ಕಲಬುರಗಿ: ಉತ್ತಮ ಜೀವನ ಶೈಲಿ ಹಾಗೂ ನಿಯಮಿತ ದಿನಚರಿ ಆಳವಡಿಸಿಕೊಂಡರೆ ಬಹುತೇಕ ಹೃದಯ ಸಂಬಂಧಿ ಕಾಯಿಲೆ ದೂರಮಾಡಬಹುದು ಎಂದು ಕೆಬಿಎನ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಡಾ| ಜಗನ್ನಾಥ ಬಿಜಾಪುರ
ತಿಳಿಸಿದರು.
ನಗರದ ಕೆಬಿಎನ್ ವಿಶ್ವವಿದ್ಯಾಲಯವು ಬಿಬಿ ರಜಾ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಬಹುದು ಎಂದರು.
ಹೃದಯಕ್ಕೆ ಸಂಬಂಧಿ ಕಾಯಿಲೆಗಳಿಗೆ ಜಾಗೃತಿ ಅಗತ್ಯ. ನಿರ್ಲಕ್ಷಿಸಿದರೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ| ಜೇಬಾ ಪರ್ವಿನ್ ಮಾತನಾಡಿ, ಹೃದಯವನ್ನು ದೇಹದ ಮೆದುಳು ಎಂದು ಕರೆಯುಲಾಗುತ್ತದೆ. ಹೃದಯ ಮಾನವ ಶರೀರದ ಮಹತ್ವದ ಅಂಗ. ಅದು ಯೋಚಿಸುವ, ಅನುಭವಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ ಹೊಂದಿದೆ. ಪ್ರತಿಯೊಬ್ಬರಿಗೂ ಹೃದಯದ ಮಹತ್ವ ಗೊತ್ತಾಗಬೇಕು. ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದರು.
ಕೆಬಿಎನ್ ಸಂಸ್ಥೆ ಸಿಇಒ ಡಾ| ಪಿ.ಎಸ್. ಶಂಕರ ಉದ್ಘಾಟಿಸಿದರು. ಡಾ| ಮೈನೂದ್ದೀನ್, ಡಾ| ಮಹ್ಮದ ಅಲಿ ಭಾಗವಹಿಸಿದ್ದರು. ಡಾ| ನಯ್ಯರ್ ಜಹಾನ ಸ್ವಾಗತಿಸಿದರು. ಖೈರುನ್ನಿಸಾ ನಿರೂಪಿಸಿದರು. ಡಾ| ಆಸ್ಮಾ ತಬಸುಮ ವಂದಿಸಿದರು.