Advertisement

ಆರೋಗ್ಯ ಕರ್ನಾಟಕ: 5 ಲಕ್ಷ ರೂ.ಹೆಚ್ಚಳ ಚಿಂತನೆ

06:55 AM Aug 03, 2018 | |

ಬೆಂಗಳೂರು: ಕೇಂದ್ರ ಸರ್ಕಾರದ “ಆಯುಷ್ಮಾನ್‌ ಭಾರತ್‌’ ಮಾದರಿಯಲ್ಲಿ ಆರೋಗ್ಯ ಕರ್ನಾಟಕ ಯೋಜನೆಯ ಚಿಕಿತ್ಸಾ ವೆಚ್ಚವನ್ನು ಐದು ಲಕ್ಷ ರೂ.ವರೆಗೆ ಹೆಚ್ಚಿಸುವ ಚಿಂತನೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್ಮಾನ್‌ ಭಾರತ್‌ ಯೋಜನೆಗಿಂತ ಆರೋಗ್ಯ ಕರ್ನಾಟಕ ಯೋಜನೆ ಮೊತ್ತ ಕಡಿಮೆಯೆಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಐದು ಲಕ್ಷ ರೂ.ಗೆ ಏರಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಸಂಪುಟ ಸಭೆಯಲ್ಲೂ ಈ ಕುರಿತು ಸಮಾಲೋಚಿಸಲಾಗುವುದು ಎಂದರು.

ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಪ್ರಸ್ತುತ 1.50 ಲಕ್ಷ ರೂ. ಚಿಕಿತ್ಸಾ ವೆಚ್ಚ ಮಿತಿಯಿದ್ದು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಬಗ್ಗೆ ವೈದ್ಯರು ದೃಢೀಕರಿಸಿದರೆ 50 ಸಾವಿರ ರೂ. ಹೆಚ್ಚುವರಿಯಾಗಿ ನೀಡಲು ಅವಕಾಶವಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ 5 ಲಕ್ಷ ರೂ.ವರೆಗೂ ಅವಕಾಶವಿದೆ. ಹೀಗಾಗಿ, ನಮ್ಮಲ್ಲೂ 5 ಲಕ್ಷ ರೂ.ವರೆಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು  ಕ್ರಮ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕದಲ್ಲಿ ಒಟ್ಟು 1.30 ಕೋಟಿ ಕುಟುಂಬಗಳಿದ್ದು 62 ಲಕ್ಷ ಕುಟುಂಬಗಳು ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಸೌಲಭ್ಯ ಪಡೆಯಲಿದ್ದು, ಉಳಿದ ಕುಟುಂಬಗಳಿಗೆ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇವೆ ನೀಡಲಾಗುವುದು. ಆಯುಷ್ಮಾನ್‌ ಹಾಗೂ ಆರೋಗ್ಯ ಕರ್ನಾಟಕ ಉದ್ದೇಶ ಮತ್ತು ವ್ಯಾಪ್ತಿ ಒಂದೇ ಆಗಿರುವುದರಿಂದ ಎರಡೂ ಯೋಜನೆಗಳನ್ನು ಸೇರ್ಪಡೆಗೊಳಿಸುವ ಬಗ್ಗೆಯೂ ಕೇಂದ್ರ ಸರ್ಕಾರದ ಜತೆ ಚರ್ಚಿಸಲಾಗುತ್ತಿದೆ. ಅದರನ್ವಯ ಈ ಯೋಜನೆಯ ಒಂದು ಕೋ ಬ್ರಾಂಡಿಂಗ್‌ ಆಧಾರದ ಮೇಲೆ ಒಂದೇ ಯೋಜನೆಯಾಗಿ ಅನುಷ್ಠಾನಗೊಳಿಸುವ ಉದ್ದೇಶವಿದೆ ಎಂದು ಹೇಳಿದರು.

ಯಶಸ್ವಿನಿ ಸೇರಿ ಬಿಪಿಎಲ್‌ ಕುಟುಂಬಗಳಿಗೆ ಈ ಹಿಂದೆ ಇದ್ದ ವಾಜಪೇಯಿ ಆರೋಗ್ಯ ಶ್ರೀ, ಎಪಿಎಲ್‌ ಕುಟುಂಬಗಳ ರಾಜೀವ್‌ ಆರೋಗ್ಯ ಭಾಗ್ಯ, ಅಸಂಘಟಿತ ಕಾರ್ಮಿಕರು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ, ಅಂಗನವಾಡಿ ಮಕ್ಕಳ ಬಾಲಸ್ವಾಸ್ಥ್ಯ,  ಹರೀಶ್‌ ಸಾಂತ್ವನ, ಇಂದಿರಾ ಸುರಕ್ಷಾ ಯೋಜನೆ  ರದ್ದುಗೊಂಡು ಆರೋಗ್ಯ ಕರ್ನಾಟಕದಡಿ ವಿಲೀನಗೊಂಡಿದೆ. ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಯಲ್ಲಿ ಯಾವುದೇ ಗೊಂದಲವಿಲ್ಲ. ಎಪಿಎಲ್‌ ಹಾಗೂ ಬಿಪಿಎಲ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಹೊಂದಿದ್ದರೆ ಸಾಕು. ಚಿಕಿತ್ಸೆ ಅಗತ್ಯವಿದ್ದಾಗ ಹೋದರೆ ಸ್ಥಳದಲ್ಲೇ ಕಾರ್ಡ್‌ ಮಾಡಿಕೊಡಲಾಗುವುದು ಎಂದು ಹೇಳಿದರು.

Advertisement

ಈಗಾಗಲೇ ಯೋಜನೆಯಡಿ 501 ಖಾಸಗಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನೂ 322 ಆಸ್ಪತ್ರೆಗಳ ಜತೆ ದರ ನಿಗದಿ ಸಂಬಂಧ ಮಾತುಕತೆ ನಡೆಯುತ್ತಿದೆ. ಯೋಜನೆಯಡಿ ಪ್ರಾಥಮಿಕ ಆರೋಗ್ಯ ಸೇವೆ ಮತ್ತು ಸಾಮಾನ್ಯ ದ್ವಿತೀಯ ಆರೋಗ್ಯ ಸೇವೆಗಳನ್ನು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾತ್ರ ಪಡೆದುಕೊಳ್ಳಲು ಅವಕಾಶವಿದೆ. ನಿರ್ದಿಷ್ಟ ಹಂತದ ಕ್ಲಿಷ್ಟಕರ ಚಿಕಿತ್ಸೆಗಳು ಹಾಗೂ ತೃತೀಯ ಹಂತದ ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಾಮರ್ಥ್ಯ ಇಲ್ಲದಿದ್ದ ಪಕ್ಷದಲ್ಲಿ ರೋಗಿಗಳನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ತುರ್ತು ಚಿಕಿತ್ಸೆಗಳಿಗೆ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆ ಅಥವಾ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ವಿವರಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಮೂರು ಸಾವಿರ ವೈದ್ಯರು, 1085 ತಜ್ಞ ವೈದ್ಯರ ಕೊರತೆ ಇದ್ದು ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 382 ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

3 ಲಕ್ಷ ಕಾರ್ಡ್‌ ವಿತರಣೆ
ಮೊದಲ ಹಂತದಲ್ಲಿ 11 ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್‌ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು 3 ಲಕ್ಷ ಕಾರ್ಡ್‌ ವಿತರಿಸಲಾಗಿದೆ. ರಾಜ್ಯದಲ್ಲಿ ಯೋಜನೆ ಜಾರಿಯಾದ ಮೇಲೆ 15,643 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆ.15 ರೊಳಗೆ 30 ಜಿಲ್ಲೆಗಳಲ್ಲಿ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. 2ನೇ ಹಂತದಲ್ಲಿ ಸೆ.15ರೊಳಗೆ ಜಿಲ್ಲಾಸ್ಪತ್ರೆ ಸೇರಿ ರಾಜ್ಯದ 33 ಪ್ರಮುಖ ಆಸ್ಪತ್ರೆಗಳಲ್ಲಿ ನೋಂದಣಿ ಪ್ರಾರಂಭಿಸಲಾಗುವುದು. ಅಕ್ಟೋಬರ್‌ ಅಂತ್ಯದ ವೇಳೆಗೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆರಂಭಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next