Advertisement
ನಮ್ಮ ಕಿವಿ ಮೂರು ಭಾಗಗಳನ್ನು ಹೊಂದಿದೆ: ಹೊರ ಕಿವಿ, ಮಧ್ಯ ಕಿವಿ ಮತ್ತು ಒಳ ಕಿವಿ. ಕೇಳುವಿಕೆಯಲ್ಲಿ ಒಳ ಕಿವಿಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅಲ್ಲಿ ಸದ್ದುಗಳನ್ನು ಎಲೆಕ್ಟ್ರಿಕಲ್ ಸಂಕೇತಗಳನ್ನಾಗಿ ಮಾರ್ಪಡಿಸುವ ರೋಮ ಅಂಗಾಂಶ (ಹೇರ್ ಸೆಲ್)ಗಳು ಎಂದು ಕರೆಯಲ್ಪಡುವ ವಿಶೇಷ ಅಂಗಾಂಶಗಳಿರುತ್ತವೆ. ಈ ಎಲೆಕ್ಟ್ರಿಕಲ್ ಸಂಕೇತಗಳನ್ನು ನ್ಯುರಾನ್‌ಗಳು ಮಿದುಳಿಗೆ ಸದ್ದಿನ ಗ್ರಹಿಕೆಗಾಗಿ ರವಾನಿಸುತ್ತವೆ. ಸಾಮಾನ್ಯವಾಗಿ, ಹೊರ ಕಿವಿ, ಮಧ್ಯ ಕಿವಿ ಮತ್ತು ಒಳ ಕಿವಿಯಲ್ಲಿ ಉಂಟಾಗುವ ಹಾನಿ, ಸೋಂಕು ಶ್ರವಣ ಶಕ್ತಿ ನಷ್ಟಕ್ಕೆ ಕಾರಣವಾಗುತ್ತದೆ. ಶ್ರವಣ ಶಕ್ತಿ ನಷ್ಟವಾಗಿ ಶಾಶ್ವತ ಶ್ರವಣ ದೋಷ ಉಂಟಾಗುವುದಕ್ಕೆ ಹಲವು ಕಾರಣಗಳಿರುತ್ತವೆ. ಶಾಶ್ವತ ಶ್ರವಣ ಶಕ್ತಿಯನ್ನು ಉಂಟು ಮಾಡುವ ಕಾರಣಗಳಲ್ಲಿ ತಡೆಯಬಹುದಾದ ಹಲವು ಇದ್ದು, ಅವುಗಳಲ್ಲಿ ಒಂದು ಭಾರೀ ಸದ್ದು ಅಥವಾ ಗದ್ದಲದಿಂದ ಶ್ರವಣ ಶಕ್ತಿ ನಷ್ಟ. ತೀವ್ರ ಸದ್ದುಗದ್ದಲಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದು ಅಥವಾ ಅತ್ಯಂತ ತೀವ್ರತೆಯ ಸದ್ದಿಗೆ ಸ್ವಲ್ಪ ಕಾಲ ಒಡ್ಡಿಕೊಂಡರೆ ಒಳ ಕಿವಿಯ ರೋಮ ಅಂಗಾಂಶಗಳಿಗೆ ಹಾನಿಯಾಗಿ ಶ್ರವಣ ಶಕ್ತಿ ನಷ್ಟ ಉಂಟಾಗುತ್ತದೆ. ಇದನ್ನು ಸದ್ದಿನಿಂದ ಉಂಟಾಗುವ ಶ್ರವಣಶಕ್ತಿ ನಷ್ಟ ಎಂದು ಕರೆಯಲಾಗುತ್ತದೆ.
Related Articles
Advertisement
ಶಾಶ್ವತ ಶ್ರವಣ ಶಕ್ತಿ ನಷ್ಟವಾಗಿ ಉಲ್ಬಣವಾಗುತ್ತದೆ. ಸದ್ದಿನಿಂದ ಉಂಟಾಗುವ ಶ್ರವಣಶಕ್ತಿ ದೋಷ ಹೊಂದುವವರಲ್ಲಿ ಆರಂಭಿಕವಾಗಿ ಹೆಚ್ಚು ತರಂಗಾಂತರದ ಸದ್ದುಗಳನ್ನು ಕೇಳಿಸಿಕೊಳ್ಳುವ ಸಾಮರ್ಥ್ಯ ಬಾಧಿತವಾಗುತ್ತದೆ, ಇದನ್ನು ಹೆಚ್ಚು ತರಂಗಾಂತರದ ಸದ್ದುಗಳನ್ನು ಕೇಳಿಸಿಕೊಳ್ಳುವ ಶಕ್ತಿಯ ನಷ್ಟ ಎನ್ನಲಾಗುತ್ತದೆ.
ಈ ಆರಂಭಿಕ ಶ್ರವಣ ಶಕ್ತಿ ನಷ್ಟವು ಬಾಧಿತ ವ್ಯಕ್ತಿಯ ಗಮನಕ್ಕೆ ಬರದಿರುವ ಸಾಧ್ಯತೆ ಹೆಚ್ಚು. ಭಾರೀ ಸದ್ದುಗಳಿಗೆ ಸತತವಾಗಿ ಒಡ್ಡಿಕೊಳ್ಳುವುದರಿಂದ ಇತರ ತರಂಗಾಂತರಗಳ
ಸದ್ದುಗಳನ್ನು ಆಲಿಸುವ ಸಾಮರ್ಥ್ಯವೂ ಬಾಧಿತವಾಗುತ್ತ ಹೋಗುತ್ತದೆ. ಇದರ ಜತೆಗೆ ಶ್ರವಣಶಕ್ತಿ ನಷ್ಟದ ಪ್ರಮಾಣವೂ ಹೆಚ್ಚುತ್ತದೆ. ಆಗ ಶ್ರವಣ ಶಕ್ತಿ ನಷ್ಟವು ಮಾತುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ತೊಂದರೆಯಂತಹ ದೈನಿಕ ಚಟುವಟಿ ಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಾರಂಭವಾಗುತ್ತದೆ.
ಭಾರೀ ಸದ್ದು ಕೇಳಿಸಿದ ಬಳಿಕ ಕಿವಿಯೊಳಗೆ ಗುಂಯ್‌ಗಾಡುವ ಅನುಭವ ಉಂಟಾಗುವುದು ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟದಆರಂಭಿಕ ಸೂಚನೆಯಾಗಿದೆ. ಈ ಗುಂಯ್‌ಗಾಡುವಿಕೆಯು ಕೆಲವು ನಿಮಿಷ, ತಾಸು ಅಥವಾ ದಿನಗಳ ಕಾಲ ಇದ್ದು ತಾತ್ಕಾಲಿಕವಾಗಿರಬಹುದು ಅಥವಾ ಶಾಶ್ವತವಾಗಿರಬಹುದು.
ಕಿವಿಯ ಒಳಭಾಗಕ್ಕೆ ಹಾನಿಯಾಗಿದೆ ಎಂಬುದರ ಸೂಚನೆಯೇ ಗುಂಯ್‌ಗಾಡುವಿಕೆ. ಕೆಲವು ವ್ಯಕ್ತಿಗಳಲ್ಲಿ ಭಾರೀ ಸದ್ದುಗಳನ್ನು ಕೇಳಿಸಿಕೊಳ್ಳುವುದು ವಯಸ್ಸಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟವನ್ನು ಪ್ರಚೋದಿಸಬಹುದು. ಇದರಿಂದಾಗಿ ಮುಪ್ಪಿನಲ್ಲಿ ಸಂವಹನಕ್ಕೆ ಗಮನಾರ್ಹ ತೊಂದರೆಯಾಗಬಹುದು. ಪ್ಯೂರ್-ಟೋನ್ ಆಡಿಯೋಮೆಟ್ರಿ ಎಂಬ ಶ್ರವಣಶಾಸ್ತ್ರೀಯ ತಪಾಸಣೆಯಿಂದ ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟವನ್ನು ಪತ್ತೆ ಹಚ್ಚಬಹುದು.
ಪ್ರಸ್ತುತ ಸದ್ದಿನಿಂದ ಉಂಟಾದ ಶ್ರವಣಶಕ್ತಿ ನಷ್ಟವನ್ನು ಔಷಧ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಲು ಸಾಧ್ಯವಿಲ್ಲ. ಹೀಗಾಗಿ ಸದ್ದಿನಿಂದ ಉಂಟಾಗುವ ಶ್ರವಣಶಕ್ತಿ ನಷ್ಟದ ನಿರ್ವಹಣೆಯಲ್ಲಿ
ಶ್ರವಣ ಶಕ್ತಿ ನಷ್ಟವನ್ನು ತಡೆಯುವುದೇ ಆರಂಭಿಕ ಹೆಜ್ಜೆಯಾಗಿರುತ್ತದೆ. ಆದರೆ ಶ್ರವಣ ಶಕ್ತಿ ನಷ್ಟ ಉಂಟಾಗಲಾರಂಭಿಸಿದ್ದರೆ ಭಾರೀ ಸದ್ದುಗಳನ್ನು ಕೇಳಿಸಿಕೊಳ್ಳುವುದರಿಂದ ದೂರ ಉಳಿಯುವ ಮೂಲಕ ಅದು ಉಲ್ಬಣಿಸುವುದನ್ನು ತಡೆಯಬಹುದಾಗಿದೆ. ವ್ಯಕ್ತಿಗೆ ಗಮನಾರ್ಹ ಶ್ರವಣ ಶಕ್ತಿ ನಷ್ಟ ಉಂಟಾಗಿದ್ದರೆ, ಸದ್ದಿನಿಂದ ಉಂಟಾದ ಶ್ರವಣ ಶಕ್ತಿ ನಷ್ಟಕ್ಕೆ ಲಭ್ಯವಿರುವ ಅತ್ಯುತ್ತಮ ಚಿಕಿತ್ಸೆ ಎಂದರೆ ಶ್ರವಣ ಸಾಧನಗಳನ್ನು ಅಳವಡಿಸಿಕೊಳ್ಳುವುದು.
ಸದ್ದಿನಿಂದ ಕೂಡಿದ ಸನ್ನಿವೇಶವೊಂದು ನಮ್ಮ ಶ್ರವಣಶಕ್ತಿಗೆ ಅಪಾಯಕಾರಿ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?
ಸಾಮಾನ್ಯವಾಗಿ ಈ ಕೆಳಗಿನ ಸನ್ನಿವೇಶಗಳಿದ್ದರೆ ಆಗ ಸದ್ದು ಕೇಳಿಸುವಿಕೆಗೆ ಅಪಾಯಕಾರಿ ಎಂದು ತಿಳಿಯಬಹುದು:
ಹಿನ್ನೆಲೆಯ ಸದ್ದಿನ ನಡುವೆ ನಾವು ಮಾತನಾಡಿದ್ದು ಇನ್ನೊಬ್ಬರಿಗೆ ಕೇಳಿಸಬೇಕಾದರೆ ಬೊಬ್ಬೆ ಹಾಕಬೇಕಾಗಿರುವುದು.
ಕಿವಿಯಲ್ಲಿ ನೋವು ಅಥವಾ ಗುಂಯ್‌ಗಾಡುವಿಕೆ ಉಂಟಾಗುವುದು.
ಭಾರೀ ಸದ್ದನ್ನು ಕೇಳಿಸಿಕೊಂಡ ಬಳಿಕ ಕೆಲವು ತಾಸುಗಳ ವರೆಗೆ ಅಥವಾ ಇನ್ನಷ್ಟು ಹೆಚ್ಚು ಕಾಲ ಶ್ರವಣ ಶಕ್ತಿ ನಷ್ಟವಾಗುವುದು.
ನಾವು ಶ್ರವಣಶಕ್ತಿಯನ್ನು ಜೀವಮಾನ ಪರ್ಯಂತ ರಕ್ಷಿಸಿಕೊಳ್ಳುವುದು ಹೇಗೆ?
ಶ್ರವಣ ಶಕ್ತಿ ನಷ್ಟಕ್ಕೆ ಕಾರಣವಾಗಬಲ್ಲ ಭಾರೀ ಸದ್ದಿನ ಮೂಲಗಳನ್ನು ಗುರುತಿಸಿ (ಯಂತ್ರಗಳು, ಕೂದಲು ಒಣಗಿಸುವ ಸಾಧನ, ವ್ಯಾಕ್ಯೂಮ್ ಕ್ಲೀನರ್, ಆಟಿಕೆಗಳು ಅಥವಾ ಸಂಗೀತ) ಅವುಗಳಿಂದ ದೂರ ಉಳಿಯಿರಿ.
ಸಾಧ್ಯವಿದ್ದಾಗಲೆಲ್ಲ ಭಾರೀ ಸದ್ದಿನ ಮೂಲಗಳಿಂದ ದೂರ ಇರಿ.
ಭಾರೀ ಸದ್ದಿಗೆ ಒಡ್ಡಿಕೊಳ್ಳುವುದರಿಂದ ದೂರ ಉಳಿಯಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ ಸದ್ದಿನ ತೀವ್ರತೆಯನ್ನು ಕಡಿಮೆ ಮಾಡಿ ಸುರಕ್ಷಿತ ಮಟ್ಟಕ್ಕಿಳಿಸುವ ಶ್ರವಣ ಶಕ್ತಿಯನ್ನು ರಕ್ಷಿಸುವ ಸಲಕರಣೆ (ಇಯರ್ ಪ್ಲಗ್ ಅಥವಾ ಇಯರ್ ಮಫ್ಗಳು) ಗಳನ್ನು ಉಪಯೋಗಿಸಿ.
ನಿಮಗೆ ಶ್ರವಣ ಶಕ್ತಿ ಕಡಿಮೆ ಇದೆ ಎಂದು ಅನ್ನಿಸಿದರೆ ಪರೀಕ್ಷಿಸಿಕೊಳ್ಳಿ.
ತಮ್ಮ ಶ್ರವಣ ಶಕ್ತಿಯನ್ನು ಸ್ವತಃ ರಕ್ಷಿಸಿಕೊಳ್ಳದಷ್ಟು ಸಣ್ಣ ವಯಸ್ಸಿನ ಮಕ್ಕಳ ಕಿವಿಗಳನ್ನು ಹೆತ್ತವರು ರಕ್ಷಿಸಿ.
ಮುಖ್ಯಾಂಶಗಳು
ಸಂವಹನ, ಮಾತುಕತೆ, ಭಾಷಿಕ ಬೆಳವಣಿಗೆ ಮತ್ತು ಕಲಿಯುವಿಕೆಯಲ್ಲಿ ಆಲಿಸುವಿಕೆಯು ಮುಖ್ಯ ಪಾತ್ರವನ್ನು ಹೊಂದಿದೆ. ಸಣ್ಣ ಪ್ರಮಾಣದಲ್ಲಿ ಶ್ರವಣ ಶಕ್ತಿ ನಷ್ಟ ಉಂಟಾದರೂ ಅದು ಮಾತು, ಭಾಷೆಯನ್ನು ಅರ್ಥ ಮಾಡಿಕೊಳ್ಳುವಿಕೆ, ಸಂವಹನ, ತರಗತಿಯಲ್ಲಿ ಕಲಿಕೆ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ಭಾರೀ ಪ್ರಮಾಣದ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.
ಡಾ| ಮೋಹನ್ ಕುಮಾರ್
ಅಸೋಸಿಯೇಟ್ ಪ್ರೊಫೆಸರ್,
ಎಎಸ್ಎಲ್ಪಿ ವಿಭಾಗ,
ಕೆಎಂಸಿ, ಮಣಿಪಾಲ