಣ ಅಲೆ ಘೋಷಣೆ ಹೇಗೆ?
ಹವಾಮಾನ ಇಲಾಖೆ ಕರಾವಳಿಯಲ್ಲಿ ಹೀಟ್ ವೇವ್ ಘೋಷಿಸಬೇಕಾದರೆ ತಾಪಮಾನ 37 ಡಿಗ್ರಿ ಸೆ. ತಲುಪುವುದರೊಂದಿಗೆ ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆ. ಉಷ್ಣಾಂಶ ಏರಿಕೆಯಾಗಬೇಕು. ಈ ರೀತಿಯ ತಾಪಮಾನ ಒಂದೇ ಭಾಗದ ಕನಿಷ್ಠ ಎರಡು ಹವಾಮಾನ ನಿಗಾ ಕೇಂದ್ರಗಳಲ್ಲಿ ಎರಡು ದಿನ ದಾಖಲಾದರೆ ಆಗ ಎರಡನೇ ದಿನ ಇದನ್ನು ಉಷ್ಣ ಅಲೆ ಎಂದು ಪ್ರಕಟಿಸಲಾಗುತ್ತದೆ. ಕರಾವಳಿಯಲ್ಲಿ ಕಾರವಾರ ಮತ್ತು ಪಣಂಬೂರು ಹವಾಮಾನ ಕೇಂದ್ರಗಳಲ್ಲಿ ಇದು ದಾಖಲಾಗಿದ್ದು, ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಐದಾರು ಸ್ಟೇಷನ್‌ಗಳಿಂದ ಉಷ್ಣಾಂಶ ಮಾಹಿತಿ ಇಲಾಖೆಗೆ ಲಭ್ಯವಾಗುತ್ತದೆ. ನಿರಂತರ ನಿಗಾ ಇರಿಸಲಾಗುತ್ತಿದೆ ಎಂದು ಐಎಂಡಿ ಬೆಂಗಳೂರು ವಿಜ್ಞಾನಿ ಪ್ರಸಾದ್ “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
ಸುಳ್ಯ: ಕೆಲವು ದಿನಗಳಿಂದ ಭಾರೀ ಬಿಸಿಲು ಮತ್ತು ವಾತಾವರಣದಲ್ಲಿ ತೀವ್ರ ಉಷ್ಣತೆ ಕಂಡುಬರುತ್ತಿದ್ದು, ಜನರು ಕಂಗಾಲಾಗಿದ್ದಾರೆ. ವಾತಾವರಣದ ಉಷ್ಣತೆ ಶನಿವಾರ ಮತ್ತಷ್ಟು ಏರಿಕೆಯಾಗಿದೆ. ಸುಳ್ಯ ತಾಲೂಕು ಸಹಿತ ವಿವಿಧೆಡೆ ಮಧ್ಯಾಹ್ನ ಉರಿ ಬಿಸಿಲಿಗೆ ಭೂಮಿ ಕಾದ ಕಬ್ಬಿಣದಂತಾಗಿರುವುದು ಅನುಭವಕ್ಕೆ ಬಂದಿದೆ.
Advertisement
ಶನಿವಾರ ಬೆಳಗ್ಗಿನಿಂದಲೇ ಉಷ್ಣಾಂಶ ಏರಿಕೆಯಾಗುತ್ತಿದ್ದು 11ಯ ಹೊತ್ತಿಗೆ ಭಾರೀ ಬಿಸಿಲು ಇತ್ತು. 12.30 – 1ರ ವೇಳೆಗೆ ಬಿಸಿಲ ಬೇಗೆ ಮತ್ತಷ್ಟು ಏರಿದೆ. ಹಗಲು ಜನತೆ ಮನೆಯಿಂದ ಹೊರಬರಲಾಗದಂತಹ ಸ್ಥಿತಿ ಇತ್ತು. ಪಾದಚಾರಿಗಳಿಗೆ ಬೆಂಕಿಯ ನಡುವೆ ನಡೆದಾಡಿದ ಅನುಭವ ಉಂಟಾಗಿದೆ.