Advertisement

ಸಚಿವ ಡಿಕೆಶಿಗೆ ಆಕ್ರೋಶದ ಬಿಸಿ

09:41 AM Jun 23, 2019 | Team Udayavani |

ಬೆಳಗಾವಿ: ನದಿ ಬತ್ತಿ ಹೋಗಿ ನೀರು ಇಲ್ಲದೇ ಒದ್ದಾಡುತ್ತಿದ್ದ ಜನರ ಸಮಸ್ಯೆ ಆಲಿಸಲು ಸಚಿವರು ಬರಲಿಲ್ಲ. ಮಹಾರಾಷ್ಟ್ರದಿಂದ ನೀರು ಬಿಟ್ಟಾಗ ಈಗ ಬಂದು ಪೋಸ್‌ ಕೊಡುತ್ತಿರುವುದು ಏಕೆ. ಶಾಶ್ವತವಾಗಿ ನೀರು ಬಿಡುವಂತೆ ಮಹಾರಾಷ್ಟ್ರದ ಮೇಲೆ ಒತ್ತಡ ಹಾಕುವ ಕೆಲಸ ಸರ್ಕಾರ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ವಿವಿಧ ಗ್ರಾಮಗಳ ರೈತರು ಸಚಿವ ಡಿ.ಕೆ. ಶಿವಕುಮಾರಗೆ ಬಿಸಿ ಮುಟ್ಟಿಸಿದರು.

Advertisement

ಸಚಿವರು ಬಂದ ಕಡೆಗಳೆಲ್ಲ ಆಕ್ರೋಶ, ಪ್ರತಿಭಟನೆ, ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತರು ಹಾಗೂ ಸಾರ್ವಜನಿಕರು, ಮೂರ್‍ನಾಲ್ಕು ತಿಂಗಳಿನಿಂದ ನೀರಿಲ್ಲದೇ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೃಷ್ಣಾ ನದಿ ಹಾಗೂ ಎಲ್ಲ ಬ್ಯಾರೇಜ್‌ಗಳು ಬತ್ತಿ ಹೋಗಿದ್ದವು. ಎಲ್ಲಿಯೂ ನೀರಿಲ್ಲದಂಥ ಸ್ಥಿತಿ ನಿರ್ಮಾಣವಾಗಿತ್ತು. ಆಗ ಯಾರೊಬ್ಬರೂ ಇತ್ತ ಸುಳಿಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಂಜರಿ ಬ್ರಿಜ್‌ ಕಂ ಬ್ಯಾರೇಜ್‌ ಸ್ಥಳಕ್ಕೆ ಆಗಮಿಸಿದ ಸಚಿವರನ್ನು ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು. ಸಚಿವರತ್ತ ತೆರಳುತ್ತಿದ್ದಾಗ ಅಲ್ಲಿಯೇ ತಡೆದು ಸುಮ್ಮನಾಗಿಸಲು ಯತ್ನಿಸಿದರು. ಆಗ ಪೊಲೀಸರು ಹಾಗೂ ರೈತರೊಂದಿಗೆ ವಾಗ್ವಾದ ನಡೆಯಿತು. ಬಳಿಕ ಪ್ರಭಾಕರ ಕೋರೆ ಅಲ್ಲಿಗೆ ಆಗಮಿಸಿದಾಗ ರೈತರೆಲ್ಲರೂ ಅವರ ಹಿಂದಿನಿಂದ ಓಡಿ ಬಂದು ಸಚಿವರತ್ತ ನುಗ್ಗಲು ಯತ್ನಿಸಿದಾಗ ತಡೆಯಲಾಯಿತು. ಬಾವನ ಸೌಂದತ್ತಿ, ಇಂಗಳಿ, ದಿಗ್ಗೇವಾಡಿ, ಕಲ್ಲೋಳ, ಮಾಂಜರಿ, ಯಡೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.

ಮೂರ್‍ನಾಲ್ಕು ತಿಂಗಳಿಂದ ನೀರಲ್ಲದೇ ಒದ್ದಾಡುತ್ತಿದ್ದೇವೆ. ಎಲ್ಲ ಬೆಳೆಗಳು ಬತ್ತಿ ಹೋಗಿವೆ. ಲಕ್ಷಾಂತರ ರೂ. ಹಾನಿ ಆಗಿದೆ. ನೀರು-ಬೆಳೆ ಇಲ್ಲದೇ ಸಮಸ್ಯೆ ಉಲ್ಬಣಗೊಂಡಿದೆ. ಆದರೆ ಆಗ ಮಹಾರಾಷ್ಟ್ರದೊಂದಿಗೆ ಮಾತುಕತೆ ನಡೆಸುವ ಬದಲು ಈಗ ಮಾತಾಡಿದರೆ ಏನು ಪ್ರಯೋಜನ. ಸಚಿವರೊಂದಿಗೆ ನಮ್ಮನ್ನು ಭೇಟಿಯಾಗಲು ಬಿಡದಿದ್ದರೆ ಮುಂದೆ ಅನಾಹುತ ಸಂಭವಿಸಿದರೆ ನಾವು ಹೊಣೆಯಲ್ಲ ಎಂದು ಇಂಗಳಿಯ ಅಣ್ಣಾಸಾಹೇಬ ಚೌಗಲೆ ಹಾಗೂ ಶಂಕರ ಮಮದಾಪುರ ಹೇಳುತ್ತಿದ್ದರೂ ಪೊಲೀಸರು ಇದಕ್ಕೆ ಕಿವಿಗೊಡಲಿಲ್ಲ. ಎಲ್ಲರನ್ನೂ ಬದಿಗೆ ಸರಿಸಿ ಸಚಿವರ ವಾಹನ ತೆರಳಲು ದಾರಿ ಮಾಡಿ ಕೊಟ್ಟರು.

ನಂತರ ಶಿರಗುಪ್ಪಿ ಮಾರ್ಗವಾಗಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ಗೆ ತೆರಳುತ್ತಿದ್ದ ಸಚಿವ ಡಿ.ಕೆ. ಶಿವಕುಮಾರ ಅವರ ಕಾರು ತಡೆದ ಗ್ರಾಮಸ್ಥರು ಜನ-ಜಾನುವಾರುಗಳಿಗೆ ನೀರು ಇಲ್ಲದೇ ಸಮಸ್ಯೆ ಅನುಭವಿಸುವಂತಾಗಿದೆ. ನಮ್ಮ ಸಮಸ್ಯೆ ಕೇಳಲು ಯಾರೂ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Advertisement

ಗ್ರಾಮಸ್ಥರನ್ನು ಸಮಾಧಾನ ಪಡಿಸಿದ ಸಚಿವರು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ನಮ್ಮ ಬ್ಯಾರೇಜ್‌ಗಳ ವಾಸ್ತವ ಸ್ಥಿತಿ ಏನು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ನಂತರ ಅಲ್ಲಿಯ ಸರ್ಕಾರದೊಂದಿಗೆ ಚರ್ಚಿಸಿ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿ ವಾಹನ ಹತ್ತಿ ಹೋಗುವಾಗಲೂ ಜನರು, ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು.

ಉಭಯ ರೈತರ ಸಮಸ್ಯೆ ಬಗೆಹರಿಸಿ: ಮಹಾ ಶಾಸಕನ ಮನವಿ

ರಾಜಾಪುರ ಬ್ಯಾರೇಜ್‌ ವೀಕ್ಷಣೆಗೆ ಬಂದಿದ್ದ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾದ ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಲಾಸ್‌ ಪಾಟೀಲ ಅವರು ಅಲ್ಲಿಯ ವಾಸ್ತವ ಸ್ಥಿತಿ ತಿಳಿಸಿದರು. ಈ ಬ್ಯಾರೇಜ್‌ದಿಂದ ಕರ್ನಾಟಕ-ಮಹಾರಾಷ್ಟ್ರದ ಜನರಿಗೆ ಅನುಕೂಲವಾಗಿದೆ. ಎರಡೂ ಸರ್ಕಾರ ಪರಸ್ಪರ ಸಭೆ ನಡೆಸುವ ಮೂಲಕ ಉಭಯ ರಾಜ್ಯಗಳ ರೈತರ ಹಿತ ರಕ್ಷಿಸಬೇಕು. ಮಹಾರಾಷ್ಟ್ರ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.
• ಭೈರೋಬಾ ಕಾಂಬಳೆ
Advertisement

Udayavani is now on Telegram. Click here to join our channel and stay updated with the latest news.

Next