Advertisement

ಆರೋಗ್ಯ ಸೇವೆ: ಏಷ್ಯಾದಲ್ಲೇ ಮಾದರಿ ರಾಜ್ಯದ ಗುರಿ: ಸಿಎಂ ಬಸವರಾಜ ಬೊಮ್ಮಾಯಿ

09:22 PM Aug 24, 2022 | Team Udayavani |

ಬೆಂಗಳೂರು: ಆರೋಗ್ಯ ಕ್ಷೇತ್ರ ಹಾಗೂ ಆರೋಗ್ಯ ಸೇವೆಗಳಲ್ಲಿ ಕರ್ನಾಟಕವನ್ನು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಷ್ಟೇ ಅಲ್ಲ, ಕನಿಷ್ಟ ಇಡೀ ಏಷ್ಯಾದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪಾಲ್ಗೊಂಡು ಕರ್ನಾಟಕ ಹೆಲ್ತ್‌ ವಿಷನ್‌ ಡಾಕ್ಯುಮೆಂಟ್‌’ ಬಿಡುಗಡೆ ಮಾಡಿ ಮಾತನಾಡಿ, ರಾಜ್ಯದ ಆರೋಗ್ಯ ಕ್ಷೇತ್ರ ಹಾಗೂ ವಿವಿಧ ಆರೋಗ್ಯ ಸೇವೆಗಳ ಬಗ್ಗೆ ಮುಂದಿನ ಕನಿಷ್ಠ 25 ವರ್ಷಗಳ ಗುರಿ ಇಟ್ಟುಕೊಂಡು ಬಹು ಆಯಾಮ ಹೊಂದಿದ ಸಮಗ್ರ ವಿಷನ್‌ ಡಾಕ್ಯುಮೆಂಟ್‌’ ತಯಾರಿಸಲಾಗಿದೆ. ಇದು ಆರೋಗ್ಯ ಕ್ಷೇತ್ರದ ನಿರ್ವಹಣೆಗೆ ಎನ್‌ಸೈಕ್ಲೋಪಿಡಿಯಾ’ ಆಗಲಿದೆ ಎಂದು ತಿಳಿಸಿದರು.

ವಿಷನ್‌ ಡಾಕ್ಯುಮೆಂಟ್‌ನಲ್ಲಿ ಮಾಡಲಾಗಿರುವ ಶಿಫಾರಸುಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು. ಆರೋಗ್ಯ ಕ್ಷೇತ್ರ ಮತ್ತು ಆರೋಗ್ಯ ಸೇವೆಗಳಲ್ಲಿ ಕರ್ನಾಟಕವನ್ನು ದೇಶ ಅಲ್ಲ, ಇಡೀ ಏಷ್ಯಾದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡುವ ಗುರಿಯೊಂದಿಗೆ ಸರ್ಕಾರ ಮುಂದುವರಿಯಲಿದೆ ಎಂದು ಹೇಳಿದರು.

ನಮ್ಮದು ಆರೋಗ್ಯ ಜಾಗೃತ ಸರಕಾರ. ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಡಯಾಲಿಸಿಸ್‌ ಸೈಕಲ್‌ಗ‌ಳನ್ನು 30ರಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. 12 ಕಿಮೋಥೆರಪಿ ಕೇಂದ್ರಗಳನ್ನು ತೆರೆಯಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ. ಅದೇ ರೀತಿ 60 ವರ್ಷ ಮೇಲ್ಪಟ್ಟವರಿಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಪ್ರಧಾನವಾಗಿಟ್ಟುಕೊಂಡು ಆರೋಗ್ಯ ತಪಾಸಣೆ ಶಿಬಿರಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರೊಂದಿಗೆ ಚರ್ಚಿಸಿದ್ದೇನೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆಯೂ ಯೋಚಿಸಲಾಗಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 100 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ಆರೋಗ್ಯ ಸೇವೆಗೆ ಸರ್ಕಾರ ಆದ್ಯತೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ 100 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಒಂದು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ 500 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ 243 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡಿದ್ದು, 2 ತಿಂಗಳಲ್ಲಿ ಎಲ್ಲಾ 243 ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕೋವಿಡ್‌ ಲಸಿಕಾಕರಣದಲ್ಲಿ ಎರಡು ಡೋಸ್‌ಗಳಲ್ಲಿ ಶೇ.100 ಸಾಧನೆ ಆಗಿದೆ. ಇದಕ್ಕೂ ವೈದ್ಯರ ಶ್ರಮವೇ ಕಾರಣ. ಹಾಗೆಯೇ, ಮೂರನೇ ಡೋಸ್‌ ಶೇ.100 ಸಾಧನೆ ಮಾಡಲು ಎಲ್ಲಾ ವೈದ್ಯರು ಶ್ರಮಿಸಬೇಕು ಎಂದು ಸಚಿವರು ಕೋರಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಆರ್‌.ಅಶೋಕ್‌, ಸಂಸದ ಡಾ.ಉಮೇಶ್‌ ಜಾಧವ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ರಾಜಕುಮಾರ್‌ ಪಾಟೀಲ್‌ ತೇಲ್ಕೂರ, ಅ. ದೇವೇಗೌಡ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದ ದೂರದೃಷ್ಟಿಗಾಗಿ ಕರ್ನಾಟಕ ವಿಷನ್‌ ಡಾಕ್ಯುಮೆಂಟ್‌’ ಹೊರತರಲಾಗಿದ್ದು, ರಾಜ್ಯದ ಪಾಲಿಗೆ ಇದೊಂದು ಐತಿಹಾಸಿಕ ಘಟ್ಟವಾಗಿದೆ. ಡಾ.ಗುರುರಾಜ್‌ ನೇತೃತ್ವದ ತಂಡ ಒಂದು ವರ್ಷ ಅಧ್ಯಯನ, ಸಂಶೋಧನೆ, ಸಭೆಗಳನ್ನು ನಡೆಸಿ ಈ ವರದಿ ರೂಪಿಸಿದೆ. 250 ಕ್ಕೂ ಅಧಿಕ ತಜ್ಞರು ಈ ವರದಿ ರೂಪಿಸಲು ಸಲಹೆ ನೀಡಿದ್ದಾರೆ.
– ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next