Advertisement

ಕೋವಿಡ್ ಸೋಂಕಿನಿಂದ ಬಳಲಿದವರಿಗೆ ಹೃದಯ ಮಿಡಿಯುತ್ತಿದೆ…

10:42 AM Jun 03, 2021 | Team Udayavani |

ಬಹುತೇಕ ಕ್ರಿಕೆಟಿಗರು, ಮಾನಸಿಕ ಆರೋಗ್ಯದ ಅಗತ್ಯವೇನೆಂದು ತಿಳಿದುಕೊಂಡಿದ್ದಾರೆ. ನಮಗೆ ಗೊತ್ತಿರಬೇಕಾಗಿರುವುದೇನೆಂದರೆ ವ್ಯವಸ್ಥೆ ನಿಮ್ಮ ಮಾನಸಿಕ ಆರೋಗ್ಯವನ್ನು ಸರಿಯಿಟ್ಟುಕೊಳ್ಳಲು ನೆರವು ನೀಡದಿದ್ದರೆ ನಿಮ್ಮ ಮನಸ್ಸನ್ನು ನೀವೇ ನಿಭಾಯಿಸುವುದನ್ನು ಕಲಿಯಬೇಕು. ನನಗೂ ಮಾನಸಿಕ ಸಮಸ್ಯೆಗಳಿದ್ದವು ಅದನ್ನು ನಾನೇ ಸರಿ ಮಾಡಿಕೊಂಡಿದ್ದೇನೆ.

Advertisement

ಕೊರೊನಾದಿಂದ ಇಷ್ಟೆಲ್ಲ ಅನಾಹುತಗಳಾದ ಮೇಲೆಯೂ, ಅದನ್ನು ಅತ್ಯಂತ ಸರಿಯಾದ ರೀತಿಯಲ್ಲಿ ನಿಭಾಯಿಸುವುದು ಹೇಗೆಂದು ಜನರಿಗೆ ಗೊತ್ತಿಲ್ಲ. ಆ ಉದ್ದೇಶದಿಂದಲೇ ಈ ಮಾತು ಗಳನ್ನು ನಾನು ಆಡಬೇಕಾಗಿ ಬಂದಿದೆ. ದಯವಿಟ್ಟು ಇಂತಹ ಹೊತ್ತಿನಲ್ಲಿ ಅಂತರ್ಜಾಲದಲ್ಲಿ ಬರೆದಿದ್ದನ್ನೆಲ್ಲ ನೋಡಿ, ಪಾಲಿಸಲು ಹೋಗಬೇಡಿ. ಪರಿಸ್ಥಿತಿ ಕೈಮೀರುವ ಮೊದಲು ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನದಂತೆ ಮುಂದುವರಿಯಿರಿ. ಆಗ ಮಾತ್ರ ನೀವು ಸರಿಯಾದ ಹೆಜ್ಜೆಯಿಡಲು ಸಾಧ್ಯ.

ನನಗೆ ಈಗಲೂ ಅಚ್ಚರಿ ಹುಟ್ಟಿಸುವ ಪ್ರಶ್ನೆಯೇನೆಂದರೆ, ನನ್ನ ಕುಟುಂಬ ಸದಸ್ಯರು, ಬೆಂಗಳೂರಿನಲ್ಲಿರುವ ನನ್ನ ಗೆಳೆಯರಿಗೆಲ್ಲ ಕೊರೊನಾ ತಗಲಿದರೂ ನಾನೊಬ್ಬಳು ಮಾತ್ರ ಅದರ ಹಿಡಿತದಿಂದ ಹೇಗೆ ಪಾರಾದೆ? ಅದು ಅದೃಷ್ಟವೆಂದು ನೀವು ಹೇಳಬಹುದು ಅಥವಾ ನಾನು ಪದೇಪದೆ ಕೈ ತೊಳೆಯುತ್ತಿದ್ದುದರಿಂದ ಸಾಧ್ಯವಾ ಯಿತು ಎಂದೂ ಹೇಳಬಹುದು. ಆದರೆ ನಿಜವಾಗಲೂ ಏನಾಯಿ ತೆನ್ನುವುದು ನನಗೆ ಗೊತ್ತಿಲ್ಲ!

ತಾಯಿ ಅದೃಷ್ಟವಂತೆ
ಮನೋಬಲ ಇಲ್ಲಿ ಬಹಳ ಮುಖ್ಯ. ನನ್ನ ಹಿರಿಯಕ್ಕ ವತ್ಸಲಾ ತೀರಿಕೊಳ್ಳುವುದಕ್ಕೆ ಮುನ್ನ ಮಾನಸಿಕವಾಗಿ ಬಹಳ ಕುಗ್ಗಿದ್ದಳು. ನನ್ನ ತಾಯಿಯೂ ಅಂಥಹದ್ದೇ ಆಘಾತಕ್ಕೊಳಗಾಗಿದ್ದರು. ಅವರು ತೀರಿಕೊಂಡ ರಾತ್ರಿಗೂ ಮುನ್ನಾ ದಿನ, ನನ್ನನ್ನು ಹೊರತುಪಡಿಸಿ ಇಡೀ ಕುಟುಂಬ ಸದಸ್ಯರಿಗೆ ಸೋಂಕು ತಗಲಿದೆ ಎನ್ನುವುದು ಅವರಿಗೆ ಗೊತ್ತಾಗಿತ್ತು. ಬಹುಶಃ ಇದು ಅವರನ್ನು ತೀವ್ರವಾಗಿ ಬಾಧಿಸಿರಬಹುದು.

ಯಾರ್ಯಾರು ಈ ಸೋಂಕಿನಿಂದ ಬಾಧೆಗೊಳಗಾಗಿದ್ದಾರೋ, ಅವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಇಡೀ ಕುಟುಂಬಕ್ಕೆ ಕುಟುಂಬವೇ ನಾಶವಾಗಿರುವ ಸುದ್ದಿಗಳನ್ನು ನಾನು ಕೇಳಿದ್ದೇನೆ. ನನ್ನ ತಾಯಿ, ಅಕ್ಕ ಇಬ್ಬರನ್ನು ಹೊರತುಪಡಿಸಿ, ಕುಟುಂಬದ ಇತರ ಸದಸ್ಯರು ಕೊರೊನಾದಿಂದ ಸುಧಾರಿಸಿಕೊಂಡಿದ್ದಾರೆನ್ನುವುದನ್ನು ನೆನೆದರೆ, ಅಷ್ಟರಮಟ್ಟಿಗೆ ನಾನು ಸಮಾಧಾನಗೊಳ್ಳುತ್ತೇನೆ. ನಮ್ಮ ಕುಟುಂಬಕ್ಕಾದ ಈ ದುರಂತದ ನೋವಿನಿಂದ ಹೊರಬರಲು ನಾವೆಲ್ಲ ಹೋರಾಡುತ್ತಲೇ ಇದ್ದೇವೆ. ಏನಾಗಿದೆಯೋ, ಅವೆಲ್ಲ ಮುಗಿದು ಹೋದ ಅಧ್ಯಾಯಗಳು ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಯತ್ನಿಸುತ್ತಿದ್ದೇವೆ. ಒಂದು ರೀತಿಯಲ್ಲಿ ನೋಡಿದರೆ ನನ್ನ ತಾಯಿ ಅದೃಷ್ಟವಂತೆ ಎಂದು ನನಗನಿಸುತ್ತದೆ. ಅವರು ತೀರಿಹೋಗುವಾಗ, ಅವರೊಂದಿಗೆ ಕುಟುಂಬವಿತ್ತು. ಕೊರೊನಾದಿಂದ ತೀರಿಕೊಂಡ ಹಲವರ ಪಾಲಿಗೆ ಇದೂ ಇರಲಿಲ್ಲ.

Advertisement

ತಾಯಿ, ಅಕ್ಕ ನನ್ನ ಪ್ರಪಂಚ
ತಾಯಿ ಮತ್ತು ಅಕ್ಕ ನನ್ನ ಜೀವನದಲ್ಲಿ ಬಹಳ ಮುಖ್ಯ ವ್ಯಕ್ತಿಗಳು. ನಾನೇನಾಗಿದ್ದೀನೋ ಅದಕ್ಕೆಲ್ಲ ಅವರೇ ಕಾರಣ. ನನ್ನ ತಾಯಿ ಯಾವಾಗಲೂ, “ನೀನು ಮೊದಲು ದೇಶಕ್ಕೆ ಮಗಳು, ಆಮೇಲೆ ನನ್ನ ಮಗಳು’ ಎನ್ನುತ್ತಿದ್ದರು. ಆ ಇಬ್ಬರಿಗೆ ಕೃತಜ್ಞತೆ ಸಲ್ಲಿಸಲು ಏನು ಮಾಡಬಹುದೆಂದು ನನಗೆ ಹೊಳೆಯುತ್ತಲೇ ಇಲ್ಲ. ನಾನು ಶತಕ ಹೊಡೆಯಲಿ ಅಥವಾ ಮೊದಲನೇ ಎಸೆತಕ್ಕೆ ಔಟಾಗಲೀ, ಅವರಿಗದು ವಿಷಯವೇ ಅಲ್ಲ. ನಾನೇ ಯಾವಾಗಲೂ ಅವರ ಮೆಚ್ಚಿನ ಆಟಗಾರ್ತಿ! ಅವರ ಪಾಲಿಗೆ ನಾನು ಯಾವಾಗಲೂ ಅವರಿಗೆ ಪುಟ್ಟ ಮಗು. ನನ್ನಕ್ಕ ವತ್ಸಲಾ ನನಗಿಂತ 14 ವರ್ಷ ದೊಡ್ಡವಳು. ಆಕೆ ನನಗೆ ತಾಯಿಯಿದ್ದಂತೆ! ನಾನು ಹಸುಗೂಸಾಗಿದ್ದಾಗಿನಿಂದಲೂ, ಆಕೆ ನನ್ನ ಕಾಳಜಿ ವಹಿಸಿದ್ದಳು. ಕೆಲವೊಮ್ಮೆ ನಾನು ಅವಳ ಮಗಳ್ಳೋ, ಸಹೋದರಿಯೋ ಎಂದು ತಿಳಿಯದೇ ಜನ ಗೊಂದಲಕ್ಕೊಳಗಾಗಿದ್ದೂ ಇದೆ.

ಪುಟ್ಟ ಹುಡುಗಿಯಾಗಿ ನಾನೆಂದಿಗೂ ಅವಳನ್ನು ಬಿಟ್ಟು ಇರುತ್ತಲೇ ಇರಲಿಲ್ಲ. ಅವಳಿಗೆ ಮದುವೆಯಾದಾಗ ಆಕೆ ಗಂಡನ ಮನೆಗೆ ಹೋಗಬೇಕಾಗಿತ್ತು. ಆಗ ನಾನು ಮೂಲೆ ಸೇರಿಕೊಂಡು ಬಹಳ ಅತ್ತಿದ್ದೆ. ಮರುದಿನ ಬೆಳಗ್ಗೆ ಅವಳ ಪತಿ, ಅವಳನ್ನು ಮತ್ತೆ ನಮ್ಮನೆಗೆ ತಂದುಬಿಟ್ಟು “ನಿನ್ನ ತಂಗಿಯ ಜತೆ ಇರು. ಸಾಧ್ಯವಾದಾಗ ಅತ್ತೆ ಮಾವನ ಮನೆಗೆ ಬಾ’ ಎಂದು ಹೇಳಿ ಹೋಗಿದ್ದರು. ಹಾಗಿತ್ತು ನಮ್ಮಿಬ್ಬರ ನಡುವಿನ ಬಾಂಧವ್ಯದ ಬಿಸುಪು. ಅವಳು ನನ್ನ ಅಗ್ರಗಣ್ಯ ಅಭಿಮಾನಿ. ನಾನು ಆಡಿದ ಎಲ್ಲ ಪಂದ್ಯಗಳನ್ನೂ ಆಕೆ ನೋಡಿದ್ದಾಳೆ. ನಾನು ಆಡುವಾಗಲೆಲ್ಲ ಆಕೆ ಮೈದಾನದಲ್ಲಿರುತ್ತಿದ್ದಳು. ಮತ್ತೆ ನಾನು ಮೈದಾನಕ್ಕೆ ಮರಳಿದಾಗ, ಅವಳಿಲ್ಲ ಎನ್ನುವ ಸ್ಥಿತಿಯನ್ನು ಹೇಗೆ ಜೀರ್ಣಿಸಿಕೊಳ್ಳುವುದು ಎಂದು ಗೊತ್ತಾಗುತ್ತಿಲ್ಲ.

ನನ್ನ ತಾಯಿ ತೀರಿಹೋಗುವ ಒಂದು ಅಥವಾ ಎರಡು ದಿನಗಳ ಮುನ್ನ, ನಾವೆಲ್ಲ ಅಕ್ಕನ ಆರೋಗ್ಯದ ಬಗ್ಗೆ ಚಿಂತೆಗೊಳಗಾಗಿದ್ದೆವು. ಕಾರಣ ಅದಾಗಲೇ ಆಕೆ ಸತತ 6 ದಿನಗಳಿಂದ ತೀವ್ರ ಜ್ವರದಲ್ಲಿದ್ದಳು. ಆಕೆ ಬೆಂಗಳೂರಿನಿಂದ 230 ಕಿ.ಮೀ. ದೂರದಲ್ಲಿರುವ ಕಡೂರಿನ ಮನೆಯಲ್ಲಿ ಪ್ರತ್ಯೇಕವಾಗಿದ್ದಳು. ಆರಂಭದಲ್ಲಿ ಆಕೆಗೆ ಸೋಂಕಿಲ್ಲ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಆದರೆ ಯಾವಾಗ ಆಸ್ಪತ್ರೆಗೆ ಒಯ್ದು, ಸಿಟಿ ಸ್ಕ್ಯಾನ್‌ ಮಾಡಿಸಿದೆವೋ ಆಗ ಆಕೆಗೆ ಕೊರೊನಾ ನ್ಯುಮೋನಿಯಾ ಬಂದಿದೆ ಎನ್ನುವುದು ಗೊತ್ತಾಯಿತು. ಇದು ಗೊತ್ತಾಗುತ್ತಿದ್ದಂತೆಯೇ ನಾನು ಬೆಂಗಳೂರಿನಲ್ಲಿದ್ದ ನನ್ನ ಅಣ್ಣನ ಮನೆಯಿಂದ ಹೊಟೇಲ್‌ಗೆ ಸ್ಥಳಾಂತರಗೊಂಡೆ. ಇದಕ್ಕೂ ಕಾರಣವಿದೆ. ಕೆಲವೇ ದಿನಗಳ ಮುನ್ನ ನಾವೆಲ್ಲ ಕಡೂರಿನಲ್ಲಿ ವತ್ಸಲಾ ಜನ್ಮದಿನ ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಒಟ್ಟು ಸೇರಿ ಸಂಭ್ರಮಿಸಿದ್ದೆವು.

ಬೆಂಗಳೂರಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ನಾನು ಸೋಂಕಿನಿಂದ ಪಾರಾದರೂ; ನನ್ನ ಅಣ್ಣನ ಪತ್ನಿ ಮತ್ತು ಅವರ ಪುತ್ರಿಯರಿಗೆ ಸೋಂಕು ಅಂಟಿತ್ತು. ಆ ತತ್‌ಕ್ಷಣ ನಮಗೆ ಚಿಂತೆಯಾಯಿತು. ಒಂದು ವೇಳೆ ಯಾರಾದರೂ ಆಸ್ಪತ್ರೆಗೆ ಸೇರಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ; ಬೆಂಗಳೂರಿನಲ್ಲಂತೂ ಅಂದಿನ ಪರಿಸ್ಥಿತಿಯಲ್ಲಿ ಒಂದು ಹಾಸಿಗೆ ಪಡೆಯುವುದು ಬಹಳ ಕಷ್ಟವಿತ್ತು. ಆದ್ದರಿಂದ ತತ್‌ಕ್ಷಣ ನನ್ನ ಅಣ್ಣನ ಕುಟುಂಬವನ್ನು ಕಡೂರಿಗೆ ಕಳುಹಿಸಿದೆವು. ಅದು ನಡೆದಿದ್ದು ತಾಯಿ ತೀರಿಕೊಳ್ಳುವ ರಾತ್ರಿಗೂ ಒಂದು ದಿನ ಮುನ್ನ.

ಅದೇ ವೇಳೆ ಅಕ್ಕ ವತ್ಸಲಾಳನ್ನು ಕಡೂರಿನಿಂದ ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಯ ಶ್ವಾಸಕೋಶದ ಶೇ. 80 ಭಾಗ ದುರ್ಬಲವಾಗಿತ್ತು. ಮೊದಲು ಆಕೆ ಔಷಧಕ್ಕೆ ಸ್ಪಂದಿಸಲು ಆರಂಭಿಸಿದರೆ, ಮುಂದೆ ಹೇಳಬಹುದು ಎಂದು ವೈದ್ಯರು ಹೇಳಿದ್ದರು. ನಿಧಾನಕ್ಕೆ ಆಕೆ ಚೇತರಿಸಿ ಕೊಳ್ಳತೊಡಗಿದಳು. ಮುಂದಿನ ನಾಲ್ಕೈದು ದಿನ ಉತ್ತಮವಾಗಿಯೇ ಸ್ಪಂದಿಸುತ್ತಿದ್ದಳು. ಆ ರಾತ್ರಿ ಆಕೆ ತೀರಿಕೊಳ್ಳುವ ಮುನ್ನವೂ ಪರವಾಗಿಲ್ಲ ಎನ್ನುವ ಸ್ಥಿತಿಯಲ್ಲೇ ಇದ್ದಳು! ಹಿಂದಿನ ದಿನ ಸಂಜೆ ಅವಳೊಂದಿಗೆ ಮಾತನಾಡಿದ್ದು ನನಗೆ ಹಾಗೆಯೇ ನೆನಪಿದೆ. ಊಟವನ್ನು ಅಗತ್ಯವಿರುವಷ್ಟು ಮಾಡದಿದ್ದರೂ; ಚೆನ್ನಾಗಿಯೇ ಮಾತನಾಡುತ್ತಿದ್ದಳು. ಆದರೆ ಮುಂದಿನ 24 ಗಂಟೆಗಳಲ್ಲಿ, ಆಕೆಯ ಶರೀರದಲ್ಲಿ ಆಮ್ಲಜನಕದ ಪ್ರಮಾಣ ಕುಸಿಯಲು ಆರಂಭವಾಯಿತು. ಮುಂದೇನಾಯಿತು ಎಂದು ನಿಖರವಾಗಿ ಹೇಳುವುದು ಕಷ್ಟ. ನನ್ನ ಅಕ್ಕ ಕೂಡ ತೀರಿಕೊಂಡಾಗ, ನಾನು ಧರಾಶಾಹಿಯಾದೆ. ಇಡೀ ಕುಟುಂಬದ ಭಾವಕೋಶ ಛಿದ್ರಛಿದ್ರವಾದಂತಾಗಿತ್ತು.

ತಾಯಿ ತೀರಿಕೊಂಡ ಅನಂತರ ನನ್ನಣ್ಣ ಕುಸಿದುಹೋಗಿದ್ದ. ಅವನು ಕೂಡ ಚಿಕ್ಕಮಗಳೂರಿನಲ್ಲಿ ಆಸ್ಪತ್ರೆಗೆ ಸೇರಿಕೊಂಡಿದ್ದ. ಅವನ ಪತ್ನಿ ಶ್ರುತಿ ಕಡೂರು ಆಸ್ಪತ್ರೆಯಲ್ಲಿದ್ದರು. ನನ್ನ ತಂದೆಯ ಸ್ಥಿತಿ ಬಹಳ ಬಿಗಡಾಯಿಸಿತ್ತು; ಅವರೂ ಆಸ್ಪತ್ರೆಯಲ್ಲಿದ್ದರು. ಆ ಸ್ಥಿತಿಯಲ್ಲಿ ಗಟ್ಟಿಯಾಗಿದ್ದ ವ್ಯಕ್ತಿಯೆಂದರೆ ನಾನೊಬ್ಬಳೇ. ನಾನು ಬೆಂಗಳೂರಿನಿಂದಲೇ ಎಲ್ಲವನ್ನೂ ನಿರ್ವಹಿಸುತ್ತಿದ್ದೆ. ಅಗತ್ಯವಿರುವುದನ್ನು ತಲುಪಿಸಲು ಏರ್ಪಾಡು ಮಾಡುವುದು, ವೈದ್ಯರೊಂದಿಗೆ ಮಾತನಾಡುವುದು, ಏನೆಲ್ಲ ಅಗತ್ಯವಿದೆಯೋ ಅವನ್ನೆಲ್ಲ ಮಾಡುತ್ತಿದ್ದೆ.

ಮುಂಚೆಯೆಲ್ಲ ನಮಗೆ ಗೊತ್ತಿದ್ದೇನೆಂದರೆ, ಕೊರೊನಾ ತಗಲಿದರೆ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು, ಎಚ್ಚರಿಕೆ ವಹಿಸಬೇಕೆನ್ನುವುದು ಮಾತ್ರ. ಅದು ಸರಿಯೇ! ಆದರೆ ಸೋಂಕು ತಗಲಿದಾಗ ತತ್‌ಕ್ಷಣ ಏನು ಮಾಡಬೇಕೆನ್ನುವುದು ಗೊತ್ತಿಲ್ಲದ ಕಾರಣ; ಏನೆಲ್ಲ ನಡೆಯ ಬಾರದಿತ್ತೋ ಅವೆಲ್ಲ ನನ್ನ ಕುಟುಂಬದಲ್ಲಿ ನಡೆದು ಹೋಯಿತು. ನನಗನಿಸುವ ಪ್ರಕಾರ ಮನೆಯಲ್ಲೇ ಪ್ರತ್ಯೇಕವಾಗುಳಿದು ಒಂದೆರಡು, ಮೂರು ದಿನ ತಡ ಮಾಡಿದೆವು.

ಆ 20 ದಿನಗಳಲ್ಲಿ ಬಹುತೇಕ ಮೊಬೈಲ್‌ನಲ್ಲೇ ಇದ್ದೆ. ನನ್ನ ಶಕ್ತಿಯೆಲ್ಲ ಅದಕ್ಕೇ ಬಳಕೆಯಾಗುತ್ತಿತ್ತು. ಆಗಲೇ ನಾನು ಜನರಿಗೆ ಕೊರೊನಾ ಬಂದಾಗ ಏನು ಮಾಡಬೇಕೆಂದು ತಿಳಿಸಲು ಆರಂಭಿಸಿದ್ದು. ಸಾಮಾಜಿಕ ತಾಣ ಬಳಸಿ ಜನರ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದೆ. ಸಂಕಷ್ಟಕ್ಕೆ ಸಿಲುಕಿದವರ ಟ್ವೀಟ್‌ಗಳನ್ನು ರೀಟ್ವೀಟ್‌ ಮಾಡಿದೆ. ಇಂತಹ ಹೊತ್ತಿನಲ್ಲಿ ಇವೆಲ್ಲ ಬೇಕಾ ಎಂದು ಕೆಲವರು ವಿರೋಧಿಸಿದರೂ ಅದನ್ನು ಗಮನಿಸಲಿಲ್ಲ. ನನ್ನ ಟ್ವೀಟ್‌ಗಳಿಂದ ಜನರಿಗೆ ಸಹಾಯವಾಗುತ್ತಿದ್ದುದರಿಂದ ನಾನು ಅದನ್ನು ತಪ್ಪದೇ ಪಾಲಿಸಿದೆ. ನನ್ನ ಕುಟುಂಬದಲ್ಲೇ 9 ಮಂದಿಗೆ ಸೋಂಕು ತಗಲಿದ್ದರೂ ಉಳಿದವರು ಅದರಿಂದ ಪಾರಾಗಲು ಏನೇನು ಮಾಡಬೇಕೆಂದು ತಿಳಿಸುತ್ತಲೇ ಇದ್ದೆ.

ಗಣ್ಯವ್ಯಕ್ತಿಗಳು ತಮ್ಮ ಸ್ಥಾನಮಾನವನ್ನು ಸಂದಿಗ್ಧದ ಸ್ಥಿತಿಯಲ್ಲಿ ಬಳಸಿಕೊಳ್ಳಬಹುದೆಂದು ನನಗೆ ಗೊತ್ತಾಯಿತು. ನನ್ನ ಅಕ್ಕನಿಗೆ ಒಂದು ಇಂಜೆಕ್ಷನ್‌ ಬೇಕಿತ್ತು. ಅದಕ್ಕಾಗಿ ನಾನೊಂದು ಟ್ವೀಟ್‌ ಮಾಡಿದ್ದೆ. ಆದರೆ ಅದನ್ನು ಕೊನೆಯ ಆಯ್ಕೆಯಾಗಿ ಬಳಸಲು ವೈದ್ಯರು ನಿರ್ಧರಿಸಿದ್ದರು. ನನ್ನ ಅಕ್ಕನಿಗಾಗಿ ಒಂದು ಇಂಜೆಕ್ಷನ್‌ ಪಡೆಯುವುದೆಂದರೆ, ಇನ್ನೊಬ್ಬರು ಯಾರೋ ಸಾವು ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿಗೆ ಅವಕಾಶ ನಿರಾಕರಿಸಿದಂತೆ. ಇಂತಹ ಸಂದರ್ಭದಲ್ಲಿ ನನ್ನ ಕೈಹಿಡಿದವರು ಹಲವರು, ಅವರನ್ನೆಂದೂ ಮರೆಯಲಾರೆ. ಹಾಗಂತ ನನಗೆ ಕರೆ ಮಾಡದವರು, ಸಂದೇಶ ಕಳುಹಿಸದವರ ಕುರಿತು ನನಗೆ ಬೇಸರವಿಲ್ಲ.

ಧನ್ಯವಾದಗಳು
ಸಂಕಷ್ಟದ ಸಮಯದಲ್ಲಿ ನನ್ನ ಟ್ವೀಟ್‌ಗಳನ್ನು ರೀಟ್ವೀಟ್‌ ಮಾಡಿದ ಹರ್ಮನ್‌ಪ್ರೀತ್‌ ಕೌರ್‌, ಸ್ಮತಿ ಮಂಧನಾ, ಮಿಥಾಲಿ ರಾಜ್‌, ಮೋನಾ ಮೆಶ್ರಾಮ್‌, ರೀಮಾ ಮಲ್ಹೋತ್ರಾಗೆ ಕೃತಜ್ಞತೆ. ಅಂತಹ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದರು. ಬೆಂಗಳೂರಿಗೆ ಬಂದಾಗ ಮನೆಗೆ ಭೇಟಿ ಕೊಡುವೆ ಎಂದು ತಿಳಿಸಿದ್ದಾರೆ. ಅವರಿಗೂ ಧನ್ಯವಾದ.

ಕೃಪೆ: ಕ್ರಿಕ್‌ಇನ್ಫೊ

– ವೇದಾ ಕೃಷ್ಣಮೂರ್ತಿ, ಮಹಿಳಾ ಕ್ರಿಕೆಟ್‌ ಆಟಗಾರ್ತಿ

Advertisement

Udayavani is now on Telegram. Click here to join our channel and stay updated with the latest news.

Next