ಹಾವೇರಿ: ಭಾವ ಶುದ್ಧವಾಗಿದ್ದರೆ ನಮ್ಮ ಬದುಕು ಸುಂದರವಾಗುತ್ತದೆ. ಬದುಕು ಸುಂದರವಾಗಿದ್ದರೆ ಭಗವಂತನ ಒಲುಮೆಯಾಗುತ್ತದೆ ಎಂದು ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು. ನಗರದ ಹುಕ್ಕೇರಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ‘ಯಡೆಯೂರ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಮ್ಮ ಭಾವ ನಮಗರಿಯದಂತೆ ಶುದ್ಧವಾಗಬೇಕಾದರೆ ಸಂತ ಮಹಾತ್ಮರ ಸಾನ್ನಿಧ್ಯ ಮತ್ತು ಅವರ ಜೀವನ ಸಂದೇಶದ ಶ್ರವಣದಿಂದ ನಮ್ಮ ಬದುಕು ಸುಂದರವಾಗುತ್ತದೆ ಎಂದರು. ಇಂದು ಅಧರ್ಮದ ನಡೆಯಿಂದ ಸಮಾಜ ಕಲುಷಿತವಾಗಿದೆ. ಆಧುನಿಕ ಯುಗದಲ್ಲಿ ಸರ್ವ ರೋಗಕ್ಕೂ ಮದ್ದು ಇದೆ. ಆದರೆ, ನೆಮ್ಮದಿಯ ಬದುಕಿಗೆ ಮಾತ್ರ ಯಾವುದೇ ಮದ್ದು ಇಲ್ಲ. ನೈತಿಕ ಜೀವನ ಮತ್ತು ಧರ್ಮದ ಆಚರಣೆಯಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಅದಕ್ಕೆ ಶ್ರಾವಣ ಮಾಸದ ಅನುಭಾವ ಉತ್ತಮ ದಾರಿದೀಪ ಎಂದರು.
12ನೇ ಶತಮಾನದಲ್ಲಿ ಶಿವ ಶರಣರು ನಡೆಸಿದ ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಯನ್ನು 15ನೇ ಶತಮಾನದಲ್ಲಿ ಮುಂದುವರೆಸಿದವರು ಯಡೆಯೂರಿನ ತೋಂಟದ ಸಿದ್ಧಲಿಂಗ ಯತಿಗಳು. ಅವರ ಜೀವನ ಚರಿತ್ರೆಯ ಮೇರು ಸದೃಷ್ಯದ ಸಾಹಿತ್ಯವನ್ನು ಪುಟ್ಟರಾಜ ಗವಾಯಿಗಳು ಅನುಭವದ ಮಾರ್ಗದ ಮೂಲಕ ಭಕ್ತಿರಸದ ಪ್ರಭಾವದಿಂದ ಅಂತರಂಗದ ಅನುಭಾವದ ಮೂಲಕ ತಮ್ಮ ಸಾಹಿತ್ಯದಲ್ಲಿ ರಚಿಸಿದರು ಎಂದರು.
ಸಮಾರಂಭದ ಸಾನ್ನಿಧ್ಯವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ವಹಿಸಿದ್ದರು. ಹಿರೇಮುಗದೂರಿನ ವೀರಭದ್ರ ಶಾಸ್ತ್ರೀಗಳು ತೋಂಟದ ಸಿದ್ಧಲಿಂಗೇಶ್ವರರ ಪ್ರಚವನ ಪ್ರಸ್ತುತ ಪಡಿಸಿದರು. ಆಕಾಶವಾಣಿ ಕಲಾವಿದ ಶಿವಕುಮಾರ ಹಡಗಲಿ ವಚನ ಸಂಗೀತ ಪ್ರಸ್ತುತ ಪಡಿಸಿದರು.
ಸಮಾರಂಭದಲ್ಲಿ ಎಸ್.ಎಸ್. ಮುಷ್ಠಿ, ವೀರಣ್ಣ ವಳಸಂಗದ, ವೀರಣ್ಣ ಅಂಗಡಿ, ಜಗದೀಶ ತುಪ್ಪದ, ನಿರಂಜನ ತಾಂಡೂರ, ಶಿವಯೋಗಿ ವಾಲಿಶೆಟ್ಟರ್, ಎಸ್. ಎಂ. ಹಾಲಯ್ಯನವರಮಠ, ಶಿವಬಸಪ್ಪ ಹುರುಳಿಕುಪ್ಪಿ, ನಾಗಪ್ಪ ಮುರನಾಳ, ಶಿವಕುಮಾರ ಮುದಗಲ್ಲ, ರಾಚಣ್ಣ ಮಾಗನೂರ, ಕೆ.ಆರ್. ನಾಶಿಪುರ, ಎಸ್.ಎನ್. ದೊಡ್ಡಗೌಡರ ಮತ್ತಿತರರು ಇದ್ದರು. ನಿವೃತ್ತ ಪ್ರಾಚಾರ್ಯ ಬಿ. ಬಸವರಾಜ ಸ್ವಾಗತಿಸಿದರು. ಕೆ.ಬಿ. ಭಿಕ್ಷಾವರ್ತಿಮಠ ನಿರೂಪಿಸಿದರು. ಶಿವಯೋಗಿ ವಾಲಿಶೆಟ್ಟರ ವಂದಿಸಿದರು.