Advertisement

ಬಾಯಿಯ ಆರೋಗ್ಯಕ್ಕೆ ಇಲ್ಲಿದೆ ಸರಳ ಮಾರ್ಗ

02:25 PM Jun 28, 2021 | ಆದರ್ಶ ಕೊಡಚಾದ್ರಿ |

ಆರೋಗ್ಯಕರವಾದ ಜೀವನ ಪ್ರತಿಯೊಬ್ಬ ವ್ಯಕ್ತಿಯ ಬಹುದೊಡ್ಡ ಗುರಿಯಾಗಿರುತ್ತದೆ. ಈ ಕಾರಣದಿಂದ ಜನರು ತಮ್ಮ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಲು ಸದಾ ಪ್ರಯತ್ನ ನಡೆಸುತ್ತಾರೆ. ಆದರೆ ಹಲವರು ತಮ್ಮ ದೇಹದ ಆರೋಗ್ಯವನ್ನು  ಉತ್ತಮಗೊಳಿಸಿಕೊಳ್ಳಲು ವ್ಯಾಯಾಮ, ಯೋಗದಂತಹ ಹಲವಾರು ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೂ ಕೂಡಾ ದೇಹದ ಕೆಲವು ಭಾಗಗಳ ಆರೋಗ್ಯದ ಕುರಿತಾಗಿ ಅಷ್ಟು ಗಮನವನ್ನು ನೀಡುವುದಿಲ್ಲ. ಈ ಕಾರಣದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಗಮನಹರಿಸದಿರುವ ದೇಹದ ಭಾಗಗಳಲ್ಲಿ ಬಾಯಿಯ ಆರೋಗ್ಯವೂ ಕೂಡಾ ಒಂದು.

Advertisement

ದೇಹದ ಆರೋಗ್ಯದಲ್ಲಿ ಬಾಯಿಯ ಆರೋಗ್ಯ  ಅತ್ಯಂತ ಮುಖ್ಯವಾದದ್ದು. ನಮ್ಮ ಲಾಲಾರಸದ ಹೊರತಾಗಿ ಹಲವಾರು ಸೂಕ್ಷ್ಮಜೀವಿಗಳಿವೆ. ಯಾವಾಗ ಬಾಯಿಯಲ್ಲಿ ಸಂಗ್ರಹವಾದ ಆಹಾರ ಕಣ ಕೊಳೆದು ಈ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಾಗುವುದೋ ಆಗ ದುರ್ವಾಸನೆ ಪ್ರಾರಂಭವಾಗುತ್ತದೆ. ಇಲ್ಲಿಂದ ಸೋಂಕು ನರವ್ಯೂಹದ ಮೂಲಕ ದೇಹದ ಹಲವಾರು ಅಂಗಗಳಿಗೆ ದಾಟಿಕೊಳ್ಳಬಹುದು. ಇದೇ ಕಾರಣಕ್ಕೆ, ಬಾಯಿಯ ಸ್ವಚ್ಛತೆ ಕುರಿತಾಗಿ ಆಯುರ್ವೇದ ಸದಾ ಮಹತ್ವವನ್ನು ನೀಡುತ್ತಾ ಬಂದಿದೆ.

ಮುಂಜಾನೆಯ ಹಲ್ಲುಜ್ಜುವಿಕೆಯಿಂದ, ಊಟದ ಬಳಿಕ ಬಾಯಿ ಮುಕ್ಕಳಿಸುವುದು, ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಮೊದಲಾದ ಕ್ರಮಗಳನ್ನು ನಿತ್ಯವೂ ಅನುಸರಿಸುವುದು ಮುಖ್ಯ. ಬಾಯಿಯಲ್ಲಿ ಕೆಟ್ಟ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಿದರೆ ದುರ್ವಾಸನೆಯ ಜೊತೆಗೆ ಒಸಡುಗಳು ಸಡಿಲವಾಗಿ ಹಲ್ಲುಗಳು ಅಲ್ಲಾಡುವುದು, ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಕೂಳೆ ತುಂಬಿಕೊಳ್ಳುವುದು, ಹಲ್ಲುಗಳು ಕೊಳೆಯುವುದು , ಒಸಡುಗಳು ಬಿರಿದು ರಕ್ತ ಹರಿಯುವುದು, ಹಲ್ಲುಗಳಲ್ಲಿ ಕುಳಿ ಮತ್ತು ಹಲ್ಲುಗಳು ಅತಿಯಾದ ಸೂಕ್ಷ್ಮ ಸಂವೇದನೆಯನ್ನು ಪಡೆದು ತಣ್ಣಗಿನ ಅಥವಾ ಬಿಸಿ ಅಥವಾ ಖಾರದ ಏನನ್ನೂ ಬಾಯಿಗೆ ಹಾಕಿಕೊಳ್ಳದಂತೆ ಆಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಬಾಯಿಯ ಆರೋಗ್ಯ ಕಾಪಾಡದ ವ್ಯಕ್ತಿಗಳಿಗೆ ಈ ತೊಂದರೆಗಳು ಅಪಾರವಾಗಿ ಬಾಧಿಸುತ್ತವೆ.

ಈ ಎಲ್ಲಾ ವಿಧವಾದ ಸಮಸ್ಯೆಯಿಂದ ಪರಿಹಾರವನ್ನು ನಾವು ನಮ್ಮ ಸುತ್ತಮುತ್ತಲಿನ ಹಲವಾರು ನೈಸರ್ಗಿಕ ಅಂಶಗಳಿಂದ ಪಡೆದುಕೊಳ್ಳಬಹುದಾಗಿದೆ.

ನೀರಿನ ಬಳಕೆ

Advertisement

ದೇಹದ ಇತರೆ ಅಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಎಷ್ಟು ಮುಖ್ಯವಾದ ಪಾತ್ರವನ್ನು ವಹಿಸುತ್ತದೆಯೋ ಅದೇ ರೀತಿ ಬಾಯಿಯ ಆರೋಗ್ಯಕ್ಕೂ ಇದು ತುಂಬಾ ಮುಖ್ಯ. ಪ್ರತಿನಿತ್ಯ ಬೆಳಿಗ್ಗೆ ಹಾಗೂ ರಾತ್ರಿಯ ವೇಳೆ ಹಲ್ಲುಗಳನ್ನು ಉಜ್ಜುವುದರ ಜೊತೆ ಜೊತೆಗೆ ಆಗಾಗ ಶುದ್ಧವಾದ ನೀರಿನಲ್ಲಿ ಬಾಯನ್ನು ಮುಕ್ಕಳಿಸುವುದರಿಂದ ಹಲ್ಲುಗಳು ಹುಳುಕಾಗುವುದನ್ನು ತಡೆಯುವ ಜೊತೆ ಜೊತೆಗೆ ಬಾಯಿಯಿಂದ ದುರ್ವಾಸನೆ ಬರುವುದನ್ನು ತಡೆಯಬಹುದಾಗಿದೆ. ಯಾವುದೇ ಆಹಾರ ಪದಾರ್ಥವನ್ನು ತಿಂದ ಬಳಿಕ ನೀರಿನಿಂದ ಬಾಯನ್ನು ತೊಳೆಯುವುದರಿಂದಾಗಿ ತಿಂದ ಆಹಾರ ಪದಾರ್ಥಗಳು ಬಾಯಿಯಲ್ಲಿಯೇ ಉಳಿಯುವುದನ್ನು ತಡೆಯಬಹುದಾಗಿದೆ. ಅಲ್ಲದೆ ದಿನದಲ್ಲಿ ಎರಡರಿಂದ ಮೂರು ಬಾರಿ ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ.

ಲೋಳೆರಸ ಬಳಕೆ

ಸಾಮಾನ್ಯವಾಗಿ ಲೋಳೆ ರಸದಲ್ಲಿ ದೇಹದ ಹಲವು ವಿಧವಾದ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇದ್ದು, ಒಂದು ವೇಳೆ ಹಲ್ಲುಗಳಲ್ಲಿ ಹುಳುಕು ಕಾಣಿಸಿಕೊಳ್ಳತೊಡಗಿದರೆ ಆಲೋವೆರಾ ಅಥವಾ ಲೋಳೆಸರ ಇದಕ್ಕೆ ಅತ್ಯುತ್ತಮ ಪರಿಹಾರವಾಗಿದೆ. ಒಸಡುಗಳ ಸಂಧುಗಳಲ್ಲಿರುವ ಕೂಳೆ, ದಂತಕುಳಿ ಮೊದಲಾದವನ್ನು ತಡೆಯಲೂ ಇವು ಸೂಕ್ತವಾಗಿವೆ. ಇದಕ್ಕಾಗಿ, ತಾಜಾ ಲೋಳೆಸರದ ಕೋಡೊಂದನ್ನು ಮುರಿದು ಒಳಗಿನ ತಿರುಳನ್ನು ಸಂಗ್ರಹಿಸಿ ಸಮಪ್ರಮಾಣದಲ್ಲಿ ಅಡುಗೆ ಸೋಡಾ ಮತ್ತು ಚಿಟಿಕೆಯಷ್ಟು ಅರಿಶಿನಯ ಪುಡಿಯನ್ನು ಬೆರೆಸಿ ನಯವಾದ ಲೇಪ ತಯಾರಿಸಿ.ಈ ಲೇಪವನ್ನು ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಆವರಿಸುವಂತೆ ದಪ್ಪನಾಗಿ ಹಚ್ಚಿ. ಕೊಂಚ ಹೊತ್ತು ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಕೊಳೆಗಳು ಬುಡಸಹಿತ ಇಲ್ಲವಾಗುತ್ತವೆ ಹಾಗೂ ಹಲ್ಲುಗಳು ಮತ್ತು ಒಸಡುಗಳು ಇನ್ನಷ್ಟು ದೃಢಗೊಳ್ಳುತ್ತವೆ.

ಲವಂಗ

ಲವಂಗದಲ್ಲಿ ಹಲವಾರು ಆರೋಗ್ಯಕರ ಅಂಶಗಳಿದ್ದು, ಇದು ಬಾಯಿಯ ಆರೋಗ್ಯಕ್ಕೂ ಅತ್ಯಂತ ಮುಖ್ಯವಾದದ್ದು. ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ನೋವಿರುವ ಜಾಗಕ್ಕೆ ಲವಂಗವನ್ನು ಇಟ್ಟುಕೊಳ್ಳುವುದರಿಂದಾಗಿ ಸಮಸ್ಯೆಯಿಂದ ಬಹುಬೇಗ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅಲ್ಲದೆ ಬಾಯಿಯಲ್ಲಿ ದುರ್ವಾಸನೆ ಇದ್ದರೆ ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಲವಂಗವನ್ನು ಅಗಿದು ಮಲಗುವುದರಿಂದಾಗಿ ಬಾಯಿಯಿಂದ ಬರುವ ವಾಸನೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next