Advertisement

ಉಚಿತ ಆರೋಗ್ಯ ಸೇವೆ ಸ್ಥಗಿತ: ಇಂದು ಸಭೆ

03:45 AM Jan 16, 2017 | Team Udayavani |

ಬೆಂಗಳೂರು: ಬಾಕಿ ಹಣ ಉಳಿಕೆ ಹಿನ್ನೆಲೆಯಲ್ಲಿ ಬಿಪಿಎಲ್‌ ಕುಟುಂಬಗಳಿಗೆ ಸರ್ಕಾರಿ ವಿಮಾ ಯೋಜನೆಗಳ ಮೂಲಕ ನೀಡುತ್ತಿರುವ ಉಚಿತ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಮುಂದಾಗಿರುವ ಖಾಸಗಿ ಆಸ್ಪತ್ರೆಗಳು, ಈ ಸಂಬಂಧ ಆರೋಗ್ಯ ಸಚಿವರ ಜತೆ ಮಾತುಕತೆ ನಡೆಸಲು ಮುಂದಾಗಿವೆ.

Advertisement

ರಾಜ್ಯ ಸರ್ಕಾರವು ಸುಮಾರು 100 ಕೋಟಿ ರೂ.ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ಉಚಿತ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮುಂದಾಗಿತ್ತು. ಆದರೆ, ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಜತೆ ಸೋಮವಾರ ಸಭೆ ನಿಗದಿಯಾಗಿರುವ ಕಾರಣ ಸೇವೆ ಸ್ಥಗಿತಗೊಳಿಸುವ ತೀರ್ಮಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ವಿಕಾಸಸೌಧದಲ್ಲಿ ಸಚಿವ ರಮೇಶಕುಮಾರ್‌ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಬಳಿಕ ಉಚಿತ ಆರೋಗ್ಯ ಸೇವೆಯನ್ನು ಮುಂದುವರಿಸಬೇಕೇ ಅಥವಾ ಸ್ಥಗಿತಗೊಳಿಸಬೇಕೇ ಎಂಬುದರ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಒಕ್ಕೂಟದ ಸದಸ್ಯ ಅಲೆಕ್ಸ್‌ ಥಾಮಸ್‌ ತಿಳಿಸಿದ್ದಾರೆ.

“ಉದಯವಾಣಿ’ ಜತೆ ಮಾತನಾಡಿದ ಅವರು, ಉಚಿತ ಆರೋಗ್ಯ ಸೇವೆ ಸ್ಥಗಿತಗೊಳಿಸುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಖಾಸಗಿ ಆಸ್ಪತ್ರೆಗಳ ಒಕ್ಕೂಟಕ್ಕೆ ಸಚಿವರು ಮಾತುಕತೆ ನಡೆಸಲು ಆಹ್ವಾನ ನೀಡಿದ್ದರು. ಆದರೆ, ಸದಸ್ಯರು ಭೇಟಿಗೆ ತೆರಳಿದ ವೇಳೆ ಸಚಿವರು ಲಭ್ಯರಿರಲಿಲ್ಲ. ಹೀಗಾಗಿ ಸಭೆಯನ್ನು ಸೋಮವಾರ ನಿಗದಿಗೊಳಿಸಲಾಗಿದೆ. ಸಭೆಯಲ್ಲಿ ಸಚಿವರು ನೀಡುವ ಭರವಸೆ ಬಳಿಕ ಮುಂದಿನ ನಡೆ ಏನೆಂಬುದನ್ನು ತಿಳಿಸಲಾಗುವುದು ಎಂದರು.

ಬಿಪಿಎಲ್‌ ಕಾರ್ಡ್‌ ಹೊಂದಿರುವ ಬಡಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆ, ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ ಆರೋಗ್ಯ ಭಾಗ್ಯ ಮತ್ತು ಜ್ಯೋತಿ ಸಂಜೀವಿನಿ ಯೋಜನೆಗಳಡಿ ಉಚಿತ ಸೇವೆ ಒದಗಿಸಲಾಗುತ್ತಿದ್ದು, ಕಳೆದ ಆರು ತಿಂಗಳಿಂದ ಹಣ ಬಿಡುಗಡೆಯಾಗಿಲ್ಲ ಎಂದು ಒಕ್ಕೂಟ ಆರೋಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next