Advertisement
ಬಹುತೇಕ ಪ್ರಕರಣಗಳಲ್ಲಿ ಜನನ ಕಾಲದಲ್ಲಿ ಅಥವಾ ಆ ಬಳಿಕ ಉಂಟಾದ ಶ್ರವಣ ಶಕ್ತಿ ದೋಷಗಳನ್ನು ವೈದ್ಯಕೀಯ ಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿದೆ. ಆದರೆ ಕೆಲವು ಮಂದಿ ಕೊಕ್ಲಿಯಾ ಅಥವಾ ಕರ್ಣಶಂಖ ಮತ್ತು ಕಿವಿಯ ಶ್ರವಣ ಮಾರ್ಗಗಳು ಒಳಗೊಂಡ ಖಾಯಂ ಶ್ರವಣಶಕ್ತಿ ನಷ್ಟಕ್ಕೆ ತುತ್ತಾಗಬಹುದು; ಇದು ತೀವ್ರ ಮತ್ತು ಗಂಭೀರ ಸ್ವರೂಪದ ಶ್ರವಣಶಕ್ತಿ ನಷ್ಟಕ್ಕೆ ಕಾರಣವಾಗಬಹುದಾಗಿದ್ದು, ಸಾಮಾನ್ಯವಾಗಿ ಇವುಗಳಿಗೆ ವೈದ್ಯಕೀಯ ಚಿಕಿತ್ಸೆಯ ಮೂಲಕ ಪರಿಹಾರ ಒದಗಿಸುವುದು ಸಾಧ್ಯವಿಲ್ಲ. ಅಲ್ಲದೆ, ಜನ್ಮಜಾತ ಶ್ರವಣಶಕ್ತಿ ದೋಷವುಳ್ಳ ಮಕ್ಕಳಲ್ಲಿ ಅದು ಶ್ರವಣ ಶಕ್ತಿಯ ಮೇಲೆ ತೀವ್ರದಿಂದ ಗಂಭೀರ ಸ್ವರೂಪದ ಪರಿಣಾಮ ಬೀರುತ್ತದೆ. ಹೀಗಾಗಿ ಇಂತಹ ಮಕ್ಕಳಲ್ಲಿ ಶ್ರವಣಶಕ್ತಿ ನಷ್ಟದ ವಿಧ ಮತ್ತು ತೀವ್ರತೆಯನ್ನು ಆಧರಿಸಿ ಶ್ರವಣ ಸಾಧನಗಳು ಅಥವಾ ಕೊಕ್ಲಿಯರ್ ಇಂಪ್ಲಾಂಟ್‌ಗಳ ಅಳವಡಿಕೆ ಉತ್ತಮವಾದ ಚಿಕಿತ್ಸಾ ಆಯ್ಕೆಯಾಗಿರುತ್ತದೆ. ಗಂಭೀರ ಶ್ರವಣ ಶಕ್ತಿ ನಷ್ಟಕ್ಕೆ ತುತ್ತಾಗಿರುವ ಕೆಲವು ಮಕ್ಕಳು ಸಾಂಪ್ರದಾಯಿಕ ಶ್ರವಣ ಸಾಧನಗಳಂತಹ ಶಬ್ದವರ್ಧಕ ಸಲಕರಣೆಗಳ ಮೂಲಕ ಶಾಬ್ದಿಕ ಸಂವಹನ ಕೌಶಲವನ್ನು ನಿಭಾಯಿಸಲು ಶಕ್ತರಾಗುತ್ತಾರೆ. ಆದರೆ ಇನ್ನು ಕೆಲವರಿಗೆ ಶ್ರವಣ ಸಾಧನಗಳಿಂದ ಯಾವ ಪ್ರಯೋಜನವೂ ಉಂಟಾಗುವುದಿಲ್ಲ ಮತ್ತು ಅಂತಹ ಮಕ್ಕಳ ಸಂಭಾಷಣೆ ಮತ್ತು ಭಾಷಾ ಕೌಶಲದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಸಮರ್ಪಕವಾದ ಸಂಭಾಷಣೆ ಮತ್ತು ಭಾಷಾ ಕೌಶಲಗಳನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗದೆ ಇದ್ದರೆ ಅದು ವ್ಯಕ್ತಿಯ ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಬಹುದು. ಆದರೆ ಬಹುತೇಕ ವ್ಯಕ್ತಿಗಳಲ್ಲಿ ಮಧ್ಯಮದಿಂದ ತೀವ್ರ ಪ್ರಮಾಣದ ವರೆಗಿನ ಶ್ರವಣ ಸಮಸ್ಯೆಗಳು ಸಾಂಪ್ರದಾಯಿಕ ಶ್ರವಣ ಸಾಧನಗಳ ಮೂಲಕ ಸಾಕಷ್ಟು ಉತ್ತಮವಾಗಿ ಪರಿಹಾರ ಕಾಣುತ್ತವೆ.
ಸಣ್ಣ ವಯಸ್ಸಿನಲ್ಲಿಯೇ ಕೊಕ್ಲಿಯಾರ್ ಇಂಪ್ಲಾಂಟ್ ಉಪಯೋಗಿಸಲು ಆರಂಭಿಸುವ ಮಕ್ಕಳ ಶಾಬ್ದಿಕ ಗ್ರಹಣ ಕೌಶಲಗಳು ಮತ್ತು ಶಬ್ದ ಪತ್ತೆ ಸಾಮರ್ಥ್ಯಗಳಲ್ಲಿ ಉತ್ತಮ ಪ್ರಗತಿ ತೋರುವುದು ಕಂಡುಬಂದಿದೆ. ಬಹುಚಾನೆಲ್ ಕೊಕ್ಲಿಯಾರ್ ಇಂಪ್ಲಾಂಟ್‌ಗಳನ್ನು ಉಪಯೋಗಿಸುವ ಮಕ್ಕಳು ಇಂಪ್ಲಾಂಟ್ ಅಳವಡಿಸಿರದ, ಶ್ರವಣ ಸಾಧನಗಳನ್ನು ಉಪಯೋಗಿಸುವ ಮಕ್ಕಳಿಗಿಂತ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಬಹುಚಾನೆಲ್ ಕೊಕ್ಲಿಯಾರ್ ಇಂಪ್ಲಾಂಟ್ ಉಪಯೋಗಿಸುವ ಈ ಮಕ್ಕಳು ಕಾಲಾಂತರದಲ್ಲಿ ಮಾತಿನ ಗ್ರಹಿಕೆ ಮತ್ತು ಮಾತಿನ ಉತ್ಪಾದನೆಯಲ್ಲಿ ಉತ್ತಮ ಉತ್ತಮ ಪ್ರಗತಿ ತೋರ್ಪಡಿಸಿದ್ದಾರೆ. ಜನ್ಮಜಾತ ಶ್ರವಣ ದೋಷವುಳ್ಳ ಮಕ್ಕಳಲ್ಲಿ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆಯ ಬಳಿಕ ಮಾತು ಮತ್ತು ಭಾಷಿಕ ಕೌಶಲಗಳ ಅಭಿವೃದ್ಧಿ ಹಾಗೂ ಒಟ್ಟಾರೆ ಸಂಭಾಷಣಾ ಬುದ್ಧಿಮತ್ತೆಯ ಪ್ರಗತಿ ಉಂಟಾಗುವುದನ್ನು ಅಧ್ಯಯನಗಳು ಶ್ರುತಪಡಿಸಿವೆ. ಆದರೆ, ಶ್ರವಣ ಶಕ್ತಿ ನಷ್ಟ ಆರಂಭವಾದ ವಯಸ್ಸು, ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಸಿದ ವಯಸ್ಸು, ಕೊಕ್ಲಿಯಾರ್ ಇಂಪ್ಲಾಂಟ್ ಬಳಕೆಯ ಅವಧಿ ಹಾಗೂ ಪಡೆದ ಮಾತು ಮತ್ತು ಭಾಷಿಕ ತರಬೇತಿಯನ್ನು ಅವಲಂಬಿಸಿ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಸಿದವರಲ್ಲಿ ವಿಸ್ತೃತವಾದ ವೈಯಕ್ತಿಕ ಭೇದಗಳು ವರದಿಯಾಗಿವೆ.
Related Articles
ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆಗೆ ಅರ್ಹತೆ
ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆ ಒಂದು ತಂಡ ಕಾರ್ಯಾಚರಣೆಯಾಗಿದ್ದು, ಇಎನ್‌ಟಿ, ರೇಡಿಯಾಲಜಿಸ್ಟ್, ಆಡಿಯೋಲಜಿಸ್ಟ್, ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಮತ್ತು ಆಡಿಟರಿ ವರ್ಬಲ್ ಥೆರಪಿಸ್ಟ್‌ರಂತಹ ವಿವಿಧ ವೈದ್ಯಕೀಯ ವೃತ್ತಿಪರರು ಭಾಗವಹಿಸುತ್ತಾರೆ. ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆಗೆ ಸೂಕ್ತ ವ್ಯಕ್ತಿಯೇ ಎಂಬುದನ್ನು ನಿರ್ಧರಿಸುವುದರಲ್ಲಿ ಆಡಿಯೋಲಜಿಸ್ಟ್ ನಡೆಸುವ ಶ್ರವಣ ಶಕ್ತಿ ನಷ್ಟದ ನಿಖರ ವಿಶ್ಲೇಷಣೆಯು ಅತ್ಯಂತ ನಿರ್ಣಾಯಕ ಅಂಶವಾಗಿದೆ. ಆಡಿಯಾಲಜಿಸ್ಟ್ ವಯಸ್ಸಿಗೆ ಸೂಕ್ತವಾದ ಪರೀಕ್ಷೆ (ವರ್ತನಾತ್ಮಕ ಮತ್ತು ದೈಹಿಕ ಮಾಪನಗಳು)ಗಳನ್ನು ಶ್ರವಣ ಶಕ್ತಿ ನಷ್ಟದ ಸ್ವಭಾವ ಮತ್ತು ವಿಧವನ್ನು ನಿರ್ಧರಿಸಲು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಪ್ಯೂರ್ ಟೋನ್ ಆಡಿಯೊಗ್ರಾಮ್‌ನಲ್ಲಿ ದ್ವಿಪಕ್ಷೀಯ ತೀವ್ರದಿಂದ – ಗಂಭೀರ ಸೆನ್ಸರಿನ್ಯೂರಲ್ ಶ್ರವಣಶಕ್ತಿ ನಷ್ಟ ಕಂಡುಬಂದಿರುವುದು ಮತ್ತು ಅದು ಆಡಿಟರಿ ಬ್ರೈನ್ ಸ್ಟೆಮ್ ಪ್ರತಿಸ್ಪಂದನ ಸಹಿತ ಅಕೌಸ್ಟಿಕ್ ರಿಫ್ಲೆಕ್ಸ್ ಡಾಟಾದಿಂದ ಖಚಿತಗೊಂಡಿರುವುದು ವ್ಯಕ್ತಿಯು ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆಗೆ ಅರ್ಹನೇ/ಳೇ ಎನ್ನುವುದನ್ನು ನಿರ್ಣಯಿಸುತ್ತದೆ. ಆ ಬಳಿಕ ಸೂಕ್ತವಾದ ಧ್ವನಿವರ್ಧಕ ಉಪಕರಣಗಳು ಮತ್ತು ಶ್ರವಣ ಶಾಬ್ದಿಕ ಚಿಕಿತ್ಸೆ (ಆಡಿಟರಿ ವರ್ಬಲ್ ಥೆರಪಿ) ತರಬೇತಿಗಳನ್ನು ನಡೆಸಲಾಗುತ್ತದೆ, ಅನಂತರ ವರ್ತನಾತ್ಮಕ ಆಡಿಯೋಲಾಜಿಕಲ್ ಪರೀಕ್ಷೆಯನ್ನು ಪುನರಾವರ್ತಿಸಲಾಗುತ್ತದೆ. ಶ್ರವಣ ಸಾಧನ ಅಳವಡಿಕೆಯ ಬಳಿಕ ಸಾಕಷ್ಟು ತರಬೇತಿಯನ್ನು ಪಡೆದ ಬಳಿಕ ಮಾತ್ರವೇ ಸಾಮಾನ್ಯವಾಗಿ ಕೊಕ್ಲಿಯಾರ್ ಇಂಪ್ಲಾಂಟ್‌ಗೆ ಅರ್ಹತೆಯನ್ನು ಸೂಚಿಸಲಾಗುತ್ತದೆ.
Advertisement
ಶ್ರವಣ ಸಾಧನದಿಂದ ಸೀಮಿತ ಪ್ರಯೋಜನ ಅಥವಾ ಪ್ರಯೋಜನವನ್ನೇ ಪಡೆಯದೆ ಇರುವ ಹಾಗೂ ಜನ್ಮಜಾತ ಅಥವಾ ಆ ಬಳಿಕ ಉಂಟಾದ ತೀವ್ರದಿಂದ ಗಂಭೀರ ಸ್ವರೂಪದ ಸೆನ್ಸೊರಿನ್ಯೂರಲ್ ಶ್ರವಣ ಶಕ್ತಿ ನಷ್ಟ ಹೊಂದಿರುವ ವ್ಯಕ್ತಿಗಳು ಮಾತ್ರ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಕೊಕ್ಲಿಯಾರ್ ಇಂಪ್ಲಾಂಟ್‌ಗೆ ಅರ್ಹ ವ್ಯಕ್ತಿಗಳು ವೃತ್ತಿಪರ ಇಎನ್‌ಟಿ ವೈದ್ಯರಿಂದ ವೈದ್ಯಕೀಯ ವಿಶ್ಲೇಷಣೆಗೆ ಒಳಪಡಬೇಕಾಗುತ್ತದೆ. ರೋಗಿಯು ಕಿವಿಯ ಸಕ್ರಿಯ ಕಾಯಿಲೆಗಳಿಂದ ಮುಕ್ತರಾಗಿರಬೇಕಾಗುತ್ತದೆ, ಕಿವಿ ತಮಟೆ ಅವಿಚ್ಛಿನ್ನವಾಗಿರಬೇಕಾಗಿರುತ್ತದೆ ಹಾಗೂ ಸಾಮಾನ್ಯ ಅರಿವಳಿಕೆಯನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ಇಂಪ್ಲಾಂಟ್ ಅಳವಡಿಕೆಗೆ ಅರ್ಹ ಕಿವಿಯನ್ನು ಗುರುತಿಸಲು ಸಿಟಿ ಅಥವಾ ಎಂಆರ್‌ಐ ಸ್ಕ್ಯಾನ್ ಅಥವಾ ಇವೆರಡೂ ಅಗತ್ಯವಾಗಬಹುದಾಗಿದೆ.
– ಮುಂದಿನ ವಾರಕ್ಕೆ
– ರಾಜೇಶ್ ರಂಜನ್,ಸಹಾಯಕ ಪ್ರಾಧ್ಯಾಪಕರು, ಹಿರಿಯ ಶ್ರೇಣಿ,
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ,
SOAHS, ಮಂಗಳೂರು.