Advertisement
ಗಾಳಿ ಸ್ಥಗಿತವು ಈಗ ಪೂರ್ವ ವಿದರ್ಭದಿಂದ ಕೊಮೊರಿನ್ ಪ್ರದೇಶದವರೆಗೆ ಕರ್ನಾಟಕದ ಒಳಭಾಗ ಮತ್ತು ತಮಿಳುನಾಡಿನ ಒಳಭಾಗದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿದೆ. ಕರಾವಳಿ ಕರ್ನಾಟಕದಲ್ಲಿ 33 ರಿಂದ 36 ಡಿ.ಸೆ. ವರೆಗೆ ತಾಪಮಾನ ದಾಖಲಾದರೆ, ಉತ್ತರ ಒಳನಾಡಿನಲ್ಲಿ ಸರಾಸರಿ ತಾಪಮಾನವು 37 ರಿಂದ 43 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿವೆ. ಮುಂದಿನ 2 ದಿನಗಳಲ್ಲಿ ಕರಾವಳಿಯ ಹಲವು ಕಡೆ ವಾಡಿಕೆಗಿಂತ 2 ಡಿ.ಸೆ. ತಾಪಮಾನ ಹೆಚ್ಚಾಗಲಿದೆ.
Related Articles
Advertisement
ಬೆಂಗಳೂರಿನಲ್ಲಿ 37, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.3 ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಯಚೂರು 41.6, ಬಾಗಲಕೋಟೆ 41.1, ಕೊಪ್ಪಳ 40.8, ಗದಗ 40.6, ವಿಜಯಪುರ 40, ದಾರವಾಡ 39.8, ಮಂಗಳೂರು 35.4, ಬೀದರ್ 39.2, ದಾವಣಗೆರೆ 39.5 ಗರಿಷ್ಠ ಉಷ್ಣಾಂಶ ಶುಕ್ರವಾರ ದಾಖಲಾಗಿದೆ. 2016ರ ಎ.25ರಂದು 39.2ಡಿ.ಸೆ ಗರಿಷ್ಠ ತಾಪಮಾನ ದಾಖಲಾಗಿತ್ತು. ಅದನ್ನ ಹೊರತುಪಡಿಸಿದರೆ ಕೆಐಎಎಲ್‌ನಲ್ಲಿ 2024ರ ಏ.5ರಂದು 38.3 ಡಿ.ಸೆ.ಗರಿಷ್ಠ ತಾಪಮಾನ ದಾಖಲಾಗಿದೆ.
ಕಲಬುರಗಿಯಲ್ಲಿ ಈ ವರ್ಷದ ಗರಿಷ್ಠ ತಾಪ 44 ಡಿ.ಸೆ. ದಾಖಲು
ಕಲಬುರಗಿ: ರಣಬಿಸಿಲಿಗೆ ಇಡೀ ರಾಜ್ಯವೇ ತತ್ತರಿಸಿದ್ದು ಶುಕ್ರವಾರ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಹೋಬಳಿಯ ನಿಂಬಾಳ-ಹಡಲಗಿಯಲ್ಲಿ ಈ ವರ್ಷದ ಗರಿಷ್ಠ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ. ಬಿಸಿಲು ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ರಣಬಿಸಿಲಿಗೆ ಜನಜೀವನ ತತ್ತರಿಸಿದ್ದು, 44 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗುತ್ತಿತ್ತು.
ಶುಕ್ರವಾರ ರಾಜ್ಯದಲ್ಲೇ ಅತ್ಯಧಿಕ ತಾಪ ದಾಖಲಾಗಿದ್ದು, ಜನರನ್ನು ಇನ್ನಷ್ಟು ಹೈರಾಣಾಗಿಸಿದೆ. ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಜನತೆ ಹೊರಗೆ ಬಾರದಂತಾಗಿದೆ. ಜಿಲ್ಲೆಯ ಜೀವನದಿ ಭೀಮಾ ನದಿ ಸಂಪೂರ್ಣ ಬತ್ತಿದ್ದು, ಉರಿ ಬಿಸಿಲಿಗೆ ತುಪ್ಪ ಸವರಿದಂತಾಗಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸಲಹೆ-ಸೂಚನೆ ನೀಡಿದೆ.