Advertisement

ಅನ್ನನಾಳ (ಈಸೋಫೇಗಸ್‌)ದ ಆರೋಗ್ಯ ಸಮಸ್ಯೆಗಳು

09:56 AM Mar 28, 2020 | mahesh |

ಬಾಯಿಯಿಂದ ಹೊಟ್ಟೆಗೆ ಆಹಾರವನ್ನು ಒಯ್ಯುವ ಕಾರ್ಯವನ್ನು ನಡೆಸುವ ಸುಮಾರು 25 ಸೆಂ.ಮೀ. ಉದ್ದದ ಫೈಬ್ರೊ ಮಸ್ಕಾಲಾರ್‌ ಕೊಳವೆ ಅನ್ನನಾಳ. ಬಹುತೇಕವಾಗಿ ಅನ್ನನಾಳದ ಯಾಂತ್ರಿಕ ಅಥವಾ ಚಲನಶೀಲ ತೊಂದರೆಯಿಂದಾಗಿ ಉಂಟಾಗುವ ಈ ಅಂತರ್ಗತ ಸಮಸ್ಯೆಗಳ ಪ್ರಾಥಮಿಕ ಲಕ್ಷಣಗಳೆಂದರೆ ಎದೆಯುರಿ, ನುಂಗುವುದಕ್ಕೆ ಕಷ್ಟವಾಗುವುದು (ಡಿಸ್‌ಫೇಜಿಯಾ), ನುಂಗುವಾಗ ನೋವಾಗುವುದು (ಒಡಿನೊಫೇಜಿಯಾ) ಮತ್ತು ತಿಂದ ಆಹಾರ ಬಾಯಿಗೆ ಹಿಂದಕ್ಕೆ ಬರುವುದು.

Advertisement

ಎದೆಯುರಿ ಅಥವಾ ಪೈರೋಸಿಸ್‌
 ಆಹಾರ ಸೇವಿಸಿದ 30 ನಿಮಿಷಗಳ ಒಳಗಿನಿಂದ ತೊಡಗಿ 2 ತಾಸುಗಳ ತನಕ ಮತ್ತು ಮಲಗಿದಾಗ ಅಥವಾ ಬಾಗಿದಾಗ ಇನ್ನಷ್ಟು ತೀವ್ರಗೊಳ್ಳುವ, ಹೊಟ್ಟೆ- ಎದೆಭಾಗದಲ್ಲಿ ಆಂತರಿಕ ಉರಿಯ ಅನುಭವವೇ ಎದೆಯುರಿ.

 ಭಾರೀ ಪ್ರಮಾಣದಲ್ಲಿ ಆಹಾರ ಸೇವಿಸುವುದು, ಅದೂ ಕೊಬ್ಬು, ಚಾಕಲೇಟ್‌, ಕಾಫಿ ಅಥವಾ ಮದ್ಯ ಇತ್ಯಾದಿಗಳ ಸೇವನೆಯು ಎದೆಯುರಿ ಉಂಟಾಗುವುದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ.

 ಹಾಲು ಕುಡಿಯುವುದು ಅಥವಾ ಆಂಟಾಸಿಡ್‌ ತೆಗೆದುಕೊಳ್ಳುವುದರಿಂದ ಇದು ಉಪಶಮನಗೊಳ್ಳುತ್ತದೆ.
 ಪದೇ ಪದೇ ಎದೆಯುರಿ ಉಂಟಾಗುವುದು ಅದರಲ್ಲೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವುದು ಗೆರ್ಡ್‌ ಕಾಯಿಲೆಗಾಗಿ ತಪಾಸಿಸಬೇಕಾದ ಅನಿವಾರ್ಯವನ್ನು ಸೂಚಿಸುತ್ತದೆ.

ನುಂಗುವುದಕ್ಕೆ ಕಷ್ಟವಾಗುವುದು (ಡಿಸ್‌ಫೇಜಿಯಾ)
ಆಹಾರವು ಬಾಯಿಯಿಂದ ಹೊಟ್ಟೆಗೆ ಸಾಗಲು ತೆಗೆದುಕೊಳ್ಳುವ ಸಹಜ ಸಮಯಕ್ಕಿಂತ ಹೆಚ್ಚಿಗೆ ಬೇಕಾಗುವ ಅನುಭವವಿದು. ಆಹಾರವು “ಅಂಟಿಕೊಂಡ’ ಅನುಭವ ಆಗುವುದಾಗಿ ಸಾಮಾನ್ಯವಾಗಿ ರೋಗಿಗಳು ಹೇಳಿಕೊಳ್ಳುತ್ತಾರೆ.

Advertisement

ಆಹಾರವು ಹೊಟ್ಟೆಯಿಂದ ಹಿಂದಕ್ಕೆ ಬರುವುದು
ಬಾಯಿಯಲ್ಲಿ ಆಮ್ಲ ಅಥವಾ ಕಹಿ ಅನುಭವವು ಅಪ್ರಯತ್ನಪೂರ್ವಕವಾಗಿ ಉಂಟಾಗುವುದು. ರಾತ್ರಿಯ ವೇಳೆ ಇದರ ಅನುಭವ ಹೆಚ್ಚಿರುತ್ತದೆ ಹಾಗೂ ಕೆಮ್ಮು ಮತ್ತು ಗಂಟಲು ಕಟ್ಟಿದ ಅನುಭವ ಉಂಟಾಗಿ ರೋಗಿ ಎಚ್ಚರಗೊಳ್ಳಬೇಕಾಗುತ್ತದೆ.

ಅನ್ನನಾಳದ ಅನಾರೋಗ್ಯಗಳಿಗೆ ಚಿಕಿತ್ಸೆಯು ರೋಗಪತ್ತೆಯನ್ನು ಆಧರಿಸಿರುತ್ತದೆ. ಇದನ್ನು ಸ್ಥೂಲವಾಗಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾತ್ಮಕ ಎಂದು ವರ್ಗೀಕರಿಸಬಹುದಾಗಿದೆ. ಅನ್ನನಾಳದ ಅನೇಕ ಸಮಸ್ಯೆಗಳನ್ನು ವೈದ್ಯಕೀಯವಾಗಿಯೇ ಉಪಚರಿಸಬಹುದಾಗಿದ್ದು, ರೋಗ ಲಕ್ಷಣಗಳು ತೀವ್ರವಾಗಿದ್ದಾಗ ಶಸ್ತ್ರಚಿಕಿತ್ಸೆಯು ಅಗತ್ಯವಾಗಿರುತ್ತದೆ.

ಜೀವನ ಶೈಲಿ ಬದಲಾವಣೆ ಹಾಗೂ ಪ್ರೊಟಾನ್‌ ಪಂಪ್‌ ಇನ್‌ಹಿಬಿಟರ್‌ಗಳನ್ನು ನೀಡುವುದು ವೈದ್ಯಕೀಯ ಚಿಕಿತ್ಸೆಯಲ್ಲಿ ಒಳಗೊಂಡಿರುತ್ತದೆ. ಅನ್ನನಾಳವನ್ನು ಹಿಗ್ಗಿಸುವುದು ಅಥವಾ ಶಸ್ತ್ರಕ್ರಿಯೆ ನಡೆಸುವುದು, ರಿಅನಾಸ್ಟಮೋಸಿಸ್‌ ಶಸ್ತ್ರಚಿಕಿತ್ಸೆಗಳಲ್ಲಿ ಸೇರಿರುತ್ತದೆ.
ಅನ್ನನಾಳದ ಸಮಸ್ಯೆಗಳಿಂದ ಹಾನಿ ಉಂಟಾಗುವುದನ್ನು ತಡೆಯಲು ಮತ್ತು ರೋಗ ಪ್ರಗತಿ ಹೊಂದಿ ಸಂಕೀರ್ಣ ಸ್ಥಿತಿಗಳು ಉಂಟಾಗುವುದನ್ನು ತಡೆಯುವುದಕ್ಕೆ ಕ್ಷಿಪ್ರ ರೋಗ ಪತ್ತೆ ಅತ್ಯಂತ ಮುಖ್ಯವಾಗಿರುತ್ತದೆ.

ಅನ್ನನಾಳದಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆಗಳು
 ಯಾಂತ್ರಿಕ ಚಲನೆ ಕಡಿಮೆಯಾಗುವುದು ಅಥವಾ ಸ್ಥಗಿತಗೊಳ್ಳುವುದು – ಅಕಲಾಸಿಯಾ
 ಗ್ಯಾಸ್ಟ್ರೊ – ಈಸೊಫೇಜಿಯಲ್‌ ರಿಫ್ಲಕ್ಸ್‌ ಡಿಸೀಸ್‌ (ಗೆರ್ಡ್‌)
 ಬಾರೆಟ್ಸ್‌ ಈಸೊಫೇಗಸ್‌
 ಗಡ್ಡೆಗಳು

ಅನ್ನನಾಳದ ಸಮಸ್ಯೆಗಳನ್ನು ಪತ್ತೆ ಮಾಡಲು ಕೈಗೊಳ್ಳುವ ಪರೀಕ್ಷೆಗಳಲ್ಲಿ ಇವು ಒಳಗೊಳ್ಳುತ್ತವೆ
 ಈಸೊಫೇಜೊಸ್ಕೊಪಿ
 ರೇಡಿಯೊಗ್ರಾಫಿಕ್‌ ಬೇರಿಯಂ ಸ್ಟಡೀಸ್‌
 ಈಸೊಫೇಜಿಯಲ್‌ ಮಾನೊಮೆಟ್ರಿ
 ಆ್ಯಂಬ್ಯುಲೇಟರಿ 24 ತಾಸುಗಳ ಈಸೊಫೇಜಿಯಲ್‌ ಪಿಎಚ್‌ ಮಾನಿಟರಿಂಗ್‌

ಬಹುತೇಕ ಪ್ರಕರಣಗಳಲ್ಲಿ ರೋಗಿಯ ರೋಗೇತಿಹಾಸವೇ ಶೇ.80ರಷ್ಟು ರೋಗಪತ್ತೆಯನ್ನು ಮಾಡಿಕೊಡುತ್ತದೆ. ಬಹಳ ಸಾಮಾನ್ಯವಾಗಿ ಎದುರಾಗುವ ಪ್ರಕರಣಗಳು ಗ್ಯಾಸ್ಟ್ರೊ- ಈಸೊಫೇಜಿಯಲ್‌ ರಿಫ್ಲಕ್ಸ್‌ ಡಿಸೀಸ್‌ (ಗೆರ್ಡ್‌) ಆಗಿರುತ್ತದೆ. ಗೆರ್ಡ್‌ನಲ್ಲಿ ಅನ್ನನಾಳದ ಕೊನೆಯ ಸ್ನಾಯು ಸರಿಯಾಗಿ ಮುಚ್ಚಿಕೊಳ್ಳುವುದಿಲ್ಲ. ಇದರಿಂದಾಗಿ ಹೊಟ್ಟೆಯಲ್ಲಿ ತುಂಬಿರುವುದು ಅನ್ನನಾಳಕ್ಕೆ ಮರಳುತ್ತದೆ ಮತ್ತು ಸುಟ್ಟ ಅನುಭವವಾಗುತ್ತದೆ. ಕಾಲಾಂತರದಲ್ಲಿ ಗೆರ್ಡ್‌ ಸಮಸ್ಯೆಯು ಅನ್ನನಾಳಕ್ಕೆ ಹಾನಿಯನ್ನು ಉಂಟು ಮಾಡಬಹುದು ಮತ್ತು ಕ್ಯಾನ್ಸರ್‌ಪೂರ್ವ ಸ್ಥಿತಿಯೂ ಉಂಟಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next