ಧಾರವಾಡ: ಆರೋಗ್ಯವಂತ ಮನುಷ್ಯ ಕುಟುಂಬದ ಹಾಗೂ ಸಮಾಜದ ಸಂಪತ್ತು ಆಗಿದ್ದು, ಆರೋಗ್ಯವೇ ಸಂಪತ್ತು ಆಗಿದ್ದರೆ ಅನಾರೋಗ್ಯ ಆಪತ್ತು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೀರಣ್ಣ ಒಡ್ಡೀನ ತಿಳಿಸಿದರು.
ನಾವು ಸೇವಿಸುವ ಆಹಾರವೂ ಸಹ ಔಷಧಿಯಾಗಿ ಕಾರ್ಯ ಮಾಡುತ್ತದೆ. ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಹೊಂದಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಮಹಾಂತೇಶ ಬೇತೂರಮಠ ಮಾತನಾಡಿ, ಸಮತೋಲನ ಹಾಗೂ ಪೌಷ್ಟಿಕಾಂಶವುಳ್ಳ ಸಾತ್ವಿಕ ಆಹಾರ ಸೇವನೆಯಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಯಾವುದೇ ದೇಶ ಸಾಮಾಜಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಾದರೆ ಆರೋಗ್ಯವಂತ ಸಮುದಾಯ ಬೇಕು. ಆರೋಗ್ಯವೇ ಮಹಾಭಾಗ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವೈದ್ಯ ಡಾ| ಚಿದಾನಂದ ಎನ್ ಮಾತನಾಡಿ, ಇಂದಿನ ಯಾಂತ್ರಿಕ ಜೀವನದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಎಲ್ಲರ ಬದುಕನ್ನು ಭಾರವಾಗಿಸಿವೆ. ಹಿತ-ಮಿತವಾದ ಆಹಾರ ಸೇವನೆ ದಿಧೀರ್ಘಾಯುಸ್ಸಿನ ಮೂಲವಾಗಿದೆ. ನಾವು ಸೇವಿಸುವ ಆಹಾರವು ಶ್ರೀಮಂತವಾಗಿರದಿದ್ದರೂ ಸಾತ್ವಿಕವಾಗಿರಬೇಕು ಎಂದರು.
Advertisement
ನಗರದ ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿ ವಿಜಯ ಕ್ಲಿನಿಕ್ ಹಾಗೂ ಗಂಗಾವತಿಯ ಶ್ರೀದೇವಿ ಹೆಲ್ತ್ ಕೇರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಎಸ್.ಬಿ. ಕಮ್ಮಾರ, ಹೇಮಂತ ಬಿಸರಳ್ಳಿ, ರವಿ ಧಣಿಗೊಂಡ, ಡಾ| ಎಸ್.ಎಂ. ವಿಜಯಕುಮಾರ, ಡಾ| ಪ್ರವೀಣಕುಮಾರ, ಡಾ| ಸರಸ್ವತಿ, ಡಾ| ಆರ್. ಟಿ. ಪ್ರಕಾಶ, ಡಾ| ಸುಧಾ ಇದ್ದರು. ಬಿ.ಎಚ್. ಲಿಂಗಪ್ಪ ನಿರೂಪಿಸಿದರು. ರೇವಣಸಿದ್ದಪ್ಪ ಬಿ.ಎಚ್. ಸ್ವಾಗತಿಸಿ, ವಂದಿಸಿದರು.
ಕೈಗಾ ಘಟಕದಿಂದ ನೇತ್ರ ಚಿಕಿತ್ಸೆ ಶಿಬಿರ: ಸಮಾರೋಪ
ಹುಬ್ಬಳ್ಳಿ: ಇಲ್ಲಿನ ಡಾ| ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಕೈಗಾ ಅಣು ವಿದ್ಯುತ್ ಘಟಕದ ವತಿಯಿಂದ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭ ಬುಧವಾರ ನಡೆಯಿತು.
ಕೈಗಾ ಅಣು ವಿದ್ಯುತ್ ಘಟಕದ ಸೈಟ್ ನಿರ್ದೇಶಕ ಸತ್ಯನಾರಾಯಣ ಮಾತನಾಡಿ, ಕೈಗಾದ ಸುತ್ತಮುತ್ತಲ ಜನರು ಬಡತನದ ಕಾರಣದಿಂದಾಗಿ ನೇತ್ರ ಚಿಕಿತ್ಸೆಯಿಂದ ವಂಚಿತ ಆಗಬಾರದು ಎಂಬುದು ನಮ್ಮ ಉದ್ದೇಶ. ಈ ದಿಸೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗಿದೆ. ಘಟಕ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಯೋಜನೆಯಡಿ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಡಾ| ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಲಭಿಸಿದ್ದು, ಮುಂದಿನ ವರ್ಷ ಇನ್ನಷ್ಟು ಅರ್ಹ ಜನರಿಗೆ ನಮ್ಮ ಸಂಸ್ಥೆ ವತಿಯಿಂದ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಎಂದು ಹೇಳಿದರು.
ಪದ್ಮಶ್ರೀ ಡಾ| ಎಂ.ಎಂ. ಜೋಶಿ ಮಾತನಾಡಿ, ಬಡ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸೆ ಕೊಡಿಸಲು ಸಂಘ-ಸಂಸ್ಥೆಗಳು ಮುಂದಾಗಬೇಕು. ಅನೇಕರು ಆರ್ಥಿಕ ಕಾರಣದಿಂದಾಗಿ ಕಣ್ಣಿನ ಸಮಸ್ಯೆ ಕಡೆಗಣಿಸುತ್ತಾರೆ. ಇದರಿಂದ ಮುಂದೆ ದೃಷ್ಟಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಣ್ಣಿನ ಸಮಸ್ಯೆ ಕಡೆಗಣಿಸದೇ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ನಮ್ಮ ಸಂಸ್ಥೆ ಕಳೆದ 30 ವರ್ಷಗಳಿಂದ ಉಚಿತವಾಗಿ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದೆ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಡಾ| ಕೃಷ್ಣ ಪ್ರಸಾದ ಮಾತನಾಡಿ, ನೂತನ ಶಸ್ತ್ರಚಿಕಿತ್ಸಾ ವಿಧಾನದಿಂದಾಗಿ ನೋವು ರಹಿತವಾಗಿ ಶಸ್ತ್ರಚಿಕಿತ್ಸೆ ಮಾಡಬಹುದಾಗಿದೆ. ಮರು ದಿನವೇ ರೋಗಿ ದಿನನಿತ್ಯದ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದರು. ಕೈಗಾ ಸಂಸ್ಥೆ ವೈದ್ಯಕೀಯ ನಿರ್ದೇಶಕಿ ಜ್ಯೋತಿ ಪುರಂದರೆ, ಕೈಗಾ ಕಾರ್ಮಿಕರ ಸಂಘದ ಅಧ್ಯಕ್ಷ ಜಾನಕಿರಾಮ್ ಮಾತನಾಡಿದರು. ಡಾ| ಗುರುಪ್ರಸಾದ, ಶಿವರಾಮ ಕೃಷ್ಣ ಇದ್ದರು.