ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳೀಗ ಪ್ಲಾಸ್ಟಿಕ್ ಬಳಕೆಯಿಂದ ಮುಕ್ತವಾಗಿವೆ. ವಿದ್ಯಾರ್ಥಿಗಳನ್ನು ಆರೋಗ್ಯ ಕ್ಷೇತ್ರದ ರಾಯಭಾರಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ವಿವಿ ಪಣತೊಟ್ಟಿದೆ. ಆ ಹಿನ್ನೆಲೆಯಲ್ಲಿ ಆರೋಗ್ಯ ವಿವಿ ಮತ್ತು ಅದರ ವ್ಯಾಪ್ತಿಯ ಕಾಲೇಜು ಆವರಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ.
ರಾಜ್ಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ ಸೇರಿದಂತೆ ವಿವಿಧ ವೈದ್ಯಕೀಯ ಕೋರ್ಸ್‌ಗಳ ಸುಮಾರು 654 ಕಾಲೇಜುಗಳಿವೆ. ಇಲ್ಲಿನ ವಿವಿಧ ವೈದ್ಯಕೀಯ ಕೋರ್ಸ್‌ಗಳಲ್ಲಿ ಸುಮಾರು 1.40 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬೆಂಗಳೂರು ನಗರದಲ್ಲೇ ಸುಮಾರು 340 ಕಾಲೇಜುಗಳಿವೆ. ಆಯಾ ಕಾಲೇಜು ಆವರಣಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಈಗಾಗಲೇ ವಿವಿ ಕುಲಪತಿಗಳು, ಕುಲಸಚಿವರ ಮೂಲಕ ಸುತ್ತೋಲೆ ಹೊರಡಿಸಿದ್ದಾರೆ.
ನೀರಿಗೆ ಸ್ಟೀಲ್ ಲೋಟ: ಜಯನಗರ ನಾಲ್ಕನೇ ಹಂತದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಆವರಣಕ್ಕೆ ಭೇಟಿ ನೀಡಿದರೆ ಅಲ್ಲಿ ಪ್ಲಾಸ್ಟಿಕ್ ಮುಕ್ತ ಸ್ವಚ್ಛಂದ ವಾತಾವರಣವನ್ನು ನೋಡಬಹುದು. ವಿವಿ ಆವರಣದಲ್ಲಿರುವ ಕುಡಿಯುವ ನೀರಿನ ಘಟಕದತ್ತ ತೆರಳಿದರೆ ಅಲ್ಲಿ ಪ್ಲಾಸ್ಟಿಕ್ ಲೋಟ ಕಾಣುವುದಿಲ್ಲ. ವಿವಿ ಸುತ್ತೋಲೆ ಹೊರಡಿಸಿದ ನಂತರ ಕುಡಿಯುವ ನೀರಿನ ಘಟಕದಲ್ಲಿ ಸ್ಟೀಲ್ ಲೋಟಗಳನ್ನು ಇರಿಸಲಾಗಿದೆ. ಕಾಲೇಜಿನಲ್ಲಿ ನಡೆಯುವ ಸಮಾರೋಪ ಸಮಾರಂಭಗಳನ್ನು ಕೂಡ ಪ್ಲಾಸ್ಟಿಕ್ ಬಳಕೆಯಿಂದ ದೂರವಿರಿಸಲಾಗಿದೆ.
ಸಸಿ ನೀಡುವ ಸಂಸ್ಕೃತಿ: ಈ ಹಿಂದೆ ವಿವಿಯಲ್ಲಿ ನಡೆಯುತ್ತಿದ್ದ ಸಭೆ, ಸಮಾರಂಭಗಳಿಗೆ ಆಗಮಿಸುತ್ತಿದ್ದ ಅತಿಥಿಗಳಿಗೆ ಪುಷ್ಪಗುತ್ಛ ನೀಡುವ ಸಂಸ್ಕೃತಿ ಇತ್ತು. ಆದರೆ ಪುಷ್ಪ ಗುತ್ಛಗಳಿಗೆ ಪ್ಲಾಸ್ಟಿಕ್ ಹೊದಿಕೆ ಇರುವುದರಿಂದ ಗಣ್ಯರಿಗೆ ಬೊಕೆ ನೀಡುವುದನ್ನು ಕೈಬಿಡಲಾಗಿದೆ. ಬೊಕೆ ಬದಲಿಗೆ ಅತಿಥಿಗಳಿಗೆ ವಿವಿಧ ಜಾತಿಯ ಸಸಿಗಳನ್ನು ನೀಡುವ ಹೊಸ ಸಂಸ್ಕೃತಿಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹುಟ್ಟುಹಾಕಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಣ್ಣಿನಲ್ಲಿ ಕರಗುವ ವಸ್ತುಗಳಿಗೆ ಆದ್ಯತೆ: ಆರೋಗ್ಯ ಮತ್ತು ಪರಿಸರ ಜಾಗೃತಿ ಕುರಿತ ಅನುಪಮ ಕಾರ್ಯಕ್ರಮಗಳನ್ನು ವಿವಿ ರೂಪಿಸಿದೆ. ವಿದ್ಯಾರ್ಥಿ ಸಮೂಹವನ್ನು ಆರೋಗ್ಯ ಕ್ಷೇತ್ರದ ರಾಯಭಾರಿಗಳನ್ನಾಗಿ ರೂಪಿಸಲು ಪಣ ತೊಡಲಾಗಿದ್ದು, ಪ್ಲಾಸ್ಟಿಕ್ ಬಳಕೆ ಬದಲಾಗಿ ಮಣ್ಣಿನಲ್ಲಿ ಕರಗುವ ವಸ್ತುಗಳನ್ನು ಬಳಕೆ ಮಾಡುವಂತೆ ವಿದ್ಯಾರ್ಥಿಗಳಲ್ಲಿ ವಿನಂತಿ ಮಾಡಲಾಗಿದೆ.
ಇದು ಫಲ ನೀಡುತ್ತಿದೆ ಎಂದು ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಉಪಕುಲಸಚಿವ ಡಾ.ಬಿ.ವಸಂತ ಶೆಟ್ಟಿ
“ಉದಯವಾಣಿ’ಗೆ ತಿಳಿಸಿದ್ದಾರೆ. ಈ ಹಿಂದೆ ಕಾಲೇಜು ಕ್ಯಾಂಟೀನ್‌ಗಳಲ್ಲೂ ಅಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿತ್ತು. ಆದರೆ, ಪ್ರಸ್ತುತ ಅದಕ್ಕೂ ಕಡಿವಾಣ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಬಳಕೆ ಅನೇಕ ರೀತಿಯ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ಆ ಹಿನ್ನೆಲೆಯಲ್ಲಿ ವಿವಿ ವ್ಯಾಪ್ತಿಯ ಕಾಲೇಜುಗಳ ಆವರಣಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ.
-ಡಾ.ಎಸ್. ಸಚ್ಚಿದಾನಂದ ಆರೋಗ್ಯ ವಿವಿ ಕುಲಪತಿ