ಬೆಂಗಳೂರು: ಲಲಿತಕಲಾ ಅಕಾಡೆಮಿ ಸಂಕಷ್ಟದಲ್ಲಿರುವ ಹಿರಿಯ ಕಲಾವಿದರ ನೆರವಿಗೆ ಮುಂದಾಗಿದ್ದು, ಆರೋಗ್ಯ ವೆಚ್ಚ ಭರಿಸಲು ಯೋಜನೆ ರೂಪಿಸಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ಕಲಾವಿದರು ತಿಂಗಳಿಗೆ ಸಾವಿರಾರು ರೂ. ಆರೋಗ್ಯಕ್ಕಾಗಿ ವೆಚ್ಚ ಮಾಡುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಯೋಜನೆಯ ಪ್ರಸ್ತಾವನೆಯನ್ನು ಕೂಡ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ನೀಡಲಾಗಿದೆ. ಈ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆ ಬಂದ ನಂತರ ಮುಂದುವರಿಯುವುದಾಗಿ ಅಕಾಡೆಮಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾವಿರ ರೂ.ಆರೋಗ್ಯ ವೆಚ್ಚ?: ಕಲಾವಿದರಿಗೆ ಈ ಯೋಜನೆಯ ಪ್ರಯೋಜನ ಸಿಗಬೇಕು ಎಂಬ ಕಾರಣಕ್ಕಾಗಿಯೇ ಲಲಿತಕ ಕಲಾ ಅಕಾಡೆಮಿಯಲ್ಲಿ ಈ ಹಿಂದೆ ಕೆಲಸ ಮಾಡಿರುವ ಅಕಾಡೆಮಿ
ಸದಸ್ಯರನ್ನು ಕೂಡ ಸಂಪರ್ಕ ಮಾಡಲಾಗಿದೆ. ಜಿಲ್ಲಾವಾರು ಹಿರಿಯ ಕಲಾವಿದರು ಇದ್ದರೆ, ಅಂತಹ ಕಲಾವಿದರ ವಿಳಾಸ ನೀಡುವಂತೆ ಅಕಾಡೆಮಿ ಈಗಾಗಲೇ ಮನವಿ ಮಾಡಲಾಗಿದೆ.
ಶೀಘ್ರ ಹಿರಿಯ ಕಲಾವಿದರ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಬಸವರಾಜ ಹೂಗಾರ್ ತಿಳಿಸಿದ್ದಾರೆ.
ಸರ್ಕಾರ ಈಗಾಗಲೇ ಕಲಾವಿದರಿಗೆ 2 ಸಾವಿರ ರೂ.ನೀಡಲು ಮುಂದಾಗಿದೆ. ಇದರ ಜತಗೆ ಸಂಕಷ್ಟದಲ್ಲಿರುವವರಿಗೆ ಆಹಾರದ ಕಿಟ್ ಕೂಡ ನೀಡಿದೆ. ಜತೆಗೆ ದಾನಿಗಳೂ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.