Advertisement

ಇಚ್ಲಂಪಾಡಿ, ನೆಲ್ಯಾಡಿಗೆ ಆರೋಗ್ಯಾಧಿಕಾರಿ ಭೇಟಿ; ಆತಂಕ ಪಡಬೇಡಿ

10:55 AM Sep 05, 2018 | Team Udayavani |

ನೆಲ್ಯಾಡಿ: ಶಂಕಿತ ರೇಬಿಸ್‌ ವೈರಾಣು ಸೋಂಕಿನಿಂದ ಮೃತಪಟ್ಟನೆನ್ನಲಾದ ಇಚ್ಲಂಪಾಡಿ ಕಾಯರ್ತಡ್ಕ ನಿವಾಸಿ ಆಶಿತ್‌ (24) ಅವರ ಮನೆಗೆ ಹಾಗೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಪ್ರವೀಣ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಅಶೋಕ್‌ ಎಚ್‌. ಅವರು ಸೋಮವಾರ ಆಶಿತ್‌ ಅವರ ಮನೆ ಕಾಯರ್ತಡ್ಕಕ್ಕೆ ಭೇಟಿ ನೀಡಿ, ಮನೆಯವರಿಂದ ಮಾಹಿತಿ ಪಡೆದರು.

Advertisement

ಇಲಾಖೆಯಿಂದ ಮನವಿ
ಆನಂತರ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ, ವೈದ್ಯಾಧಿಕಾರಿ ಡಾ| ಕೃಷ್ಣಾನಂದ ಅವರೊಂದಿಗೆ ಚರ್ಚಿಸಿದರು. ರೇಬಿಸ್‌ ನಿರೋಧಕ ಚುಚ್ಚುಮದ್ದಿನ ಆವಶ್ಯಕತೆ ಇದ್ದಲ್ಲಿ ಗ್ರಾ.ಪಂ.ನಿಂದ ತುರ್ತು ಅನುದಾನ ಒದಗಿಸಿ ಸಹಕರಿಸುವಂತೆ ಕೌಕ್ರಾಡಿ ಪಿಡಿಒ ಮಹೇಶ್‌ ಅವರಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಪ್ರವೀಣ್‌ ಕುಮಾರ್‌ ಮನವಿ ಮಾಡಿದ್ದಾರೆ. ಗ್ರಾ.ಪಂ. ಕಾರ್ಯದರ್ಶಿ ಸತೀಶ ಬಂಗೇರ, ಸದಸ್ಯ ದಿನೇಶ್‌, ಆರೋಗ್ಯ ಸಹಾಯಕಿ ಲಿಸ್ಸಿಯಮ್ಮ, ನೀತಿ ಟ್ರಸ್ಟ್‌ ವಲಯಾಧ್ಯಕ್ಷ ಅಬ್ರಹಾಂ, ಪ್ರಕಾಶ್‌ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆ ನೆರವು ಕೇಳಿದರೆ ನೀಡಲು ಬದ್ಧ ಎಂದು ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ ತಿಳಿಸಿದರು.

208 ಮಂದಿಗೆ ಚುಚ್ಚುಮದ್ದು
ಆಶಿತ್‌ ಅವರ ಅಂತಿಮ ದರ್ಶನ ಪಡೆದಿದ್ದ 37 ಮಂದಿ ಸೆ. 2 ಹಾಗೂ 3ರಂದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೇಬಿಸ್‌ ನಿರೋಧಕ ಚುಚ್ಚುಮದ್ದು ಪಡೆದಿದ್ದಾರೆ. ಈವರೆಗೆ 208 ಮಂದಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ| ಕೃಷ್ಣಾನಂದ ತಿಳಿಸಿದ್ದಾರೆ.

ವದಂತಿಗೆ ಕಿವಿಗೊಡಬೇಡಿ
ಆಶಿತ್‌ ರೇಬಿಸ್‌ ವೈರಾಣು ಸೋಂಕಿನಿಂದ ಮೃತಪಟ್ಟಿದ್ದರೂ ರೋಗ ಹರಡುವ ಸಾಧ್ಯತೆ ತೀರಾ ಕಡಿಮೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವದಂತಿಗಳಿಗೆ ಕಿವಿಗೊಡಬಾರದು. ಸಾರ್ವಜನಿಕರಿಗೆ ಸಂಪೂರ್ಣ ಸಹಕಾರ ನೀಡುವಂತೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಮತ್ತು ಸಿಬಂದಿಗೆ ಸೂಚಿಸಲಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಗ್ರಾ.ಪಂ.ನವರು ಜನರು ಆತಂಕಗೊಳ್ಳದಂತೆ ಧೈರ್ಯ ತುಂಬಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ವೈದ್ಯರ ತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next