Advertisement

ಅಂಕೋಲಾ: ಹೃದಯಾಘಾತವಾಗಿ ಬಂದ ವ್ಯಕ್ತಿಗೆ ಸಕಾಲದಲ್ಲಿ ದೊರೆಯದ ಚಿಕಿತ್ಸೆ ; ಸಾವು

09:57 PM Jul 29, 2023 | Team Udayavani |

ಅಂಕೋಲಾ : ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದ ವ್ಯಕ್ತಿಯೊರ್ವರನ್ನ, ಆಸ್ಪತ್ರೆಯ ಬಾಗಿಲಲ್ಲೆ ನಿಲ್ಲಿಸಿದ ಪರಿಣಾಮ, ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಶುಕ್ರವಾರ ತಡರಾತ್ರಿ ಅಸುನೀಗಿದ ಘಟನೆ ಬೆಳಕಿಗೆ ಬಂದಿದೆ.

Advertisement

ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಸಮೀಪದ ನಿವಾಸಿ ವೆಂಕಟೇಶ ರಾಮಾ ನಾಯ್ಕ ಅವರಿಗೆ ಶುಕ್ರವಾರ ಒಮ್ಮೆಲೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೆ ಚಿಕಿತ್ಸೆಗಾಗಿ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾತ್ರಿ 12-10 ರ ಸುಮಾರಿಗೆ ಕರೆ ತರಲಾಗಿತ್ತು. ಆದರೆ 24 ಗಂಟೆಗಳ ಕಾಲ ತೆರೆದಿಡಬೇಕಾಗಿದ್ದ ಆಸ್ಪತ್ರೆಯ ಬಾಗಿಲು ಮಾತ್ರ ಮುಚ್ಚಿತ್ತು. ಸುಮಾರು 5-6 ನಿಮಿಷಗಳ ಕಾಲ ಬಾಗಿಲಲ್ಲೆ ನಿಂತು ಕರೆಯತೊಡಗಿದರು ಯಾರೊಬ್ಬರು ಪತ್ತೆ ಇರಲಿಲ್ಲ. ಆಗ ಆಕಳಿಸುತ್ತ ಬಂದ ಅಟೆಂಡರ್ ಒರ್ವ ಅಸಭ್ಯವಾಗಿ ವರ್ತಿಸುತ್ತಾ ಅಂತೂ-ಇಂತೂ ಬಾಗಿಲು ತೆರೆದಿದ್ದಾನೆ. ವೀಲ್ ಚೇರ್ ನಲ್ಲಿ ಕುಳಿಸಲು ಮುಂದಾದಾಗ ಕೂಡ ಯಾಕೆ ಗಡಿಬಿಡಿ ಮಾಡ್ತೀರಿ ಎಂದು ಕೋಪವನ್ನು ಪ್ರದರ್ಶಿಸಿದ್ದಾನೆ ಎಂದು ರೋಗಿಯ ಸಂಬಂಧಿಕರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ತುರ್ತು ಚಿಕಿತ್ಸಾ ಘಟಕದಲ್ಲಿ ಡಾ. ಗಿರೀಶ ಭೂತೆ ಅವರು ಕೂಡಲೆ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಿ, ಮಾರ್ಗ ಮಧ್ಯೆಯೇ ಮೃತ ಪಟ್ಟಿದ್ದಾರೆ ಎಂದು ವರದಿ ನೀಡಿದ್ದಾರೆ. ಡಾ. ಗಿರೀಶ ಭೂತೆ ಅವರು ರೋಗಿ ಹಾಗೂ ಅವರ ಸಂಬಂಧಿಕರೊಂದಿಗೆ ಉತ್ತಮವಾಗಿ ವ್ಯವಹರಿಸಿ ಸಾಂತ್ವನ ಹೇಳಿದ್ದಾರೆ.

ಆದರೆ 24 ಗಂಟೆಯು ಆಸ್ಪತ್ರೆಯ ಬಾಗಿಲನ್ನು ತೆರೆದಿಡಬೇಕಾದ ಸಿಬಂದಿ ಮಾತ್ರ, ಆಸ್ಪತ್ರೆಯ ಒಳಗೆ ಬಿಟ್ಟುಕೊಳ್ಳಲು ತಡ ಮಾಡಿದ್ದೇಕೆ. ಈ ಎಲ್ಲಾ ಅಮಾನವೀಯ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ. ಸಂತೋಷಕುಮಾರ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮೃತನ ಸಹೋದರ ಶ್ರೀನಿವಾಸ ರಾಮಾ ನಾಯಕ ಆಗ್ರಹಿಸಿದ್ದಾರೆ.

ಮೃತ ವೆಂಕಟೇಶ ಅವರು ಸೌಮ್ಯ ಸ್ವಭಾವದವರಾಗಿದ್ದು, ಎಲ್ಲರಿಗೂ ಬೇಕಾದವನಾಗಿದ್ದರು. ಅಪಾರ ದೈವ ಭಕ್ತನಾಗಿ ತನ್ನ ಕುಟುಂಬವನ್ನು ಕಟ್ಟಿಕೊಂಡಿದ್ದ. ಮೃತರು ಪತ್ನಿ ಶಕುಂತಲಾ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next