ತುಮಕೂರು: ಆಯುಷ್ಮಾನ್ ಭಾರತ್ ಆರೋಗ್ಯ, ಕರ್ನಾಟಕ ಕಾರ್ಡ್ ಇಲ್ಲದವರು ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಇದ್ದರೆ ಯೋಜನೆಯಡಿ ಆರೋಗ್ಯ ಸೇವೆ ಪಡೆಯ ಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ
ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಸಭೆ ಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 131 ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸ ಲಾಗುತ್ತಿದ್ದು, ಇಲ್ಲಿಯವರೆಗೆ 2.72 ಲಕ್ಷ ಕಾರ್ಡ್ ವಿತರಿಸಲಾಗಿದೆ.
ಯೋಜನೆ ಸೇವೆ ಪಡೆಯಲು ಅನುಕೂಲ ವಾಗುವಂತೆ ಅರ್ಹರಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿ ದರು. ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಖಾಸಗಿ ಆಸ್ಪತ್ರೆಗಳಲ್ಲೂ ಕೌಂಟರ್ ತೆರೆದು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸೇವೆ ಒದಗಿಸ ಬೇಕು ಎಂದು ಸೂಚಿಸಿದರಲ್ಲದೇ, ಈಗಾಗಲೇ ಜಿಲ್ಲೆಯಲ್ಲಿ 15 ಖಾಸಗಿ ಆಸ್ಪತ್ರೆಗಳು ಸೇವೆ ಒದಗಿಸುತ್ತಿವೆ. ಯೋಜನೆಯಡಿ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ರೆಫರ್ ಮಾಡಿರುವ ಕುರಿತು ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು ಎಂದು ತಿಳಿಸಿದರು. ವಿವಿಧ
ಸಾಂಕ್ರಾಮಿಕವಾಗಿ ಹರಡುವ ಮಲೇರಿಯ, ಚಿಕನ್ ಗುನ್ಯಾ, ಎಚ್1ಎನ್1, ಕ್ಷಯರೋಗ, ಕುಷ್ಠ ರೋಗ ದಂತಹ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಿ ವಿಶೇಷ ನಿಗಾವಹಿಸಬೇಕು ಎಂದು ತಹಶೀಲ್ದಾರ್‌ಗೆ ಡೀಸಿ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ, ಡಾ. ಪುರುಷೋತ್ತಮ್, ಡಾ. ಚೇತನ್, ಆರ್. ಸಿ.ಎಚ್ ಅಧಿಕಾರಿ ಡಾ. ಕೇಶವರಾಜ್ ಸೇರಿ ವಿವಿಧ ತಾಲೂಕಿನ ಆರೋಗ್ಯ ಅಧಿಕಾರಿಗಳು ಮತ್ತಿತರರಿದ್ದರು.