ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಎಲ್ಲ ಆರೋಗ್ಯ ಯೋಜನೆಗಗಳು ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನವಾಗಿದ್ದು, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಷ್ಟೇ ಆ.31ರ ನಂತರ ಯೋಜನೆಯಡಿ ವಿಲೀನಗೊಳ್ಳಲಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಆರೋಗ್ಯ ಕರ್ನಾಟಕ ಯೋಜನೆಯ ಅನುಷ್ಠಾನದ ಮಾರ್ಗಸೂಚಿಗಳನ್ನು ಸರ್ಕಾರ ಸರಳೀಕರಿಸಿ ಜೂ. 1ರಂದು ಆದೇಶ ಹೊರಡಿಸಿದ್ದು, ವಿವರ ಹೀಗಿದೆ.
ಯೋಜನೆಯಲ್ಲಿ ರೋಗಿಗೆ ಸಂಬಂಧಪಟ್ಟ ಮಾರ್ಪಾಡು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಕಾರ್ಡ್ ಹೊಂದಿರುವ (63 ಲಕ್ಷ ಕುಟುಂಬ) ಸದಸ್ಯರು ಆ.31ರವರೆಗೆ ಸರ್ಕಾರಿ ಆಸ್ಪತ್ರೆಯಿಂದ ರೆಫರ್ ಆಗದಿದ್ದರೂ ದ್ವಿತೀಯ ಹಂತ ಚಿಕಿತ್ಸೆಯನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು. ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗದಿರುವ ರೋಗಿಯು ತಮ್ಮ ಬಿಪಿಎಲ್/ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ನೀಡಿ ಸಂಕೀರ್ಣ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಯನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು.
ಸರ್ಕಾರಿ ಆಸ್ಪತ್ರೆಗಳಿಂದ ರೆಫರ್ ಆದ ಬಳಿಕವಷ್ಟೇ ಸಂಕೀರ್ಣ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆ ಪಡೆಯಬಹುದು. ತುರ್ತು ಚಿಕಿತ್ಸೆಗೆ ರೆಫರಲ್ ಅಗತ್ಯವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಖಾಸಗಿ ಆಸ್ಪತ್ರೆಗೆ ಸಂಬಂಧಪಟ್ಟಂತೆ ಬದಲಾವಣೆ ವಾಜಪೇಯಿ ಆರೋಗ್ಯಶ್ರೀ, ಯಶಸ್ವಿನಿ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳು ಜೂ.30ರವರೆಗೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸಮ್ಮತಿ ಪತ್ರ ನೀಡಿ ತಾತ್ಕಾಲಿಕ ನೋಂದಣಿ ಮಾಡಿಕೊಳ್ಳಬಹುದು. ಮೂರು ತಿಂಗಳಲ್ಲಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಯೋಜನೆಯಡಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಕಾಲಮಿತಿಯೊಳಗೆ ನೋಂದಣಿಯಾಗದ ಆಸ್ಪತ್ರೆಗಳು ಹಾಗೂ ಹೊಸ ಆಸ್ಪತ್ರೆಗಳು ಸಹ ಜೂ.30ರ ನಂತರ ಅರ್ಜಿ ಸಲ್ಲಿಬಹುದು. ಸಂಕೀರ್ಣ ದ್ವಿತೀಯ ಹಂತದ ಚಿಕಿತ್ಸೆಗೆ ಕನಿಷ್ಠ 10 ಹಾಸಿಗೆ ಸಾಮರ್ಥಯವಿರಬೇಕು ಎಂಬ ನಿಯಮ ವಿಧಿಸಲಾಗಿದೆ.
ಬೆಂಗಳೂರಿನ ಮೂರು ಆಸ್ಪತ್ರೆ ಸೇರಿದಂತೆ ರಾಜ್ಯದ 11 ಆಸ್ಪತ್ರೆಗಳಲ್ಲಿ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ವಿತರಿಸಲಾಗುತ್ತಿದ್ದು, ಮೂರ್‍ನಾಲ್ಕು ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲೂ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ರೋಗಿಗಳು ಚಿಕಿತ್ಸೆಗೆ ಬಂದಾಗ ನೋಂದಾಯಿಸಿ ಕಾರ್ಡ್ ಪಡೆಯಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.