Advertisement

ಆರೈಕೆ ಮಾಡುವವರಿಗೆ ಎಚ್‌ಸಿಕ್ಯೂ ಮಾತ್ರೆ

11:58 AM Apr 20, 2020 | Sriram |

ಬೆಂಗಳೂರು: ಕೋವಿಡ್ 19 ಸೋಂಕುಪೀಡಿತರ ಚಿಕಿತ್ಸೆ ಮತ್ತು ಆರೈಕೆ ನಡೆಸುತ್ತಿರುವವರಿಗೆ ಸೋಂಕು ಪ್ರತಿಬಂಧಕ ಔಷಧವಾಗಿ ಹೈಡ್ರೋಕ್ಸಿಕ್ಲೋರೋಕ್ವಿನ್‌ (ಎಚ್‌ಸಿಕ್ಯೂ) ಮಾತ್ರೆಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

Advertisement

ಸೋಂಕು ಪೀಡಿತರ ಸಂಪರ್ಕ ಹೊಂದಿ ದವರು, ಸೋಂಕು ಪೀಡಿತ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಆರೋಗ್ಯ ಇಲಾಖೆ ಸಿಬಂದಿ, ಆ್ಯಂಬುಲೆನ್ಸ್‌ ವಾಹನಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿ, ಕೋವಿಡ್ 19 ಚಿಕಿತ್ಸೆ ನೀಡುವ ಆಸ್ಪತ್ರೆಗಳ ಖಾಸಗಿ ವೈದ್ಯರಿಗೆ ಈ ಮಾತ್ರೆ ನೀಡಬಹುದು. ಸೋಂಕು ಪೀಡಿತ ಅಥವಾ ಶಂಕಿತ ಪ್ರಕರಣಗಳ ಸೇವೆಯಲ್ಲಿ ತೊಡಗಿಸಿಕೊಂಡಿರುವ ರೋಗ ಲಕ್ಷಣ ಇಲ್ಲದ ಆರೋಗ್ಯ ಸಿಬಂದಿ ಮೊದಲನೇ ದಿನ ಎರಡು ಬಾರಿ ತಲಾ 400 ಎಂ.ಜಿ. ಪ್ರಮಾಣದಲ್ಲಿ ಈ ಔಷಧ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.

ಮುಂದಿನ 7 ವಾರಗಳ ಕಾಲ ವಾರಕ್ಕೆ ಒಂದು ಬಾರಿ 400 ಎಂ.ಜಿ. ಔಷಧವನ್ನು ಆಹಾರದೊಂದಿಗೆ ಸೇವಿಸಬೇಕು. ಸೋಂಕು ಖಚಿತಪಟ್ಟಿರುವವರೊಂದಿಗೆ ವಾಸವಿದ್ದ ರೋಗ ಲಕ್ಷಣಗಳಿಲ್ಲದವರಿಗೆ ಮೊದಲ ದಿನ 400 ಎಂ.ಜಿ. ಎರಡು ಬಾರಿ, ಮುಂದಿನ ಮೂರು ವಾರಗಳಲ್ಲಿ ಪ್ರತಿ ವಾರ 400 ಎಂ.ಜಿ. ಔಷಧ ಆಹಾರದೊಡನೆ ಸೇವಿಸಲು ಸೂಚಿಸಬೇಕು ಎಂದು ಹೇಳಲಾಗಿದೆ.

ವ್ಯಕ್ತಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬೇಗ ಸೋಂಕಿಗೆ ಒಳಗಾಗುತ್ತಾನೆ. ಹೀಗಾಗಿ ಹಿರಿಯ ನಾಗರಿಕರು, ಹೃದ್ರೋಗ ಸಮಸ್ಯೆಯುಳ್ಳವರು, ಇತರ ದೀರ್ಘ‌ಕಾಲಿಕ ಕಾಯಿಲೆಗಳುಳ್ಳವರು ವೈದ್ಯಕೀಯ ತಪಾಸಣೆ ಮತ್ತು ತಜ್ಞರ ಸೂಕ್ತ ಸಲಹೆಯೊಂದಿಗೆ ಮಾತ್ರ ಹೈಡ್ರೋಕ್ಸಿಕ್ಲೋರೋಕ್ವಿನ್‌ (ಎಚ್‌ಸಿಕ್ಯೂ) ಮಾತ್ರೆಗಳನ್ನು ಪ್ರತಿಬಂಧಕ ಔಷಧವಾಗಿ ಪಡೆಯಬಹುದು. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಔಷಧ ಬಳಸಲು ಸೂಚಿಸಬಾರದು ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next