Advertisement
ಅಕಸ್ಮಾತ್ ಕೆಲಸ ಆಗದೇ ಹೋದರೆ? ಪಾರ್ಟಿ, ಕೈಗೆ ಸಿಗದೇ ತಪ್ಪಿಸಿಕೊಂಡರೆ? ಏನಾದ್ರೂ ಎಡವಟ್ಟಾಗಿ ಹುಡುಗರು ಪೊಲೀಸರ ಕೈಗೆ ಸಿಕ್ಕಿಬಿದ್ದರೆ -ಹೀಗೊಂದು ಯೋಚನೆ ಬಂದದ್ದೇ ತಡ, ಒಮ್ಮೆಗೇ ಮೈ ನಡುಗಿತು. ಕಾರಿನ ವೇಗ ತಂತಾನೇ ತಗ್ಗಿತು. ಹೆದರಿಕೆ, ಗಾಬರಿ, ಅನುಮಾನಗಳೆಲ್ಲ ಜೊತೆಯಾದರೆ ನೆಮ್ಮದಿಯಿಂದ ಪ್ರಯಾಣಿಸಲು ಆಗುವುದಿಲ್ಲ. ಒಂದೈದು ನಿಮಿಷ ಎಲ್ಲಾದ್ರೂ ನಿಂತು ಮೈ-ಮನಸ್ಸಿಗೆ ರೆಸ್ಟ್ ಕೊಡಬೇಕು ಅನ್ನಿಸಿತು. ಮರು ಕ್ಷಣವೇ ಕಾರನ್ನು ಒಂದು ಕಡೆ ನಿಲ್ಲಿಸಿ, ಒಂದು ಸಿಗರೇಟು ಸೇದಿ ರಿಲ್ಯಾಕ್ಸ್ ಆದ. ಆಗಲೇ ಅವನ ಒಳಮನಸ್ಸು ಪಿಸುಗುಟ್ಟಿತು: “ಪ್ರೊಫೆಶನ್ ಅಂದಮೇಲೆ ಇದೆಲ್ಲಾ ಇದ್ದದ್ದೇ. ಅದರಲ್ಲೂ ಅಂಡರ್‌ವರ್ಲ್ಡ್ ಅಂದಮೇಲೆ ಇಂಥಾ ರಿಸ್ಕ್ಗಳು, ಟಾಸ್ಕ್ಗಳು ಮಾಮೂಲಿ. ಹೇಗಿದ್ರೂ ಒಪ್ಪಿಕೊಂಡು ಆಗಿದೆ. ಆಗಿದ್ದು ಆಗಿಬಿಡಲಿ. ಈ ಕೆಲಸ ಮಾಡುವುದೇ ಸೈ…’
Related Articles
Advertisement
ಹುಡುಗರೆಲ್ಲಾ ಫ್ರೆಶ್ ಆಗಿದ್ದಾರೆ. ಜೋಶ್‌ನಲ್ಲೂ ಇದ್ದಾರೆ. ಚೆನ್ನಾಗಿ ಹೋಂವರ್ಕ್ ಮಾಡಿದಾರೆ. ಸೋ, ಫೇಲ್ ಆಗುವ ಛಾನ್ಸ್ ಇಲ್ಲ. ನಾಳೆ ಎಷ್ಟು ಗಂಟೆಗೆ ಬ್ರೇಕಿಂಗ್ ನ್ಯೂಸ್ ಬರಬಹುದು… ಹೀಗೆಲ್ಲ ಯೋಚಿಸುತ್ತಲೇ ಒಮ್ಮೆ ಸುತ್ತಲೂ ನೋಡಿದ. ಇದ್ದಕ್ಕಿದ್ದಂತೆ ಕತ್ತಲಾದಂಥ ಅನುಭವವಾಯ್ತು. ಓಹ್, ಆಗಲೇ ಶಿರಾಡಿ ಘಾಟ್ ಬಂದೇ ಬಿಡ್ತು ಅಂದುಕೊಳ್ಳುತ್ತಿದ್ದಾಗಲೇ, ಹಿಂದಿದ್ದ ಕಾರಿನ ವನು ಟೀಂಕ್ ಟೀಂಕ್ ಟೀಂಕ್ ಟೀಂಕ್ ಎಂದು ಒಂದೇ ಸಮನೆ ಹಾರ್ನ್ ಮಾಡಿ ಸೈಡ್ ಕೇಳತೊಡಗಿದ. ಮತ್ತೂಬ್ಬರು ಓವರ್‌ಟೇಕ್ ಮಾಡುವುದನ್ನು ಯಾವತ್ತಿಗೂ ಸಹಿಸದ ವರದ, ಬೇರೆ ಸಂದರ್ಭದಲ್ಲಾಗಿದ್ದರೆ, ಆ ಕಾರನ್ನು ಅಡ್ಡಗಟ್ಟಿ, ಡ್ರೈವರನ್ನು ಹೊರಕ್ಕೆಳೆದು, ಎರಡೇಟು ಹಾಕಿ- “ನನಗೇ ಸೈಡ್ ಹೊಡೆಯುವಷ್ಟು ಧಮ್ ಇದೆಯೇನೋ?’ ಎಂದು ಕೇಳುತ್ತಿದ್ದನೇನೋ. ಆದರೆ ಇವತ್ತು ಮನಸ್ಸು ಬೇರೆಯದೇ ಯೋಚನೆಯಲ್ಲಿತ್ತು. ಥತ್, ಒಂದೇ ಸಮ ಹಾರ್ನ್ ಮಾಡಿ ಡಿಸ್ಟರ್ಬ್ ಮಾಡ್ತಿದಾನೆ. ಹಾಳಾಗಿಹೋಗ್ಲಿ ಅತ್ಲಾಗೆ ಎಂದು ಬೈದುಕೊಂಡೇ ಸೈಡ್ ಕೊಟ್ಟ. ಗಂಡ-ಹೆಂಡತಿ-ಮಗುವಿದ್ದ ಒಂದು ಕಾರು, ರೊಯ್ಯನೆ ಮುಂದೆ ಹೋಯಿತು…
“ಯಾರು ಅಂತ ಗೊತ್ತಿಲ್ಲ ಸರ್. ಸ್ಪೀಡಾಗಿ ಬಂದು ಮರಕ್ಕೆ ಗುದ್ದಿಸಿದಾನೆ. ಎಲ್ರಿಗೂ ತುಂಬಾ ಪೆಟ್ಟಾಗಿದೆ. ನಾವು ಹಳ್ಳಿ ಜನ. ನಮ್ಗೆàನೂ ಗೊತ್ತಾಗಲ್ಲ. ಈಗ, ಹತ್ತು ನಿಮಿಷದ ಹಿಂದಷ್ಟೇ ಈ ಆ್ಯಕ್ಸಿಡೆಂಟ್ ಆಯ್ತು…’ ವರದನ ಕಾರಿಗೆ ಅಡ್ಡಲಾಗಿ ನಿಂತ ಜನ ಹೀಗೆಂದರು. ಅಲ್ಲಿಂದ ಸ್ವಲ್ಪ ದೂರದಲ್ಲಿ, ಒಂದು ಕಾರು, ಮರ ವೊಂದನ್ನು ಅಪ್ಪಿಕೊಂಡಂತೆ ನಿಂತಿತ್ತು. ಅದನ್ನು ನೋಡುತ್ತಿ ದ್ದಂತೆಯೇ, 15 ನಿಮಿಷದ ಹಿಂದಷ್ಟೇ ತನ್ನನ್ನು ಓವರ್‌ಟೇಕ್ ಮಾಡಿದ ಕಾರೇ ಇದೆಂದು ವರದನಿಗೆ ಗೊತ್ತಾಯ್ತು. ಕೇಸ್ ಬೀಳಬಹುದು ಎಂಬ ಕಾರಣದಿಂದ, ಆ್ಯಕ್ಸಿಡೆಂಟ್ ಆಗಿದ್ದನ್ನು ನೋಡಿದರೂ, ಆ ಕಾರನ್ನು ಮುಟ್ಟುವ ರಿಸ್ಕನ್ನೂ ಎದುರಿಗಿದ್ದ ಜನ ತಗೊಂಡಿರಲಿಲ್ಲ. ಬದಲಿಗೆ, ಹಿಂದಿನಿಂದ ಬಂದ ವರದನ ವಾಹನವನ್ನು ಅಡ್ಡಗಟ್ಟಿ ವಿಷಯ ತಿಳಿಸಿದ್ದರು.
ಆ್ಯಕ್ಸಿಡೆಂಟ್‌ಗೆ ತುತ್ತಾದವರು ಕಾರ್‌ನ ಒಳಗೇ ಸಿಕ್ಕಿಕೊಂಡಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಸ್ಪ್ರಿಂಗ್‌ನಂತೆ ಜಿಗಿದು ಓಡಿಹೋದ ವರದರಾಜ್. ಕಾರು ಗುದ್ದಿದ ರಭಸಕ್ಕೆ, ಒಳಗಿದ್ದ ಮೂವರೂ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೆಲವೇ ಕ್ಷಣಗಳ ಹಿಂದೆ, ಒಂದು ಕೈಲಿ ಲಾಲಿಪಪ್ ಹಿಡಿದುಕೊಂಡೇ- ಓವರ್‌ಟೇಕ್ ಮಾಡಿದಾಗ ಟಾಟಾ ಮಾಡಿದ್ದ ಮಗು, ಆಗಷ್ಟೇ ನಿದ್ರೆಗೆ ಜಾರಿದಂತೆ ಕಾಣುತ್ತಿತ್ತು. “ಓಡಿ ಬನ್ರೀ, ಇವರನ್ನು ಆಸ್ಪತ್ರೆಗೆ ಸೇರಿಸಬೇಕು. ಬೇಗ ಬನ್ನಿ. ಇವರನ್ನೆಲ್ಲಾ ನನ್ನ ಕಾರ್‌ಗೆ ಹಾಕಿ…’ ವರದ, ತನಗೇ ಅರಿವಿಲ್ಲದೆ ಹೀಗೆ ಹೇಳಿಬಿಟ್ಟ. ಕಾರಿನ ಡೋರ್ ತೆಗೆದು, ಅಲ್ಲಿದ್ದ ಹೆಂಗಸನ್ನು ಮುಟ್ಟುತ್ತಿದ್ದಂತೆಯೇ- “ಆಕೆ, ಏನಾಯೂ¤ರೀ, ಮಗೂಗೆ ಪೆಟ್ಟು ಬಿತ್ತಾ? ಊರಿಗೆ ಬೇಗ ಫೋನ್ ಮಾಡಿ’ ಅಂದಳು. “ಈಕೆಗೆ ಸ್ವಲ್ಪ ಪ್ರಜ್ಞೆಯಿದೆ. ಇವರು ಯಾರು? ಯಾವ ಊರಿನವರು ಅಂತ ತಿಳೀಬೇಕಾದ್ರೆ ಹೆಲ್ಪ್ ಬೇಕು. ಈಕೆಯನ್ನು ಫ್ರಂಟ್‌ಲಿ ಕೂರಿಸಿ. ಇನ್ನಿಬ್ಬರನ್ನು ಹಿಂದಿನ ಸೀಟ್‌ನಲ್ಲಿ ಮಲಗಿಸಿ. ಹಾಸನದ ನರ್ಸಿಂಗ್ ಹೋಂಗೆ ಹೋಗ್ತೀನೆ. ಆಸ್ಪತ್ರೆಯಿಂದಲೇ ಪೊಲೀಸ್‌ಗೂ ಸುದ್ದಿ ಕೊಡ್ತೇನೆ’ ಎಂದ ವರದ, ಮಗುವನ್ನು ಎತ್ತಿಕೊಳ್ಳಲು ಹೋಗಿ ಶಾಕ್ ಹೊಡೆದವನಂತೆ ನಿಂತುಬಿಟ್ಟ. ಕಾರಣ, ಮಗುವಿನ ಮೈ ಸ್ವಲ್ಪ ತಣ್ಣಗಿತ್ತು!
“ರ್ರೀ.. ಏನಾಗೋಯ್ತು? ಊರಿಗೆ ವಿಷಯ ತಿಳಿಸಿ. ಅಮ್ಮನಿಗೆ ಹೇಳಿಬಿಡಿ. ಪಾಪು ಜೋಪಾನ. ನಂಗೆ ಏನಾದ್ರೂ ಚಿಂತೆ ಬೇಡ. ಪಾಪು ಹುಷಾರು ಕಣ್ರಿ. ನೀವೂ ಹುಷಾರಾಗಿರಿ. ಮಗೂನ ಚೆನ್ನಾಗಿ ನೋಡ್ಕೊಳ್ಳಿ…’ ಪಕ್ಕದ ಸೀಟಿನಲ್ಲಿದ್ದ ಆಕೆ, ಒಂದೊಂದೇ ಮಾತು ಜೋಡಿಸಿಕೊಂಡು ಹೇಳುತ್ತಿದ್ದಳು. ಆಕೆಗೂ ಸೀಟ್ ಬೆಲ್ಟ್ ಹಾಕಿ ಕೂರಿಸಿದ್ದರಿಂದ ಏನೂ ತೊಂದರೆಯಾಗಿರಲಿಲ್ಲ. ಆಸ್ಪತ್ರೆ ತಲುಪುತ್ತಿದ್ದಂತೆಯೇ, ವರದ ತಾನೇ ಮುಂದೆ ಹೋಗಿ ಡಾಕ್ಟರಿಗೆ ನಡೆದುದನ್ನೆಲ್ಲ ವಿವರಿಸಿದ.
ಆನಂತರದಲ್ಲಿ ಎಲ್ಲವೂ ವೇಗವಾಗಿ ನಡೆದುಹೋಯಿತು. ಮೂವರನ್ನೂ ಐಸಿಯುವಿನಲ್ಲಿ ಅಡ್ಮಿಟ್ ಮಾಡಿದಾಯ್ದಿತು. ಪೊಲೀಸರಿಗೆ, ಆಸ್ಪತ್ರೆಯ ವೈದ್ಯರೇ ಸುದ್ದಿ ಮುಟ್ಟಿಸಿದ್ದರು. ಅರ್ಧ ಗಂಟೆಯ ನಂತರ ಆಪರೇಷನ್ ಥಿಯೇಟರ್‌ನಿಂದ ಹೊರಬಂದ ವೈದ್ಯರು ವರದನ ಮುಂದೆ ನಿಂತು ಹೇಳಿದರು: “ಸಾರಿ ಸರ್, ಮಗುವಿನ ಕಂಡಿಷನ್ ಕ್ರಿಟಿಕಲ್ ಆಗಿದೆ. ಏನೂ ಹೇಳ್ಳೋಕಾಗಲ್ಲ. ಗಂಡ-ಹೆಂಡ್ತಿಗೂ ತುಂಬಾ ಪೆಟ್ಟು ಬಿದ್ದಿದೆ. ಬ್ಲಿಡ್ ಬೇಕು. ಅವರು ಯಾರು? ಏನ್ಮಾಡ್ತಾರೆ ಅಂತೇನಾದ್ರೂ ಗೊತ್ತಾ? ಈ ಕ್ಷಣಕ್ಕೆ ನೀವೇ ಅವರ ವೆಲ್‌ವಿಷರ್. ಅವರನ್ನು ಉಳಿಸಿ ಕೊಳ್ಳೋಣ. ಧೈರ್ಯವಾಗಿರಿ…’
ನಡೆಯುತ್ತಿರುವುದೆಲ್ಲ ಕನಸೋ, ನಿಜವೋ ಅರ್ಥವಾಗದೆ ವರದ ಒದ್ದಾಡಿಹೋದ. ಕೆಲವೇ ಕ್ಷಣಗಳ ಹಿಂದೆ ಒಂದು ಜೀವ ತೆಗೆಯಲು ಆದೇಶ ನೀಡಿದ್ದವನು, ಇದೀಗ ಮೂರು ಜೀವ ಉಳಿಸಿದ ಕ್ಷಣಕ್ಕೆ ಸಾಕ್ಷಿಯಾಗಿದ್ದ. ಜೀವ ಉಳಿಸಿದೆ ಎಂಬುದಕ್ಕಿಂತ ಹೆಚ್ಚಾಗಿ, ತಾನು ಎತ್ತಿಕೊಂಡ ಮರುಕ್ಷಣವೇ ಆ ಪುಟ್ಟ ಮಗುವಿನ ಮೈ ತಣ್ಣಗಾದಂತೆ ಅನಿಸಿದ ಕ್ಷಣವೇ ಅವನಿಗೆ ಮತ್ತೆ ಮತ್ತೆ ನೆನಪಾಗತೊಡಗಿತು. ಅಕಸ್ಮಾತ್ ಇದು ಕೇಸ್ ಆದರೆ, ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದವನು ರೌಡಿಶೀಟರ್ ಅಂತ ಗೊತ್ತಾದರೆ, ಹಳೇ ಕೇಸ್‌ಗಳನ್ನು ನೆನಪಿಸಿಕೊಂಡು ಪೊಲೀಸರು ಅರೆಸ್ಟ್ ಮಾಡಿಬಿಟ್ಟರೆ… ಇಂಥವೇ ಹಲವು ಯೋಚನೆಗಳು ಬಂದಿದ್ದವು. ಆದರೂ, ಯಾವುದೋ ಮೋಡಿಗೆ ಒಳಗಾದವನಂತೆ ವರದ ಆಸ್ಪತ್ರೆಗೆ ಬಂದುಬಿಟ್ಟಿದ್ದ. ಅಲ್ಲಿ ಯಾವುದೇ ಯಡವಟ್ಟುಗಳಾಗಲಿಲ್ಲ. ಇವನ್ಯಾರೋ ಹೃದಯವಂತ ಎಂದಷ್ಟೇ ಅಲ್ಲಿನ ಡಾಕ್ಟರರೂ, ಪೊಲೀಸರೂ ಮಾತಾಡಿಕೊಂಡರು.
“ಸರ್, ಎರಡು ನಿಮಿಷ ಬೇಗ ಬನ್ನಿ. ಆಕೆಗೆ ಪ್ರಜ್ಞೆ ಬಂದಿದೆ. ಏನು ಹೇಳ್ತಾರೋ ನೋಡೋಣ. ಎರಡು ಮೊಬೈಲ್‌ಗೂ ಪಾಸ್‌ವರ್ಡ್ ಇರೋದ್ರಿಂದ ಯಾವ ಊರಿನವರು, ಅವರ ಬಂಧುಗಳು ಯಾರು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ…’ ಡಾಕ್ಟರು ಹೇಳುತ್ತಲೇ ಇದ್ದರು. ವರದ, ಮೌನವಾಗಿ ಹೋಗಿ ಆ ಹೆಂಗಸಿನ ಕೈ ಮುಟ್ಟಿದ. ಆಕೆ- “ಪಾಪು ಹುಷಾರು, ಏನಾಗಿದೆ ನನೆY? ಅಮ್ಮನಿಗೆ ಫೋನ್ ಮಾಡಿ. ದೇವ್ರು ಕಾಪಾಡ್ತಾನೆ. ಹೆದರೊRàಬೇಡಿ…’ ಎಂದವಳೇ ಮತ್ತೆ ಪ್ರಜ್ಞೆ ತಪ್ಪಿಬಿಟ್ಟಳು. “ನೋಡಿದ್ರಾ ಸರ್, ಇಷ್ಟೇನೇ ಲೈಫು, ಎಚ್ಚರ ಇದ್ರೆ ಬದುಕು. ಎಚ್ಚರ ತಪ್ಪಿದ್ರೆ ಸಾವು. ಯಾರು ಯಾರಿಗೂ ಗ್ಯಾರಂಟಿ ಕೊಡಲು ಆಗಲ್ಲ. ಇವತ್ತು ಅವರಿಗೆ ಬಂದ ಸ್ಥಿತೀನೇ ನಾಳೆ ನಮಗೂ ಬರಬಹುದು. ಜವರಾಯ ನಮ್ಮ ಬೆನ್ನ ಹಿಂದೆಯೇ ಸುತ್ತಾಡ್ತಾ ಇರ್ತಾನೆ. ಯಾವಾಗ ಅಟ್ಯಾಕ್ ಮಾಡ್ತಾನೋ ಗೊತ್ತಾಗಲ್ಲ. ನಾವು ಮಾಡುವ ಒಳ್ಳೆಯ ಕೆಲಸವಷ್ಟೇ ನಮ್ಮ ಕೈ ಹಿಡಿಯುತ್ತೆ. ಒಬ್ಬರನ್ನು ಕೊಂದರೆ ಮನುಷ್ಯ ರಾಕ್ಷಸ ಆಗ್ತಾನೆ. ಕಾಪಾಡಿಬಿಟ್ರೆ ದೇವರಾಗ್ತಾನೆ. ಕಷ್ಟದಲ್ಲಿ ಇದ್ದವರನ್ನು ಮುಗಿಸೋದು ಸುಲಭ. ಉಳಿಸಿಕೊಳ್ಳೋದು ಬಹಳ ಕಷ್ಟ. ನಿಮ್ಮಂಥ ಗಟ್ಟಿ ಮನುಷ್ಯ, ನಾವು ಇಡೀ ಆಸ್ಪತ್ರೆಯ ಸ್ಟಾಫ್ ಇಲ್ಲಿದೀವಿ. ಆದ್ರೂ ಯಾರ ಜೀವಕ್ಕೂ ಗ್ಯಾರಂಟಿ ಕೊಡುವ ಧೈರ್ಯ ನಮಗೂ ಇಲ್ಲ…’ ವೈದ್ಯರು ಥೇಟ್ ವೇದಾಂತಿಯಂತೆ ಹೇಳತೊಡಗಿದ್ದರು.
ವೈದ್ಯರ ಒಂದೊಂದು ಮಾತೂ ವರದರಾಜನ ಎದೆಯೊಳಗೆ ಅಚ್ಚೊತ್ತಿದಂತೆ ಕುಳಿತುಬಿಟ್ಟವು. ಇಷ್ಟು ದಿನ ಕೊಲ್ಲುವ ಕೆಲಸವನ್ನಷ್ಟೇ ನಾನೂ ಮಾಡಿದೆ. ಅಕಸ್ಮಾತ್ ಇವತ್ತು ಆಯ್ತಲ್ಲ, ಅಂಥದೇ ಆ್ಯಕ್ಸಿಡೆಂಟ್ ನಾಳೆ ನನಗೂ ಆಗಿಬಿಟ್ರೆ? ಸದಾ ಮುಂದಿನ ಸೀಟಿನಲ್ಲೇ ಕೂರುವ ನನ್ನ ಮಗು ಕೂಡ… ಇಂಥದೊಂದು ಯೋಚನೆ ಬಂದ ತಕ್ಷಣ ವರದ ಬೆಚ್ಚಿಬಿದ್ದ. ಕೆನ್ನೆ ಕೆನ್ನೆ ಬಡಿದುಕೊಂಡು- ನನ್ನ ತಪ್ಪುಗಳನ್ನು ಕ್ಷಮಿಸಿಬಿಡು ದೇವರೇ ಎಂದು ಪ್ರಾರ್ಥಿಸಿದ. ನಂತರ ತನ್ನ ಹುಡುಗನಿಗೆ ಫೋನ್ ಮಾಡಿ ಹೇಳಿದ- ಶ್ರೀಧರಾ, ಆ ಡೀಲ್ ಕ್ಯಾನ್ಸಲ್ ಆಯ್ತು. ಯಾರೂ ರಿಸ್ಕ್ ತಗೋಬೇಡಿ. ಇಲ್ಲಿ ಹಾಸನದಲ್ಲಿ ನನ್ನ ತಂಗಿಗೆ ಆ್ಯಕ್ಸಿಡೆಂಟ್ ಆಗಿದೆ. ಅಡ್ಮಿಟ್ ಮಾಡಿದೀನಿ. ಅರ್ಜೆಂಟಾಗಿ ಆರು ಬಾಟಲಿ ಬ್ಲಿಡ್ ಬೇಕು. ತಕ್ಷಣ ನಾಲ್ಕು ಹುಡುಗರನ್ನು ಕರ್ಕೊಂಡು ಈಗಲೇ ಬಾ…’
*ಎ.ಆರ್.ಮಣಿಕಾಂತ್