Advertisement

ಕಾದಿದೆ ತಾಪ ಅಪಾಯ

12:39 AM Aug 10, 2021 | Team Udayavani |

ಹೊಸದಿಲ್ಲಿ: ಪ್ರಕೃತಿಯನ್ನು ನಿರ್ಲಕ್ಷಿಸಿದರೆ ಪರಿಣಾಮ ನೆಟ್ಟಗಿರದು. ಸಹಜ ಪರಿಸರದ ವಿರುದ್ಧ ನಮ್ಮ ನಡೆಯಿಂದಲೇ ಉತ್ತರಾಖಂಡದಲ್ಲಿ 2013ರಲ್ಲಿ ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾಗಿದೆ. ಇನ್ನಾದರೂ ಪಾಠ ಕಲಿಯದಿದ್ದರೆ ಹವಾಮಾನ ಬದಲಾವಣೆ ಅಗಾಧ  ದುಷ್ಪರಿಣಾಮ ಬೀರಲಿದೆ ಎಂದು ವಿಶ್ವಸಂಸ್ಥೆಯ ಅಂತರ್‌ ಸರಕಾರಿ ಹವಾಮಾನ ಬದಲಾವಣೆ ಸಮಿತಿ (ಐಪಿಸಿಸಿ) ತನ್ನ 6ನೇ ಮೌಲ್ಯಮಾಪನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

Advertisement

ಹಿಮಾಲಯದ ಪರ್ವತಗಳಿಂದ ಹಿಮ ಕರಗಲಿದೆ, ಭಾರತದಲ್ಲಿ ತಂಪು-ಚಳಿಯ ಅವಧಿ ಕಡಿಮೆಯಾಗಿ, ಬಿಸಿ ವಾತಾವರಣ ಹೆಚ್ಚಾಗಲಿದೆ, ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಲಿದೆ ಎಂದು ವರದಿಯಲ್ಲಿ ಉಲ್ಲೇಖೀಸಿ, ಎಚ್ಚರಿಸಲಾಗಿದೆ.

21ನೇ ಶತಮಾನದಲ್ಲಿ ಜಗತ್ತಿಗೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಏಷ್ಯಾ ಪ್ರಾಂತ್ಯಗಳಿಗೆ ಹವಾಮಾನ ಏರಿಕೆಯ ದುಷ್ಪರಿಣಾಮ ಗಾಢವಾಗಿ ತಟ್ಟಲಿದೆ. ಜಾಗತಿಕ ತಾಪಮಾನ 2030ರ ಹೊತ್ತಿಗೆ 1.5 ಡಿಗ್ರಿ ಸೆ.ಗಿಂತ ಹೆಚ್ಚಾಗಲಿದೆ. ಇದೆಲ್ಲದರ ಪರಿಣಾಮವಾಗಿ ಭೂಮಿಯಲ್ಲಿ ಅಪಾಯಕ್ಕೆ ಸಿಲುವ ಪ್ರಾಂತ್ಯಗಳ ಪಟ್ಟಿಗೆ ಮತ್ತಷ್ಟು ಪ್ರದೇಶಗಳು ಸೇರಲಿವೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಭಾರತ, ದಕ್ಷಿಣ ಏಷ್ಯಾ: ವರದಿ ಸಾರಾಂಶ:

  • l ಪರ್ವತ ಪ್ರದೇಶಗಳಲ್ಲಿ ತಾಪಮಾನ ಹೆಚ್ಚು
  •  ಭೂಕುಸಿತ ಪ್ರಕರಣ ಹೆಚ್ಚಾಗುವ ಸಾಧ್ಯತೆ
  • ಸಮುದ್ರದ ನೀರಿನ ಮಟ್ಟ ಹೆಚ್ಚಳ
  • ಕರಾವಳಿ ಪ್ರದೇಶಗಳು ಮುಳುಗುವ ಸಾಧ್ಯತೆ
  • ತಂಪು ಹವೆ ಕಡಿಮೆ; ಉಷ್ಣ ಪ್ರಕೋಪ ಏರಿಕೆ

ದೇಶಕ್ಕೇನು ಅಪಾಯ? :

Advertisement

ದೇಶದಲ್ಲಿ  ಪ್ರವಾಹ, ಚಂಡಮಾರುತದ ಹಾವಳಿ ಹೆಚ್ಚುತ್ತಲೇ ಇದೆ. ಹಿಂದೂಕುಶ್‌ ಪರ್ವತ ಶ್ರೇಣಿಯಲ್ಲಿರುವ ಹಿಮ ಕರಗಲಿದ್ದು, ಸಮುದ್ರದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಲಿದೆ. ಅಕಾಲ ಮತ್ತು ಅಗಾಧ ಮಳೆಯಾಗಲಿದೆ. ಉಷ್ಣ ಹವೆಯೂ ಹೆಚ್ಚಾಗಲಿದೆ. ವಾಯುಮಾಲಿನ್ಯವನ್ನು ಕಡಿಮೆ ಮಾಡಿದರೂ ಈಗಾಗಲೇ ಕೆಟ್ಟಿರುವ ಪರಿಸರದ ಕೆಲವು ಘಟಕಗಳು ಮತ್ತೆ ಸರಿಹೋಗಲಾರವು. ಅವುಗಳ ದುಷ್ಪರಿಣಾಮವನ್ನು ನಾವು ಅನುಭವಿಸಲೇಬೇಕು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಸಮುದ್ರದ ಮಟ್ಟ ಹೆಚ್ಚಳ :

ಹವಾಮಾನ ಬದಲಾವಣೆಯಿಂದ ಮತ್ತು ಹಿಮ ಕರಗುವ ಪ್ರಮಾಣ ಹೆಚ್ಚುವುದರಿಂದ ಸಮುದ್ರ ಮಟ್ಟ ಏರಲಿದೆ. ಇದರಿಂದಾಗಿ ದೇಶದ ಕರಾವಳಿಯ ನಗರ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಸ್ಥಳಗಳು ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಕಡಲ್ಕೊರೆತವೂ ಹೆಚ್ಚಾಗಲಿದೆ. ಸಾಗರಾವಲಂಬಿತ ಜೀವ ಸಂಕುಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗಲಿದೆ.

ಕೃಷಿಗೆ ಆತಂಕ :

ತಾಪಮಾನ 2 ಡಿಗ್ರಿ ಸೆ.ಯಷ್ಟು ಹೆಚ್ಚಾದರೆ ಅದು ಕೃಷಿ ಕ್ಷೇತ್ರಕ್ಕೂ ಮಾರಕವಾಗಲಿದೆ. ಅತಿವೃಷ್ಟಿ, ಅನಾವೃಷ್ಟಿ ಹೆಚ್ಚುವುದರಿಂದ ಆಹಾರ ಉತ್ಪಾದನೆ ಮತ್ತಿತರ ಚಟುವಟಿಕೆಗಳ  ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.

ಹಿಂದೂ ಮಹಾಸಾಗರದಲ್ಲಿ  ಬಿಸಿ ಹೆಚ್ಚಾಗುತ್ತಿದೆ. ಹೀಗಾಗಿ ಕರಾವಳಿಯಲ್ಲಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ, ಅಪಾಯ ಉಂಟಾಗಲಿದೆ.-ಸ್ವಪ್ನಾ ಪಣಿಕ್ಕಲ್‌, ಹವಾಮಾನ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next