ಬೆಂಗಳೂರು: ಕೆಲಸದ ಜಾಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಆರಂಭವಾಗಿರುವ “ಮೀ ಟೂ’ ಅಭಿಯಾನದ ಬಿಸಿ ಇದೀಗ ಬಿಬಿಎಂಪಿ ಅಧಿಕಾರಿಗಳಿಗೂ ತಟ್ಟಿದ್ದು, ಮಹಿಳಾ ಪೌರಕಾರ್ಮಿಕರಿಗೆ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಪೌರಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಕೆಲವು “ಮೀ ಟೂ’ ಎಂದು ಬರೆದುಕೊಂಡರೆ, ಇನ್ನೂ ಕೆಲವರು “ದೇ ಟೂ’ ಎಂದು ಬರೆದು ಮಹಿಳಾ ಪೌರಕಾರ್ಮಿಕರು ಅನುಭವಿಸುವ ಕಷ್ಟಗಳ ಬಗ್ಗೆ ಬರೆದಿದ್ದಾರೆ. ಈ ಹಿಂದೆಯೂ ಪೌರಕಾರ್ಮಿಕರ ಮೇಲೆ ಗುತ್ತಿಗೆದಾರರು ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣಗಳು ಇದಕ್ಕೆ ಪುಷ್ಟಿ ನೀಡುವಂತಿವೆ.
ರಾಜಧಾನಿಯ ಸ್ವತ್ಛತಾ ರಾಯಭಾರಿಗಳ ಮೇಲೆ ನಿತ್ಯವೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಲೈಂಗಿಕ ಕಿರುಕುಳ ನಡೆಯುತ್ತಿದ್ದು, ಜೀವನಕ್ಕೆ ಕೆಲಸ ಅನಿವಾರ್ಯವಾಗಿರುವ ಕಾರಣ ಕಾರ್ಮಿಕರು ತಮ್ಮ ನೋವುಗಳನ್ನು ಹೆೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು, ಪೌರಕಾರ್ಮಿಕರಾಗಿ ಕೆಲಸ ಮಾಡುವ ತನ್ನ ಅತ್ತೆಗೆ ಪಾಲಿಕೆಯ ಅಧಿಕಾರಿಗಳಿಂದ ಆಗುತ್ತಿರುವ ಲೈಂಗಿಕ ಕಿರುಕುಳದ ಕುರಿತು ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. “ಬಡವರು ಪೌರಕಾರ್ಮಿಕರ ಕೆಲಸಕ್ಕಾಗಿ ಬರುತ್ತಾರೆ. ಆದರೆ, ನೀಚ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಾರೆ. ನನ್ನ ಅತ್ತೆಯನ್ನೂ ನೀಚ ಅಧಿಕಾರಿಗಳು ಕಾಮಾಲೆ ಕಣ್ಣಿಂದ ನೋಡುತ್ತಾರೆ. ಈ ಬಗ್ಗೆ ಒಂದು ಗಂಟೆ ನಮ್ಮತ್ತೆ ಕಣ್ಣೀರು ಹಾಕಿದ್ದಾರೆ. ಇವರ ಕಾಮಚೇಷ್ಟೆಗೆ ಬಿಬಿಎಂಪಿ ಯಾವಾಗ ಬ್ರೇಕ್ ಹಾಕುತ್ತೆ?’ ಎಂದು ಬರೆದುಕೊಂಡಿದ್ದಾರೆ.
ಮತ್ತೂಬ್ಬರು, “ಬೆಂಗಳೂರಿನ ಪೌರಕಾರ್ಮಿಕರ ಮೇಲೆ ನಿತ್ಯ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಅನಕ್ಷರಸ್ಥರು ಎಂಬ ಕಾರಣಕ್ಕೆ ಅಧಿಕಾರಿಗಳು ಅವರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಹೇಳಿದ ಹಾಗೆ ಕೇಳದಿದ್ದರೆ ಹಾಜರಾತಿ ಕಟ್ ಮಾಡುತ್ತಾರೆ. ಪೌರಕಾರ್ಮಿಕರ ಬಳಿ ಸ್ಮಾರ್ಟ್ ಫೋನ್ ಇಲ್ಲ. ಇದ್ದಿದ್ದರೆ ಎಲ್ಲರ ಮುಖವಾಡ ಬಯಲಾಗುತ್ತಿತ್ತು’ ಎಂದು ಬರೆದಿದ್ದಾರೆ.
ಅದಕ್ಕೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು, “ಸಿನಿಮಾ ನಟಿಯರು, ರಾಜಕಾರಣಿಗಳು ಹಾಗೂ ಕ್ರೀಡಾ ಪಟುಗಳ ಮೇಲೆ ನಡೆಯುವಂತಹ ಲೈಂಗಿಕ ದೌರ್ಜನ್ಯಗಳು ಪ್ರಮುಖ ಸುದ್ದಿಗಳಾಗುತ್ತವೆ. ಆದರೆ, ನಗರದ ಸ್ವತ್ಛತೆಯಲ್ಲಿ ತೊಡಗುವ ಪೌರಕಾರ್ಮಿಕರ ಮೇಲೆ ನಿತ್ಯ ನಡೆಯುವಂತಹ ಕಿರುಕುಳ ಪ್ರಕರಣಗಳು ಎಲ್ಲಿಯೂ ಸುದ್ದಿಯಾಗದಿರುವುದು ದುರಂತದ ಸಂಗತಿ’ ಎಂದಿದ್ದಾರೆ.
ದೂರು ನೀಡಿದರೆ ಕೂಡಲೇ ಕ್ರಮ: ಸಾಮಾಜಿಕ ಜಾಲತಾಣಗಳಲ್ಲಿ ಯಾರು ಬರೆದುಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಅಧಿಕಾರಿಗಳು ಅಥವಾ ಗುತ್ತಿಗೆದಾರರಿಂದ ಮಹಿಳಾ ಪೌರಕಾರ್ಮಿಕರಿಗೆ ಯಾವುದೇ ರೀತಿಯ ಲೈಂಗಿಕ ಕಿರುಕುಳ ಎದುರಾದರೆ, ಕೂಡಲೇ ತನಗೆ ದೂರು ನೀಡಬಹುದಾಗಿದೆ. ಪೌರಕಾರ್ಮಿಕರಿಂದ ದೂರು ಬಂದರೆ ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.