Advertisement

ಅರ್ಥವಾಗದ ಆರೋಗ್ಯ ಕರ್ನಾಟಕ

09:57 AM Jul 21, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಆರೋಗ್ಯ ಕರ್ನಾಟಕ’ ಯೋಜನೆ ಬಗ್ಗೆ ರಾಜಧಾನಿ ಬೆಂಗಳೂರಿನ ವೈದ್ಯಾಧಿಕಾರಿಗಳು ಹಾಗೂ ಸಾರ್ವಜನಿಕರಿಗೇ ಸರಿಯಾದ ಮಾಹಿತಿ ಇಲ್ಲ! ಅಚ್ಚರಿಯಾದರೂ ಇದು ಸತ್ಯ. ಆರೋಗ್ಯ ಕರ್ನಾಟಕದಡಿ ಯಾವೆಲ್ಲಾ ಯೋಜನೆಗಳು ವಿಲೀನಗೊಂಡಿವೆ. ಎಷ್ಟು ಮೊತ್ತದವರೆಗೆ ಚಿಕಿತ್ಸೆ ಪಡೆಯಬಹುದು ಎಂಬ ಕುರಿತು ಸರ್ಕಾರವೇನೋ ಮಾರ್ಗಸೂಚಿ ಹೊರಡಿಸಿದೆ. ಆದರೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ನೋಂದಣಿಗೆ ಬರುವ
ಸಾರ್ವಜನಿಕರಿಗೆ ಪೂರ್ಣ ಮಾಹಿತಿ ನೀಡುವ ಕೆಲಸ ಆಗಿಲ್ಲ. ಬೆಂಗಳೂರಿನಲ್ಲಿ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ವಿಕ್ಟೋರಿಯಾ, ಕೆ.ಸಿ.ಜನರಲ್‌, ಜಯದೇವ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಸಹಕಾರ ಸಂಘದ ಸದಸ್ಯರಿಗೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆ ಮುಗಿದಿರುವುದು, ವಾಜಪೇಯಿ ಶ್ರೀ ಯೋಜನೆ, ಹರೀಶ್‌ ಸಾಂತ್ವನ ಯೋಜನೆ ಸೇರಿದಂತೆ ಈ ಹಿಂದಿನ ಯಾವ್ಯಾವ ಯೋಜನೆಗಳು ವಿಲೀನಗೊಂಡಿವೆ ಎಂಬ ಬಗ್ಗೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ ಇಲ್ಲ. 

Advertisement

ವೈದ್ಯರಿಗೂ ಮಾಹಿತಿ ಕೊರತೆ: ಯೋಜನೆ ಬಗ್ಗೆ ವೈದ್ಯಾಧಿಕಾರಿಗಳಿಗೂ ಮಾಹಿತಿ ಕೊರತೆ ಇದೆ. ಒಬ್ಬರು 1.5 ಲಕ್ಷ ರೂ.ವರೆಗೆ ಸೌಲಭ್ಯ ದೊರೆಯುತ್ತದೆ ಎಂದರೆ ಮತ್ತೂಬ್ಬರು 2 ಲಕ್ಷ ರೂ. ವರೆಗೆ ಎನ್ನುತ್ತಾರೆ. ಒಬ್ಬರು ಯಶಸ್ವಿನಿ ಮುಗಿದಿದೆ ಎಂದರೆ, ಇನ್ನೊಬ್ಬರು ಯಶಸ್ವಿನಿ ಚಾಲ್ತಿಯಲ್ಲಿದೆ ಎನ್ನುತ್ತಾರೆ. ಒಟ್ಟಾರೆ ಸ್ಪಷ್ಟತೆ ಇಲ್ಲದೇ, ರೋಗಿಗಳು ಗೊಂದಲಕ್ಕೀಡಾಗಿದ್ದಾರೆ. ನೋಂದಣಿಗೆ ಬರುವವರಿಗೆ ಸಮರ್ಪಕ ಮಾಹಿತಿ ನೀಡುವ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಆಗಬೇಕಿದೆ.

ಯಶಸ್ವಿನಿ ಮುಂದುವರಿಸಿ: ಎಪಿಎಲ್‌ ಅಥವಾ ಬಿಪಿಎಲ್‌ ಯಾವುದೇ ಪಡಿತರ ಚೀಟಿ ಹೊಂದಿದ್ದರೂ ಯಶಸ್ವಿನಿ ಯೋಜನೆಯಡಿ ಉಚಿತವಾಗಿ 2 ಲಕ್ಷದವರೆಗೂ ಚಿಕಿತ್ಸೆ ಪಡೆದುಕೊಳ್ಳಬಹುದಿತ್ತು. ಆದರೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಬಿಪಿಎಲ್‌ ಕಾರ್ಡುದಾರರಿಗೆ ಮಾತ್ರ ಅನುಕೂಲವಾಗಲಿದೆ. ಎಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳು ಶೇ.70ರಷ್ಟು ವೆಚ್ಚ ಭರಿಸಬೇಕಾಗುತ್ತದೆ. ಇದು ಮಧ್ಯಮ ವರ್ಗದ ಕುಟಂಬಗಳಿಗೆ ಹೊರೆಯಾಗಲಿದೆ. ಹೀಗಾಗಿ ಯಶಸ್ವಿನಿ ಯೋಜನೆ ಮುಂದುವರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

 ಯಶಸ್ವಿನಿ ವಿಲೀನ: ಯಶಸ್ವಿನಿ ಯೋಜನೆ ಜೂ.1ರಿಂದಲೇ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನಗೊಂಡಿದೆ. ಮೇ 31ರವರೆಗೂ ಯಶಸ್ವಿನಿ ಯೋಜನೆ ಮುಂದುವರಿಸಲಾಗಿತ್ತು. ಈ ಕುರಿತು ಸಹಕಾರಿ ಸಂಘಗಳು ಹಾಗೂ ಎಲ್ಲ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ತಿಳಿಸಿದೆ.
 
ವಿಕ್ಟೋರಿಯದಲ್ಲಿ ಸರ್ವರ್‌ ಪ್ರಾಬ್ಲಿಮ್‌ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್‌ ಸೈಟ್‌ನ ಸರ್ವರ್‌ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಗುರುವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಡ್‌ ಸೇವೆ ಸಾಧ್ಯವಾಗಿಲ್ಲ. ಬೆಳಗ್ಗೆ ನೋಂದಣಿ ಪ್ರಾರಂಭವಾಗಿ 52 ಕಾರ್ಡ್‌ಗಳನ್ನು ವಿತರಿಸಲಾಯಿತು. ನಂತರ ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಸ್ಥಗಿತಗೊಂಡಿತ್ತು. ಕಾದು ಕುಳಿತಿದ್ದವರು ಕಾರ್ಡ್‌ ಇಲ್ಲದೆ ಮರಳಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ವರೆಗೆ ಒಟ್ಟು 8,278 ಕಾರ್ಡ್‌ ವಿತರಿಸಲಾಗಿದೆ. ಒಟ್ಟು 69 ಒಳರೋಗಿಗಳು ಸೇವೆ ಪಡೆದುಕೊಂಡಿದ್ದಾರೆ. 

ಆಯುಷ್ಮಾನ್‌ ಭಾರತ್‌ ಕೇಂದ್ರ ಸರ್ಕಾರ ಆಗಸ್ಟ್‌ ಅಂತ್ಯದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಸೇವೆ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಸೇವೆಗೆ ಮುಂದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ನಡುವೆ ಆಯುಷ್ಮಾನ್‌ ಭಾರತ್‌ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅಧ್ಯಯನ ನಡೆಸುತ್ತಿದೆ.

Advertisement

ಯಶಸ್ವಿನಿ ಯೋಜನೆಯಲ್ಲಿ ಒಮ್ಮೆ ಹಣ ಪಾವತಿಸಬೇಕಿತ್ತು ಹಾಗೂ ಅದರಲ್ಲಿ 2 ಲಕ್ಷ ರೂ.ಗಳವರೆಗೂ ಚಿಕಿತ್ಸೆ ದೊರೆಯುತ್ತಿತ್ತು. ಇಡೀ ಕುಟುಂಬಕ್ಕೆ ಅನುಕೂಲವಾಗಿತ್ತು. ಆರೋಗ್ಯ ಕರ್ನಾಟಕದ ಬಗ್ಗೆ ಮಾಹಿತಿ ಇಲ್ಲ.
 ● ಸೀತಮ್ಮ, ಗೃಹಿಣಿ

ಆರೋಗ್ಯ ಕಾರ್ಡ್‌ ವಿತರಿಸುವ ಕೇಂದ್ರಗಳು ವಿಸ್ತರಣೆಯಾಗಬೇಕಿದೆ. ಬೆರಳೆಣಿಕೆಯಷ್ಟು ಕೇಂದ್ರಗಳಲ್ಲಿ ವಿತರಣೆಯಿಂದ ಜನರಿಗೆ ತೊಂದರೆ ಯಾಗುತ್ತಿದೆ. ಜತೆಗೆ ಸಹಾಯ ಕೇಂದ್ರಗಳು ಬೇಕು.
 ● ಡಾ.ಗಿರೀಶ್‌, ಬಿಎಂಸಿಆರ್‌ಐ ಪಿಎಂ ಸ್ವಾಸ್ಥ್ಯಸುರಕ್ಷಾ ಯೋಜನಾ ಆಸ್ಪತ್ರೆ ನಿರ್ದೇಶಕ

ಮಗಳಿಗೆ ಹೃದ್ರೋಗದ ಸಮಸ್ಯೆ ಇದೆ. ಹೆಲ್ತ್‌ ಕಾರ್ಡ್‌ ಮಾಡಿಸಿಕೊಂಡರೆ 8 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಗೆಳೆಯರೊಬ್ಬರು ತಿಳಿಸಿದ್ದರಿಂದ ಹೆಲ್ತ್‌ ಕಾರ್ಡ್‌ ಮಾಡಿಸಿಕೊಳ್ಳುತ್ತಿರುವೆ.
 ● ಶ್ರೀನಿವಾಸ, ಕೃಷಿಕ

 ಆರೋಗ್ಯ ಕರ್ನಾಟಕ ಯೋಜನೆಯಡಿ 1.5 ಲಕ್ಷ ರೂ.ವರೆಗೆ ಚಿಕಿತ್ಸಾ ಸೌಲಭ್ಯ ಪಡೆಯಲು ಅವಕಾಶ
„ ಕ್ಯಾನ್ಸರ್‌, ಹೃದ್ರೋಗ ಸಂಬಂಧಿತ ಚಿಕಿತ್ಸೆ ವೆಚ್ಚ 1.5 ಲಕ್ಷ ರೂ. ಮೀರಿದರೆ 50 ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುವುದು
„ ಯಶಸ್ವಿನಿಯಲ್ಲಿ ಲಭ್ಯವಿರದ ದ್ವಿತೀಯ ಹಂತದ ಕ್ಲಿಷ್ಟಕರ ಚಿಕಿತ್ಸೆ, ತೃತೀಯ ಹಂತದ ಚಿಕಿತ್ಸೆಗಳೂ ಲಭ್ಯ

 ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next