ಹುಬ್ಬಳ್ಳಿ: ಆರೋಗ್ಯಯುತ ಬದುಕಿಗಾಗಿ ನಮ್ಮ ಸುತ್ತಲ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕೆಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಭಗೀರಥ ಸಂಸ್ಥೆಯ ಆಶ್ರಯದಲ್ಲಿ ಸ್ವತ್ಛ ಭಾರತ ಮಿಷನ್-ಘನತ್ಯಾಜ್ಯ ವಸ್ತು ನಿರ್ವಹಣೆ “ಮಾದರಿ ವಾರ್ಡ್ ನಂ.55′ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರ ಸ್ವತ್ಛ ಭಾರತ ಅಭಿಯಾನ ಆರಂಭಿಸಿದೆ. ಈ ಕುರಿತು ಪಾಲಿಕೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ 30 ಲಕ್ಷ ರೂ. ಮೀಸಲಿಡಲಾಗಿದೆ. ಜನರು ತಮ್ಮ ಮನೆಯಲ್ಲಿನ ಕಸವನ್ನು ಎಲ್ಲೆಂದರಲ್ಲಿ ಬಿಸಾಕುವ ಬದಲು ಮನೆಯಲ್ಲಿಯೇ ಒಂದೆಡೆ ವಿಂಗಡಣೆ ಮಾಡಿಟ್ಟರೆ, ಪಾಲಿಕೆಯವರು ಮನೆ-ಮನೆಗೆ ಬಂದು ಅದನ್ನು ಸಂಗ್ರಹಿಸುತ್ತಾರೆ.
ಕಸ ವಿಂಗಡನೆ ಮಾಡುವುದರಿಂದ ಕಸದಿಂದ ರಸ ತೆಗೆಯಬಹುದು ಎಂದರು. ಪೌರ ಕಾರ್ಮಿಕರು ತಮ್ಮ ಸೇವೆ ಕಾಯಂಗೊಳಿಸುವಂತೆ ಹಾಗೂ ಗುತ್ತಿಗೆ ಪದ್ಧತಿ ರದ್ದುಗೊಳಿಸುವಂತೆ ಆಗ್ರಹಿಸಿ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದಾರೆ. ಪಾಲಿಕೆಗೆ ಪೌರ ಕಾರ್ಮಿಕರನ್ನು ನೇಮಕಗೊಳಿಸುವ, ಕಾಯಂಗೊಳಿಸುವ ಅಧಿಕಾರವಿಲ್ಲ. ಟೆಂಡರ್ ಕರೆದು ಸರಕಾರಕ್ಕೆ ಕಳುಹಿಸಿ ಮೂರು ವರ್ಷವಾದರೂ ಇದುವರೆಗೆ ಅದು ಈಡೇರಿಲ್ಲ.
ರಾಜ್ಯ ಸರಕಾರ ಬೇಜವಾಬ್ದಾರಿ ತೋರುತ್ತಿದೆ. ಸಂಬಂಧಪಟ್ಟ ಸಚಿವರು ಗಮನಹರಿಸುತ್ತಿಲ್ಲ. ಇನ್ನಾದರೂ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಪರಿಸರ ಅಭಿಯಂತರರಾದ ನಯನಾ ಕೆ.ಎಸ್.,
-ಶ್ರೀಧರ ಟಿ.ಎನ್., ಡಾ| ಅನಿತಾ ಕಡಗದ, ವಿ.ಜಿ. ಪಾಟೀಲ, ವೀರಣ್ಣ ರೊಟ್ಟಿಗವಾಡ, ನಿವೇದಿತಾ, ಮಹಾದೇವಿ ಅಂಗರಳ್ಳಿ, ರಮೇಶ ಸೂರ್ಯವಂಶಿ, ಜಿ.ಎಂ. ಚಿಕ್ಕಮಠ, ಪಂಡಿತಾರಾಧ್ಯ ಚಿಕ್ಕಮಠ, ಮಹಾಲಿಂಗ ಹರ್ತಿ, ಶಂಕರಪ್ಪ ಛಬ್ಬಿ, ನಿರ್ಮಲಾ ಇಂಡಿ ಇನ್ನಿತರರಿದ್ದರು. ಸಿದ್ಧರಾಮಯ್ಯ ಹಿರೇಮಠ ಸ್ವಾಗತಿಸಿದರು.