Advertisement

ಆರೋಗ್ಯ ಕಾರ್ಯಕ್ರಮ ಬಡವರಿಗೆ ತಲುಪಲಿ

12:26 PM Jan 03, 2019 | Team Udayavani |

ದಾವಣಗೆರೆ: ಆರೋಗ್ಯ ಕಾರ್ಯಕ್ರಮಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲಾ ಬಡಜನರಿಗೆ ತಲುಪಬೇಕು ಎಂದು ಮೇಯರ್‌ ಶೋಭಾ ಪಲ್ಲಾಗಟ್ಟೆ ತಿಳಿಸಿದ್ದಾರೆ.

Advertisement

ಬುಧವಾರ, ಪಿ.ಜೆ. ಬಡಾವಣೆಯ ನಗರ ಕುಟುಂಬ ಕಲ್ಯಾಣ ಕೇಂದ್ರದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಆರೋಗ್ಯಕ್ಕಾಗಿ ಇಲಾಖೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ತಲುಪುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರು ಆಸಕ್ತಿಯಿಂದ ಕೆಲಸ ಮಾಡಬೇಕು ಎಂದರು.

ಮಾಜಿ ಮೇಯರ್‌ ಅಶ್ವಿ‌ನಿ ಪ್ರಶಾಂತ್‌ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರು ಜನತೆಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸಾಂಕ್ರಾಮಿಕ ರೋಗಗಳಿಂದ ತಮ್ಮ ರಕ್ಷಣೆಯ ಬಗ್ಗೆಯೂ ಸಹ ಚಿಂತಿಸಬೇಕು ಎಂದು ಸಲಹೆ ನೀಡಿದರು. ಕ್ಷಯ ಮುಂತಾದ ದೀರ್ಘಾವಧಿಯ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅಂತಹ ಕಾಯಿಲೆಗಳನ್ನು ಸಕಾಲದಲ್ಲಿ ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸರ್ವರು ಸಹಕರಿಸಬೇಕು ಎಂದು
ತಿಳಿಸಿದರು.

ಪ್ರಾಸ್ತಾವಿಕ ಮಾತುಗಳಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ, ಡಾ| ಜಿ.ಡಿ. ರಾಘವನ್‌, 2025ರ ಒಳಗೆ ಕ್ಷಯರೋಗ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆಗೆ ಗುರಿ ನಿಗದಿಪಡಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ರಾಜ್ಯದಾದ್ಯಂತ ಅಪಾಯದ ಅಂಚಿನಲ್ಲಿರುವ ಗುಂಪುಗಳನ್ನು ಗುರುತಿಸಲಾಗಿದೆ. ಶಂಕಿತ ಕ್ಷಯರೋಗಿಗಳನ್ನು ಸಮೀಕ್ಷೆ ಮುಖಾಂತರ ಪತ್ತೆಮಾಡಿ ಚಿಕಿತ್ಸೆಗೆ ಒಳಪಡಿಸಿ ಗುಣಮುಖರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ 567 ಗುಂಪುಗಳಿಂದ ಒಟ್ಟು ಜನಸಂಖ್ಯೆಯ ಶೇ. 15 ರಷ್ಟು ಅಂದರೆ 3,40,455 ಜನರು ಕ್ಷಯರೋಗದ ಅಪಾಯದ ಅಂಚಿನಲ್ಲಿ ಇರುವವರು ಎಂದು ಗುರುತಿಸಲಾಗಿದೆ. ಆ ಎಲ್ಲರನ್ನೂ ಸಮೀಕ್ಷೆಗೆ ಒಳಪಡಿಸಲಾಗುವುದು. ಜಿಲ್ಲೆಯಾದ್ಯಂತ ನಗರ ಪ್ರದೇಶಗಳಲ್ಲಿ ಇರುವ ಕೊಳಚೆ ಪ್ರದೇಶಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ಉಪಕಾರಾಗೃಹ, ನಿರಾಶ್ರಿತ ಶಿಬಿರಗಳು, ವಸತಿ ಇಲ್ಲದವರು, ಬೀದಿ ಮಕ್ಕಳು ಮತ್ತು ಅನಾಥಾಶ್ರಮಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಲುಪಲಾರದ ಕಷ್ಟಕರ ಪ್ರದೇಶಗಳು, ಗಣಿ ಪ್ರದೇಶಗಳು, ಕಲ್ಲು ಕ್ವಾರಿಗಳು, ಮಿಲ್‌ ಕೆಲಸಗಾರರು, ಅಸಂಘಟಿತ ಕಾರ್ಮಿಕರು, ಗುಡ್ಡಗಾಡು ಪ್ರದೇಶಗಳ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

Advertisement

ಸಮೀಕ್ಷೆಗೆ ಒಳಪಡಿಸುವ ಶೇ.5 ರಷ್ಟು ಅಂದರೆ 15,319 ಜನರನ್ನು ಶಂಕಿತ ಕ್ಷಯರೋಗಿಗಳು ಎಂದು ಪರಿಗಣಿಸಿ ಕಫ ಪರೀಕ್ಷೆಗೆ ಒಳ ಪಡಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪಲ್ಸ್‌ ಪೋಲಿಯೋ ಮಾದರಿಯಲ್ಲಿ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 579 ತಂಡಗಳು ಜ. 12ವರೆಗೆ ಕಾರ್ಯ ನಿರ್ವಹಿಸಲಿವೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
 
ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಜೆ.ಎಂ. ಸರೋಜಾಬಾಯಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಔಷಧ ನಿಯಂತ್ರಕ ಪರಶುರಾಮ್‌, ತಾಲೂಕು ಆರೋಗ್ಯಾಧಿ ಕಾರಿ ಡಾ| ಮಂಜುನಾಥ್‌ ಪಾಟೀಲ್‌, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವೆಂಕಟೇಶ್‌, ಔಷಧ ಪರಿವೀಕ್ಷಕಿ ಎಂ.ಎಸ್‌. ಗೀತಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಇದೇ ಸಂದರ್ಭದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಅಂಗವಾಗಿ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next