Advertisement

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

12:06 PM Dec 29, 2024 | Team Udayavani |

ಈ ಲೇಖನವು ಯಾರನ್ನೂ ಗಾಬರಿಗೊಳಿಸುವ ಉದ್ದೇಶ ಹೊಂದಿಲ್ಲ; ಬದಲಾಗಿ ದಿನನಿತ್ಯ ನಾವು ಕಣ್ಮುಂದೆ ಇಂತಹ ಘಟನೆಗಳನ್ನು ನೋಡುತ್ತಿರುವ ಕಾರಣ ಸಾಮಾಜಿಕ ಅರಿವು ಮೂಡಿಸಿ ಎಲ್ಲರಿಗೂ ಒಳ್ಳೆಯ ಆರೋಗ್ಯ ದೊರಕುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನವಾಗಿದೆ.

Advertisement

ಮನುಷ್ಯ ಮುಂಬರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮೊದಲೇ ತಿಳಿದುಕೊಂಡರೆ ಅಥವಾ ಅವುಗಳ ಬಗ್ಗೆ ಅರಿತುಕೊಂಡು ಅದಕ್ಕೆ ಬೇಕಾಗುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಆರಾಮವಾಗಿ ಜೀವನ ನಡೆಸಬಹುದು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಹೃದಯಾಘಾತ. ಹೃದಯಾಘಾತ ಕಂಡುಬರುವ ಮೊದಲು ಕೆಲವು ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಕೂಡಲೇ ಎಚ್ಚರಗೊಂಡು, ಚಿಕಿತ್ಸೆ ಪಡೆದುಕೊಂಡರೆ ಪ್ರಾಣಾಪಾಯದಿಂದ ಪಾರಾಗಬಹುದು. ಹೆಚ್ಚಾಗಿ ಎದೆಯಲ್ಲಿ ಕಾಣಿಸಿಕೊಳ್ಳುವ ಎದೆ ಉರಿಯನ್ನು ಜನರು ತಪ್ಪಾಗಿ ಆರ್ಥೈಸಿಕೊಳ್ಳುವುದು ಸಾಮಾನ್ಯವಾಗಿದೆ ಹಾಗೂ ಇದರಿಂದಲೇ ಹೆಚ್ಚಾಗಿ ಸಮಸ್ಯೆ ಉಲ್ಬಣಗೊಳ್ಳುವುದು.

ಒಂದು ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಂಡು ಲೇಖನವನ್ನು ಮುಂದುವರಿಸುತ್ತೇವೆ.

ಸರಿಸುಮಾರು 60 ವರ್ಷ ಪ್ರಾಯದ ಕಟ್ಟುಮಸ್ತಾದ ವ್ಯಕ್ತಿಗೆ ಹೃದಯದ ಮಧ್ಯಭಾಗದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಹಾಗೂ ಅದು ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ವ್ಯಕ್ತಿಯು ತನ್ನ ಆಪ್ತರಲ್ಲಿ ಹಾಗೂ ಪರಿಚಯದವರಲ್ಲಿ ಇದರ ಬೆಗ್ಗೆ ವಿಚಾರಿಸುತ್ತಾರೆ. ಆಗ ಅವರಿಗೆ, “ಇದು ಗ್ಯಾಸ್ಟ್ರಿಕ್‌ ಸಮಸ್ಯೆ, ತತ್‌ಕ್ಷಣ ಜೀರಿಗೆ ಹಾಗೂ ಶುಂಠಿ ಕಷಾಯ ಮಾಡಿ ಕುಡಿದರೆ ಸರಿಹೋಗುವುದು’ ಎಂಬ ಉತ್ತರ ಸಿಕ್ಕಿತು. ಇದನ್ನು ನಂಬಿದ ಆ ವ್ಯಕ್ತಿ ಅದೇ ರೀತಿ ಮಾಡಿದರೂ ಉರಿ ಕಮ್ಮಿ ಆಗದ ಕಾರಣ ಇನ್ನು ಕೆಲವರಲ್ಲಿ ವಿಚಾರಿಸಿ ಮನೆಯಲ್ಲಿರುವ ಕೆಲವು ಮಾತ್ರೆಗಳನ್ನು ಸೇವಿಸಿದ್ದಾಯಿತು. ಹಾಗೇ ಗಂಟೆಗಳು ಕಳೆದು ಸುಮಾರು ಹೊತ್ತಿನ ಬಳಿಕ ನೆರೆಕರೆಯವರಲ್ಲಿ ಚರ್ಚಿಸಿ, ಕೊನೆಗೆ ಧೈರ್ಯ ಪಡೆದುಕೊಂಡು ಸಾಯಂಕಾಲದ ವೇಳೆಗೆ ಮನೆಯ ಹತ್ತಿರದಲ್ಲಿರುವ ವಾರದ ಸಂತೆಗೆ ತೆರಳಿದರು. ಅಲ್ಲಿ ತಿರುಗಾಡಿ ತರಕಾರಿ ಸಾಮಗ್ರಿಗಳನ್ನೆಲ್ಲ ಹೊತ್ತುಕೊಂಡು ಮನೆಗೆ ಬಂದು ರಾತ್ರಿ ಊಟ ಮಾಡಿ ಮಲಗಿದರು. ಮಧ್ಯರಾತ್ರಿಯಲ್ಲಿ ಪುನಃ ಸಮಸ್ಯೆ ತಲೆದೋರಿದಾಗ ಮನೆಯವರಿಗೆ ಯಾರಿಗೂ ತೊಂದರೆ ಕೊಡಬಾರದೆಂದು ಮತ್ತೆ ತನ್ನಷ್ಟಕ್ಕೆ ಏನೋ ಮಾತ್ರೆ ತೆಗೆದುಕೊಂಡು ಮಲಗಿದರು. ಮರುದಿನ ಎದ್ದ ಮೇಲೆ ತುಂಬಾ ಆಯಾಸ ಎನಿಸಿತು. ಇನ್ನು ತಡೆದುಕೊಳ್ಳಲು ಕಷ್ಟ ಅನ್ನಿಸಿದಾಗ ಇನ್ನೊಬ್ಬರ ಸಹಾಯ ಪಡೆದು ಹತ್ತಿರದ ಕ್ಲಿನಿಕ್‌ಗೆ ಭೇಟಿ ನೀಡಿದರು. ಅಲ್ಲಿ ಅವರಿಗೆ ಇಸಿಜಿ ಮಾಡಿಸಲು ಸೂಚಿಸಿದರು. ಇಸಿಜಿಯಲ್ಲಿ ಹೃದಯಾಘಾತ ಆಗಿರುವ ಲಕ್ಷಣಗಳು ಕಂಡುಬಂದವು. ಅದಾಗಲೇ ಹೃದಯಾಘಾತದ ಲಕ್ಷಣಗಳು ಆರಂಭವಾಗಿ 24 ಗಂಟೆಗಳು ಕಳೆದಿದ್ದವು. ಅಲ್ಲಿಂದ ಅವರನ್ನು ಸಮೀಪದ ಹೃದ್ರೋಗ ಚಿಕಿತ್ಸಾ ವಿಭಾಗಕ್ಕೆ ಕಳುಹಿಸಲಾಯಿತು. ಹೃದ್ರೋಗ ವಿಭಾಗದಲ್ಲಿ ಪರೀಕ್ಷಿಸಿದಾಗ ವ್ಯಕ್ತಿಯ ಎರಡು ಹೃತ್ಕುಕ್ಷಿಗಳ ಮಧ್ಯಭಾಗದ ಗೋಡೆಯು ಹರಿದಿರುವುದು (Ventricular Septal Rupture) ಕಂಡುಬಂತು ಹಾಗೂ ಸಾಕಷ್ಟು ದೊಡ್ಡದಾದ ತೂತು ಬಿದ್ದಿರುವುದು ಕಂಡುಬಂತು. ಅಲ್ಲದೆ ಹೃದಯದ ಪಂಪಿಂಗ್‌ ಸಾಮರ್ಥ್ಯ ತೀವ್ರವಾಗಿ ಕುಸಿದಿತ್ತು. ಎಡ ಹೃತ್ಕುಕ್ಷಿಯಿಂದ ಬಲಹೃತ್ಕುಕ್ಷಿಗೆ ತೂತಿನ ಮೂಲಕ ಸರಾಗವಾಗಿ ರಕ್ತ ಹರಿಯುತ್ತಿತ್ತು. ಇದು ಗಂಭೀರವಾದ ಸಮಸ್ಯೆಯಾಗಿದ್ದು, ವ್ಯಕ್ತಿಗೆ ತುರ್ತು ಹೃದಯದ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ಶಸ್ತ್ರಚಿಕಿತ್ಸೆಯಲ್ಲೂ ಕೂಡ ಯಶಸ್ಸು ಶೇ. 40-50 ಮಾತ್ರವಾಗಿರುತ್ತದೆ.

Advertisement

ತೀವ್ರ ಹೃದಯಾಘಾತದ ಲಕ್ಷಣಗಳು

 ಇದ್ದಕ್ಕಿದ್ದಂತೆ ಎದೆಯಲ್ಲಿ ನೋವು, ಎದೆಯ ಮಧ್ಯ ಭಾಗದಲ್ಲಿ ಉರಿ, ಒತ್ತಡ, ಎದೆ ಭಾರ ಕಾಣಿಸಿಕೊಳ್ಳುವುದು, ಕೆಲವೊಮ್ಮೆ ಈ ನೋವು ಭುಜ ಮತ್ತು ಕುತ್ತಿಗೆಗೆ ಹರಿದುಹೋಗುವುದು.

 ತೀವ್ರ ಆಯಾಸ , ಸುಸ್ತು ಉಂಟಾಗುವುದು

 ಹೃದಯ ಬಡಿತದಲ್ಲಿ ಏರುಪೇರು ಕಂಡುಬರುವುದು.

 ಕೆಲವೊಮ್ಮೆ ವಾಂತಿಭೇಧಿ ಆಗಲೂಬಹುದು

 ಪದೇ ಪದೇ ಕೆಮ್ಮು ಬರುವುದು ಕೂಡ ಹೃದಯ ಸಂಬಂಧಿ ಕಾಯಿಲೆಗಳ ಲಕ್ಷಣವಾಗಿದೆ.

ಇದನ್ನು ಹೊರತುಪಡಿಸಿ ಕೆಲವೊಮ್ಮೆ ಹೃದಯಾಘಾತದ ಲಕ್ಷಣಗಳು ಅಸ್ಪಷ್ಟವಾಗಿರುತ್ತವೆ

(Vague Symptoms ). ಇಂತಹ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಾತ್ಸಾರ ಮಾಡದೆ, ತಡಮಾಡದೆ ಇತರರಿಗೆ ತನ್ನಿಂದ ತೊಂದರೆಯಾಗುತ್ತದೆ ಎಂದು ಭಾವಿಸದೆ, ಸಮೀಪದಲ್ಲಿರುವ ವೈದ್ಯಕೀಯ ಸಹಾಯವನ್ನು ತತ್‌ಕ್ಷಣವೇ ಪಡೆದುಕೊಳ್ಳಬೇಕು. ಇಸಿಜಿಯಂತಹ ಸುಲಭವಾಗಿ ಕೈಗೆಟಕುವ ಪರೀಕ್ಷೆಗಳಿಗೆ ಒಳಗಾಗಬೇಕು. ಯಾವುದೇ ಕಾರಣಕ್ಕೂ ಹೃದಯಾಘಾತ ಇಲ್ಲವೆಂದು ದೃಢೀಕರಿಸುವವರೆಗೆ ವ್ಯಕ್ತಿಯು ಹೆಚ್ಚಿಗೆ ನಡೆಯುವುದಾಗಲಿ, ಮೆಟ್ಟಿಲು ಹತ್ತುವುದಾಗಲಿ, ವಾಹನ ಚಾಲನೆ ಮಾಡುವುದಾಗಲಿ ಖಂಡಿತವಾಗಿಯೂ ಮಾಡಬಾರದು.

ಒಂದು ವೇಳೆ ತೀವ್ರ ಹೃದಯಾಘಾತಕ್ಕೆ ಚಿಕಿತ್ಸೆ ತುಂಬಾ ತಡವಾದಲ್ಲಿ ಕೆಲವು ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗುವುದು.

 ಹೃದಯದ ಪಂಪಿಂಗ್‌ ಸಾಮರ್ಥ್ಯ ಕುಸಿಯುತ್ತ ಬರುವುದು. ಇದರಿಂದಾಗಿ ವ್ಯಕ್ತಿಯು ಸ್ವಲ್ಪ ಕೆಲಸ ಮಾಡಿದರೂ ಆಯಾಸ, ಸುಸ್ತು ಕಂಡುಬರುವುದು.

 ಕವಾಟಗಳು ದುರ್ಬಲಗೊಂಡು ಸೋರಿಕೆಯಾಗುವುದು. ಇದರಿಂದಾಗಿ ವ್ಯಕ್ತಿಗೆ ಅಲ್ಪಸ್ವಲ್ಪ ನಡೆದರೂ ಆಯಾಸ, ಸುಸ್ತು ಕಂಡುಬರುವುದು ಹಾಗೂ ಹೃದಯದ ಕೋಣೆಗಳು ವಿಕಸನಗೊಳ್ಳುತ್ತವೆ.

 ಹೃದಯಾಘಾತವಾದ ಭಾಗದ ಅಂಗವು ನಿರ್ಜೀವಗೊಂಡು (scar tissue) ಆ ಭಾಗದಿಂದ ಜೀವಕ್ಕೆ ಅಪಾಯವಾಗುವ ವಿದ್ಯುತ್‌ ಅಲೆಗಳು (VT/VF) ಉಗಮವಾಗುವ ಸಾಧ್ಯತೆ ಇರುತ್ತದೆ.

 ಹೃತ್ಕುಕ್ಷಿಗಳ ನಡುವಿನ ಗೋಡೆ ಹರಿದುಹೋಗಬಹುದು (VR).

ಹೃದಯದ ಸ್ನಾಯುಗಳೇ ಸಪೂರವಾಗಿ ಹರಿದುಹೋದರೆ ತತ್‌ಕ್ಷಣ ಸಾವು ಸಂಭವಿಸಬಹುದು (Sudden Cardiac Death).

 ಹೃದಯದಲ್ಲಿ ರಕ್ತ ಹೆಪ್ಪುಗಟ್ಟಬಹುದು (Blood Clot). ಈ ಹೆಪ್ಪುಗಟ್ಟಿದ ರಕ್ತವು ದೇಹದ ನಿದೀìಷ್ಟ ಭಾಗಗಳಿಗೆ, ವಿಶೇಷವಾಗಿ ಮೆದುಳಿಗೆ ಹೋಗಬಹುದು. ಇದರಿಂದಾಗಿ ಮೆದುಳಿಗೆ ರಕ್ತದ ಸರಬರಾಜು ಕಡಿಮೆಯಾಗುತ್ತದೆ. ಇದನ್ನು ಪಾರ್ಶ್ವವಾಯು  (Stroke) ಎಂದು ಪರಿಗಣಿಸಲಾಗುತ್ತದೆ.

ಆದ್ದರಿಂದ ಹೃದಯಕ್ಕೆ ಸಂಬಂಧಪಟ್ಟಂತಹ ಯಾವುದೇ ಲಕ್ಷಣಗಳನ್ನು ಕಡೆಗಣಿಸಬಾರದು. ಈ ಎಲ್ಲ ಲಕ್ಷಣಗಳು ನಾವು ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸುವ ಮುನ್ಸೂಚನೆಗಳು. ಹಾಗಾಗಿ ತಾತ್ಸಾರ, ಆಲಸ್ಯ ಹಾಗೂ ಇತರರಿಗೆ ತೊಂದರೆ ಕೊಡಬಾರದು ಎಂಬ ಭಾವನೆಯಿಂದ ಹೊರಬಂದು ತತ್‌ಕ್ಷಣ ವೈದ್ಯಕೀಯ ಸಹಾಯ ಹಾಗು ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ. ಹೃದಯಾಘಾತ ಜೀವನವನ್ನು ಅಪಾಯಕ್ಕೆ ತಲುಪಿಸಬಹುದು. ಆದರೆ ಸೂಕ್ತ ಸಮಯದಲ್ಲಿ ಹಾಗೂ ಸರಿಯಾದ ಚಿಕಿತ್ಸೆಯಿಂದ ಈ ಸಮಸ್ಯೆಗಳ ನಿಯಂತ್ರಣ ಸಾಧ್ಯ ಹಾಗೂ ಮೊದಲಿನಂತೆ ಸಾಮಾನ್ಯ ಜೀವನ (normal life) ನಡೆಸಲು ಸಾಧ್ಯವಾಗುತ್ತದೆ.

-ಶ್ರೀದೇವಿ ಪ್ರಭು

ಅಸಿಸ್ಟೆಂಟ್‌ ಪ್ರೊಫೆಸರ್‌-ಸೆಲೆಕ್ಷನ್‌ ಗ್ರೇಡ್‌

-ಡಾ| ಕೃಷ್ಣಾನಂದ ನಾಯಕ್‌

ಎಡಿಷನಲ್‌ ಪ್ರೊಫೆಸರ್‌ ಮತ್ತು ಮುಖ್ಯಸ್ಥರು

ಹೃದಯ ಹಾಗೂ ಪರಿಚಲನಾ ತಂತ್ರಜ್ಞಾನ ವಿಭಾಗ, ಎಂಸಿಹೆಚ್‌ಪಿ

-ಡಾ| ಟಾಮ್‌ ದೇವಸ್ಯ

ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು

ಹೃದ್ರೋಗ ಚಿಕಿತ್ಸಾ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಹೃದ್ರೋಗ ಚಿಕಿತ್ಸಾ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next