Advertisement

ಮನೆ ಬಾಗಿಲಿಗೆ ಹೃದಯ ವೈದ್ಯರು

03:07 PM Nov 11, 2019 | Suhan S |

ಹೊನ್ನಾವರ: ಹಗಲು, ರಾತ್ರಿ ರೋಗಿಗಳ ಹೃದಯದ ಏರುಪೇರಿಗೆ ಸ್ಪಂದಿಸುವ ಡಾ| ಪದ್ಮನಾಭ ಕಾಮತ್‌ ಅವರ ಆಲೋಚನೆ ಮನೆಬಾಗಿಲಿಗೆ ಹೃದಯ ವೈದ್ಯರು (ಕಾರ್ಡಿಯೋಲಜಿಸ್ಟ್‌ ಎಟ್‌ ಡೋರ್‌ ಸ್ಟೆಪ್‌) ಇಷ್ಟೊಂದು ಯಶಸ್ವಿಯಾಗುತ್ತದೆ ಎಂದು ಅವರಿಗೂ ಕಲ್ಪನೆ ಇರಲಿಕ್ಕಿಲ್ಲ. 2018ರಲ್ಲಿ ಆರಂಭವಾದ ಈ ಯೋಜನೆ ಈವರೆಗೆ 2,750ಕ್ಕೂ ಹೃದಯ ಸಂಬಂಧಿ ಕಾಯಿಲೆಯನ್ನು ಗುರುತಿಸಿ, ತುರ್ತು ಸಲಹೆ ನೀಡಿ ಅವರ ಜೀವ ಉಳಿಸಲು ನೆರವಾಗಿದೆ. 11,670 ಜನ ಈ ಯೋಜನೆಗೆ ಸ್ಪಂದಿಸಿದ್ದಾರೆ.

Advertisement

ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಹೃದಯ ವಿಭಾಗದ ಮುಖ್ಯಸ್ಥರಾಗಿರುವ ಡಾ| ಪದ್ಮನಾಭ ಕಾಮತ್‌ ಯಕ್ಷಗಾನ ಪ್ರಿಯರು. ಹಳ್ಳಿಗೆ ಆಟಕ್ಕೆ ಹೋದಾಗ ಯಾರಿಗೋ ಹೃದಯಾಘಾತವಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿರುವುದನ್ನು ಕಂಡು ಮನನೊಂದು ಈ ಯೋಜನೆ ಹುಟ್ಟುಹಾಕಿದರು. 2019ರಲ್ಲಿ ಈ ಯೋಜನೆ ವಿಸ್ತರಿಸಿದರು. ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ದಾನಿಗಳಿಂದ ಇಸಿಜಿ ಉಪಕರಣ ಪಡೆದು ವೈದ್ಯರಿಗೆ ಮತ್ತು ನರ್ಸ್‌ಗಳಿಗೆ ಮಾಹಿತಿ ನೀಡಿ ಎದೆ ನೋವಿನ, ಹೃದಯಾಘಾತದ ಲಕ್ಷಣದ ರೋಗಿಗಳು ಬಂದರೆ ಅವರ ಇಸಿಜಿ ತೆಗೆದು ತಕ್ಷಣ ಸಿಎಡಿ ವಾಟ್ಸ್‌ಆ್ಯಪ್‌ ಗ್ರೋಪ್‌ಗೆ ವಾಟ್ಸ್‌ಆ್ಯಪ್‌ ಮುಖಾಂತರ ಕಳಿಸಬೇಕು. ತಕ್ಷಣ ಡಾ| ಕಾಮತ್‌ ಅಥವಾ ಅವರ ಬಳಗದವರು ಅಗತ್ಯವಿದ್ದರೆ ತುರ್ತು ಚಿಕಿತ್ಸೆ ಮತ್ತು ಹೆಚ್ಚಿನ ಚಿಕಿತ್ಸೆಗೆ ಸಮೀಪದ ಹೃದಯ  ವೈದ್ಯರನ್ನು ಕಾಣಲು ಸೂಚಿಸುತ್ತಾರೆ.

ಈ ಸೂಚನೆ ಪಾಲಿಸಿದ 550ಕ್ಕೂ ಹೆಚ್ಚು ಜನ ಈ ವರೆಗೆ ಜೀವ ಉಳಿಸಿಕೊಂಡಿದ್ದಾರೆ. ಕಾರ್ಡಿಯೋಲಜಿ ಎಟ್‌ ಡೋರ್‌ ಸ್ಟೆಪ್‌ ಎಂದು ಹೆಸರಿಟ್ಟ ಈ ಯೋಜನೆಯಲ್ಲಿ ಕಾಮತರ ಜೊತೆ 1,250 ವೈದ್ಯರು ಕೈಜೋಡಿಸಿದ್ದಾರೆ. ಐದು ವಾಟ್ಸಾಆ್ಯಪ್‌ ಗುಂಪುಗಳಿವೆ. ಮೂರು ಗುಂಪು ಕರ್ನಾಟಕದಲ್ಲಿ, ಒಂದು ದೇಶಾದ್ಯಂತ, ಇನ್ನೊಂದು ಗುಂಪು ಮಹಾರಾಷ್ಟ್ರದಲ್ಲಿ ಮಾತ್ರ ಸಲಹೆ ನೀಡುತ್ತದೆ.

ಈವರೆಗೆ ದಾನಪಡೆದು ಉತ್ತರ ಕನ್ನಡ ಸಹಿತ ಕರ್ನಾಟಕದ 16 ಜಿಲ್ಲೆಗಳಲ್ಲಿ, ಕೇರಳದ 1, ಉತ್ತರಾಖಂಡದ 1 ಮತ್ತು ಮಹಾರಾಷ್ಟ್ರದ 8 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತದೆ. ದಿನಕ್ಕೆ 50-60 ಇಸಿಜಿಗಳು ಬರುತ್ತದೆ. ಇದರ ಹೊರತಾಗಿ ಹೃದಯ ಸಮಸ್ಯೆ ಇಲ್ಲದ ವಿಷಯ ತಿಳಿದು ಸಂತೋಷಪಟ್ಟವರು ಅಸಂಖ್ಯ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಲ್ಲಿ 125 ಇಸಿಜಿ ಯಂತ್ರಗಳು ಕಾರ್ಯಾಚರಿಸುತ್ತಿದೆ.  16ನೇ ಜಿಲ್ಲೆಯಾಗಿ ಮಂಡ್ಯ ಸೇರ್ಪಡೆಯಾಗಿದ್ದು, 205ನೇ ಇಸಿಜಿ ಯಂತ್ರವನ್ನು ಮಂಡ್ಯಕ್ಕೆ ನೀಡಲಾಗುತ್ತಿದೆ.

ಇದಲ್ಲದೇ ಜನೌಷಧಿ ಕೇಂದ್ರಗಳಿಗೂ ಇಸಿಜಿ ಯಂತ್ರಗಳನ್ನು ನೀಡಲಾಗಿದ್ದು, ಹೃದಯ ಸಮಸ್ಯೆ ಉಳ್ಳವರು ಅಲ್ಲಿ ಇಸಿಜಿ ಮಾಡಿಸಿ ತಮ್ಮ ವೈದ್ಯರುಗಳಿಂದ ವಾಟ್ಸ್‌ ಆ್ಯಪ್‌ ಸಲಹೆ ಪಡೆದು ಔಷಧ ಡೋಸ್‌ಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೊದಲಾದ ಜಾಲತಾಣಗಳನ್ನು ಜನ ಟೀಕೆಮಾಡುತ್ತಾರೆ, ಸಜ್ಜನರ ಕೈಯಲ್ಲಿ ಇಂತಹ ಆಧುನಿಕ ತಂತ್ರಜ್ಞಾನ ಸಿಕ್ಕರೆ ಅದೆಷ್ಟು ಫಲಕಾರಿಯಾಗಬಹುದು ಎಂಬುದಕ್ಕೆ ಡಾ| ಕಾಮತ್‌ ಅವರ ಬಳಗವೇ ಸಾಕ್ಷಿ. ಇಂತಹ ಹೃದಯವಂತ ವೈದ್ಯರು ನಾಡಿನ ಸಂಪತ್ತು. ಹೃದಯ ಚಿಕಿತ್ಸಾ ಸೌಲಭ್ಯವಿಲ್ಲದ ಉತ್ತರ ಕನ್ನಡ ಮಟ್ಟಿಗೆ ಇದು ವರವಾಗಿದೆ.

Advertisement

 

-ಜೀಯು ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next