Advertisement
ಈ ಮೊದಲು ಬಿಜೆಪಿಯ ಭದ್ರಕೋಟೆಯಾಗಿದ್ದ ಅಥಣಿ ಕ್ಷೇತ್ರ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಈ ಕ್ಷೇತ್ರವನ್ನು ಬಹಳ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದರಿಂದ ಮಹೇಶ ಕುಮಠಳ್ಳಿ ಮೊದಲ ಬಾರಿ ಶಾಸಕರಾದರು. ಆದರೆ ನಂತರ ನಡೆದಿರುವ ರಾಜಕೀಯ ಬೆಳವಣಿಗೆಗಳಿಂದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ರಮೇಶ ಜಾರಕಿಹೊಳಿ ಬೆಂಬಲಿಗ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಅಷ್ಟು ಆಸಕ್ತಿಯಿಂದ ಭಾಗವಹಿಸುತ್ತಿಲ್ಲ.
Related Articles
ಗೆದ್ದುಬಂದವರು ಏನು ಮಾಡುತ್ತಾರೆ. ಯಾರು ಬಂದರೂ ಅಷ್ಟೇ ಎಂಬ ನಿರ್ಲಿಪ್ತ ಭಾವನೆ ಜನರಲ್ಲಿದೆ. ಇದೇ ಕಾರಣದಿಂದ ಚುನಾವಣೆಯ ಬಗ್ಗೆ ಮತದಾರರಲ್ಲಿ ಅಷ್ಟು ಕುತೂಹಲ ಕಾಣಿಸುತ್ತಿಲ್ಲ.
Advertisement
ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಅಂತಹ ಬದಲಾವಣೆ ಕಾಣುವುದಿಲ್ಲ. ಈಗಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಹದಗೆಟ್ಟ ರಸ್ತೆಗಳಿವೆ. ಕೇಂದ್ರದ ಅನುದಾನ ಕ್ಷೇತ್ರದ ಅಭಿವೃದ್ಧಿ ಗೆ ಸಹಾಯಕಾರಿಯಾಗಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.
ಕ್ಷೇತ್ರದಲ್ಲಿ ಈಗ ಭೀಕರ ಬರ ಇದೆ. ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಪ್ರತಿದಿನ ಕೊಡ ನೀರಿಗಾಗಿ ಮೈಲುಗಟ್ಟಲೇ ಅಲೆದಾಡುವ ಸ್ಥಿತಿ ಇದೆ. ಹೀಗಿರುವಾಗ ಈ ವಾರದಲ್ಲಿ ಕೃಷ್ಣಾ ನದಿಗೆ ನೀರು ಬರದೇ ಇದ್ದರೆ ಮತದಾನದ ಪ್ರಮಾಣದಲ್ಲಿ ಬಹಳ ಇಳಿಕೆಯಾಗಲಿದೆ ಎಂಬ ಆತಂಕ ಮನೆಮಾಡಿದೆ. ಮತದಾನದ ವೇಳೆ ನದಿಯಲ್ಲಿ ನೀರು ಇರದೇ ಇದ್ದರೆ ಜನರು ಮತದಾನದ ಬಗ್ಗೆ ಆಸಕ್ತಿ ಕಳೆದುಕೊಂಡು ನೀರನ್ನು ಹುಡುಕಿಕೊಂಡು ಹೋಗುತ್ತಾರೆ ಎಂಬ ಮಾತುಗಳು ಕೇಳಿಬಂದವು.
ಕ್ಷೇತ್ರದಲ್ಲಿ ನೀರಾವರಿ, ಕುಡಿವ ನೀರು, ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಮುಖ್ಯವಾಗಿ ಕರಿ ಮಸೂತಿ ನೀರಾವರಿ ಯೋಜನೆಯಿಂದ ಕೈಬಿಟ್ಟು ಹೋಗಿರುವ ಎಂಟು ಹಳ್ಳಿಗಳನ್ನು ಮರಳಿ ಇದರಲ್ಲಿ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಯಿದೆ. ಈ ಕಾರ್ಯ ಅನುಷ್ಠಾನಗೊಂಡಿದ್ದೇ ಆದರೆ ಈ ಎಂಟು ಹಳ್ಳಿಗಳ ಕುಡಿಯುವ ಹಾಗೂ ನೀರಾವರಿಯ ಸಮಸ್ಯೆ ದೂರವಾಗಲಿದೆ. ಎರಡನೇಯದಾಗಿ ರೈತರನ್ನು ಬಹಳವಾಗಿ ಕಾಡುತ್ತಿರುವ ಸವುಳು ಜವುಳು ಸಮಸ್ಯೆಗೆ ಕೇಂದ್ರದಿಂದ ಅನುದಾನ ತಂದು ಶಾಶ್ವತವಾದ ಪರಿಹಾರ ದೊರಕಿಸಿಕೊಡಬೇಕು ಎಂಬುದು ಕ್ಷೇತ್ರದ ಮತದಾರರ ಒತ್ತಾಯ. ಇದಲ್ಲದೆ ರಾಜಕೀಯ ತಿಕ್ಕಾಟದಲ್ಲಿ ಇನ್ನೂ ಉದ್ಘಾಟನೆ ಯಾಗದೆ ಹಾಗೆ ನಿಂತಿರುವ ಅಥಣಿಯ ಪಶು ವೈದ್ಯಕೀಯ ಕಾಲೇಜು ಕಟ್ಟಡವನ್ನು ನಾಡಿಗೆ ಸಮರ್ಪಿಸಬೇಕು ಎಂಬ ಆಗ್ರಹ ಕ್ಷೇತ್ರದ ಜನರಿಂದ ವ್ಯಕ್ತವಾಗಿದೆ.