Advertisement

ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

12:54 PM Feb 21, 2021 | Team Udayavani |

ಭಾರತದಲ್ಲಿ ದಂತವೈದ್ಯಕೀಯ ಆರೋಗ್ಯವನ್ನು ಬಹಳ ನಿರ್ಲಕ್ಷ್ಯದಿಂದ ಕಾಣಲಾಗುತ್ತದೆ. ದಂತ ವೈದ್ಯರ ಬಳಿಗೆ ನಿಯಮಿತ ತಪಾಸಣೆಗೆ ತೆರಳುವುದು ಎಂದರೆ, “ಅಯ್ಯೋ ಯಾರಪ್ಪಾ ಅಲ್ಲಿಗೆ ಹೋಗುವುದು’ ಎಂಬ ಭಾವನೆ! ನೋವು ಅಧಿಕವಾಗಿದ್ದರೂ ಕೂಡ ವೈದ್ಯರ ಬಳಿಗೆ ಹೋಗುವುದನ್ನು ಬಿಟ್ಟು ಯಾವುದಾದರೊಂದು ನೋವು ನಿವಾರಕ ಮಾತ್ರೆ ನುಂಗಿ ಸುಮ್ಮನಿದ್ದು ಬಿಡುವ ಪರಿಪಾಠ ನಮ್ಮದು. ಇದಕ್ಕೆ ಕಾರಣಗಳು ತುಂಬ ಸರಳ: ದಂತವೈದ್ಯಕೀಯ ಚಿಕಿತ್ಸೆ, ತಪಾಸಣೆ ಎಂದರೆ ನೋವು, ಆತಂಕ, ಭಯ ಮತ್ತು ವೆಚ್ಚ ತಗಲುತ್ತದೆ ಎಂಬ ತಪ್ಪು ಕಲ್ಪನೆಗಳು.

Advertisement

ಆದರೆ ಇವೆಲ್ಲವುಗಳಿಗೂ ಮೂಲ ಕಾರಣ ಏನು? ಕೇವಲ ನಿರ್ಲಕ್ಷ್ಯ! ಇಲ್ಲೊಂದು ಸರಳ ಪ್ರಶ್ನೆಯಿದೆ: ನಿಯಮಿತ ರಕ್ತದೊತ್ತಡ ತಪಾಸಣೆಗಾಗಿ ವೈದ್ಯರ ಬಳಿಗೆ ಹೋಗುವುದಕ್ಕೆ ವ್ಯಕ್ತಿಯೊಬ್ಬರು ಹೆದರುತ್ತಾರೆ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ ಎಂದಿಟ್ಟುಕೊಳ್ಳಿ. ಪರಿಣಾಮವಾಗಿ ಮುಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಮುಂದೆ ಒಳಗಾಗಬೇಕಾದ ನೋವು ಮತ್ತು ಹಣಕಾಸಿನ ಹೊರಗೆ ಇದು ಒಂದು ಸಣ್ಣ ಉದಾಹರಣೆ. ದಂತ ವೈದ್ಯಕೀಯ ಚಿಕಿತ್ಸೆಯ ವಿಚಾರದಲ್ಲಿಯೂ ಈ ಮಾತು ನಿಜ. ನಿಯಮಿತವಾದ ದಂತ ವೈದ್ಯಕೀಯ ತಪಾಸಣೆಯನ್ನು ನಿರ್ಲಕ್ಷಿಸುವುದರಿಂದ ಇರಬಹುದಾದ ಅನಾರೋಗ್ಯಗಳು ಉಲ್ಬಣಗೊಂಡು ಗಂಭೀರ ದಂತ ವೈದ್ಯಕೀಯ, ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ತುತ್ತಾಗಬೇಕಾದೀತು. ಪ್ರತೀ ಮೂರು ತಿಂಗಳುಗಳಿಗೆ ಒಮ್ಮೆ ಸಮೀಪದ ದಂತ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಂಡರೆ ನಿಮ್ಮ ಹಲ್ಲುಗಳ ಆರೋಗ್ಯ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯ ಮತ್ತು ಹಣಕಾಸಿನ ಸ್ಥಿತಿಗತಿ ಬಾಧೆಗೀಡಾಗದೆ ಸುಸ್ಥಿತಿಯಲ್ಲಿರುತ್ತವೆ.ಇದರಿಂದ ನೀವು ಹಲವು ತೊಂದರೆಗಳಿಂದ ಪಾರಾಗಬಹುದು.

ಒಂದು ಉದಾಹರಣೆ ನೋಡೋಣ. ನೀವು ಬಾಯಿಯ ನೈರ್ಮಲ್ಯವನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ವಸಡುಗಳ ಉದ್ದಕ್ಕೆ ಕೊಳೆಯ ಪದರ ಬೆಳೆಯುತ್ತದೆ. ವಸಡುಗಳು ಮತ್ತು ಹಲ್ಲುಗಳ ನಡುವೆ ಬ್ಯಾಕ್ಟೀರಿಯಾ ಹೆಚ್ಚುತ್ತವೆ. ನಿಯಮಿತವಾದ ಹಲ್ಲುಶುಚಿಗಾಗಿ ವೈದ್ಯರಲ್ಲಿಗೆ ಹೋಗುವುದಿಲ್ಲ. ಇದರಿಂದ ಜಿಂಜಿವೈಟಿಸ್‌ ಉಂಟಾಗುತ್ತದೆ, ಕ್ರಮೇಣ ಪೆರಿಯೋಡಾಂಟಿಕ್ಸ್‌ ತಲೆದೋರುತ್ತದೆ. ಬಾಯಿಯೊಳಗೆ ಗಾಯ, ಬಿರುಕು ಅಥವಾ ಹಲ್ಲುಜ್ಜುವಾಗ ಉಂಟಾಗುವ ಗಾಯದಿಂದಾಗಿ ಅವಕಾಶ ದೊರೆತರೆ ಬಾಯಿಯಲ್ಲಿ ಬೆಳೆದಿರುವ ಬ್ಯಾಕ್ಟೀರಿಯಾಗಳು ರಕ್ತ ಪರಿಚಲನೆ ವ್ಯವಸ್ಥೆಯೊಳಕ್ಕೂ ಹೊಕ್ಕು ಬಿಡುವ ಸಾಧ್ಯತೆಯಿದೆ.

ಡಾ| ಆನಂದದೀಪ್‌ ಶುಕ್ಲಾ
ಅಸೊಸಿಯೇಟ್‌ ಪ್ರೊಫೆಸರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ವಿಭಾಗ
ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next