Advertisement

ಆರೋಗ್ಯಕರ ಜ್ಯೂಸ್‌ಗಳು

10:12 AM Mar 21, 2020 | mahesh |

ಬೇಸಿಗೆಯ ಬೇಗೆಯನ್ನು ತಣಿಸಲು ವಿವಿಧ ಬಗೆಯ ಜ್ಯೂಸ್‌ ಗಳನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸುವುದೊಳ್ಳೆಯದು.ಆರೋಗ್ಯಕರವಾದ ಮತ್ತು ರುಚಿಕರವಾದ ಜ್ಯೂಸ್‌ಗಳ ರೆಸಿಪಿ ಇಲ್ಲಿದೆ.

Advertisement

ತಾಳಿಬೊಂಡದ ಜ್ಯೂಸ್‌
ಬೇಕಾಗುವ ಸಾಮಾಗ್ರಿ: ತಾಳಿಬೊಂಡ (ತಾಟಿನುಂಗು)ದ ತಿರುಳು- 4, ಸಕ್ಕರೆ- 7 ಚಮಚ, ನಿಂಬೆರಸ- 1 ಚಮಚ.
ತಯಾರಿಸುವ ವಿಧಾನ: ತಾಳಿಬೊಂಡದ ತಿರುಳು ಮತ್ತು ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಇದಕ್ಕೆ ನಿಂಬೆರಸ, ಜ್ಯೂಸ್‌ನ ಹದಕ್ಕೆ ಬೇಕಾದಷ್ಟು ನೀರು ಸೇರಿಸಿ ಮತ್ತೂಮ್ಮೆ ರುಬ್ಬಿ. ಸ್ವಾದಿಷ್ಟಕರವಾದ ಜ್ಯೂಸ್‌ ಕುಡಿಯಲು ಸಿದ್ಧ. ತಾಳಿಬೊಂಡದ ಜ್ಯೂಸ್‌ ಸೇವಿಸುವುದರಿಂದ ಬಿಸಿಲಿನಲ್ಲಿ ಸಾಮಾನ್ಯವಾಗಿ ಕಾಡುವ ತಲೆಸುತ್ತು ಹಾಗೂ ಸುಸ್ತು ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಕ್ಯಾರೆಟ್‌ ಜ್ಯೂಸ್‌
ಬೇಕಾಗುವ ಸಾಮಾಗ್ರಿ: ಕ್ಯಾರೆಟ್‌- 1, ಹಾಲು- 1 ಕಪ್‌, ಗೋಡಂಬಿ- 4, ಸಕ್ಕರೆ- 6 ಚಮಚ, ಏಲಕ್ಕಿ ಪುಡಿ ಚಿಟಿಕೆ.

ತಯಾರಿಸುವ ವಿಧಾನ: ಗೋಡಂಬಿಯನ್ನು ಸ್ವಲ್ಪ ಹಾಲಿನಲ್ಲಿ ಕಾಲು ಗಂಟೆ ನೆನೆಸಿ. ಕ್ಯಾರೆಟ್‌ಗೆ ಸ್ವಲ್ಪ ನೀರು ಸೇರಿಸಿ ಬೇಯಿಸಿ. ಆರಿದ ಮೇಲೆ ನೆನೆದ ಗೋಡಂಬಿ, ಸಕ್ಕರೆ, ಸ್ವಲ್ಪ ಹಾಲು ಸೇರಿಸಿ ರುಬ್ಬಿ. ನಂತರ ಉಳಿದ ಹಾಲು, ಏಲಕ್ಕಿ ಹುಡಿ, ಸ್ವಲ್ಪ ನೀರು ಸೇರಿಸಿ ಇನ್ನೊಮ್ಮೆ ರುಬ್ಬಿ ಸರ್ವಿಂಗ್‌ ಕಪ್‌ ಹಾಕಿ. ರುಚಿಕರವಾದ ಕ್ಯಾರೆಟ್‌ ಜ್ಯೂಸ್‌ ಸಿದ್ಧ. ಇದು ಕಣ್ಣುಗಳ ಮತ್ತು ತ್ವಚೆಯ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಫ್ಯಾಷನ್‌ ಫ್ರೂ ಜ್ಯೂಸ್‌
ಬೇಕಾಗುವ ಸಾಮಾಗ್ರಿ: ಫ್ಯಾಶನ್‌ ಫ್ರೂಟ್‌- 1, ಸಕ್ಕರೆ- 7 ಚಮಚ.
ತಯಾರಿಸುವ ವಿಧಾನ: ಫ್ಯಾಶನ್‌ ಫ್ರೂಟ್‌ ತಿರುಳಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಸೋಸಿ ಸಕ್ಕರೆ, ಎರಡು ದೊಡ್ಡ ಕಪ್‌ ನೀರು ಸೇರಿಸಿ ಚೆನ್ನಾಗಿ ಕದಡಿ. ಜೀರ್ಣಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಫ್ಯಾಶನ್‌ ಫ್ರೂಟ್‌ ಜ್ಯೂಸ್‌ ರೆಡಿ.

Advertisement

ಎಳ್ಳು ಜ್ಯೂಸ್‌
ಬೇಕಾಗುವ ಸಾಮಾಗ್ರಿ: ಕಪ್ಪು ಎಳ್ಳು- 2 ಚಮಚ, ಹಾಲು- 1 ದೊಡ್ಡ ಕಪ್‌, ಬಾದಾಮಿ- 3, ಖರ್ಜೂರ- 3.
ತಯಾರಿಸುವ ವಿಧಾನ: ಬಾದಾಮಿ ಮತ್ತು ಖರ್ಜೂರಗಳನ್ನು ಬೇರೆ ಬೇರೆಯಾಗಿ ನೀರಿನಲ್ಲಿ ಎರಡು ಗಂಟೆ ನೆನೆಸಿ. ಎಳ್ಳನ್ನು ಒಂದು ಗಂಟೆ ನೆನೆಸಿ. ನೆನೆದ ಬಾದಾಮಿಯ ಸಿಪ್ಪೆಯನ್ನು ತೆಗೆದು ಸಣ್ಣಗೆ ಹೆಚ್ಚಿ. ನಂತರ ನೆನೆದ ಎಳ್ಳು, ಬಾದಾಮಿ, ಖರ್ಜೂರ ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಹಾಲು ಸೇರಿಸಿ ಇನ್ನೊಮ್ಮೆ ರುಬ್ಬಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಹದಮಾಡಿಕೊಳ್ಳಿ. ದೇಹವನ್ನು ತಂಪಾಗಿಸುವುದಲ್ಲದೆ ಮೂಳೆಗಳನ್ನು ಗಟ್ಟಿಮಾಡುವ ಎಳ್ಳಿನ ಜ್ಯೂಸ್‌ ಕುಡಿಯಲು ಸಿದ್ಧ. ಸಿಹಿ ಜಾಸ್ತಿ ಬೇಕಿದ್ದರೆ ಸ್ವಲ್ಪ ಬೆಲ್ಲ ಸೇರಿಸಬಹುದು.

ಪ್ರೇಮಾ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next