ನವದೆಹಲಿ: ಪುರಾಣ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದಲ್ಲಿನ ಲಡ್ಡು ತಯಾರಿಕೆಯಲ್ಲಿನ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ, ಮೀನಿನ ಎಣ್ಣೆ ಬಳಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಂದ ವಿಸ್ತೃತ ವರದಿ ನೀಡುವಂತೆ ಕೇಳಿರುವುದಾಗಿ ತಿಳಿದು ಬಂದಿದೆ.
ಆಹಾರ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರೋಪದ ಬಗ್ಗೆ ಆಮೂಲಾಗ್ರ ತನಿಖೆಯಾಗಬೇಕಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿಗಳು ತಿಳಿಸಿರುವ ವಿಷಯ ಗಂಭೀರ ಮತ್ತು ಕಳವಳಕಾರಿಯಾಗಿದ್ದು, ಇದಕ್ಕೆ ತನಿಖೆಯ ಅಗತ್ಯವಿದ್ದು, ಆರೋಪಿಗಳನ್ನು ಶಿಕ್ಷಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ವೈಎಸ್ ಆರ್ ಕಾಂಗ್ರೆಸ್ ಪಕ್ಷದ ವರಿಷ್ಠ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದಲ್ಲಿ ದನದ ಕೊಬ್ಬಿನಂಶ, ಮೀನಿನ ಎಣ್ಣೆ ಮತ್ತು ಹಂದಿಯ ಕೊಬ್ಬಿನ ಅಂಶ ಇದ್ದಿರುವುದು ಗುಜರಾತ್ ಸರ್ಕಾರದ ಸ್ವಾಮಿತ್ವದ ಪ್ರಯೋಗಾಲಯದಲ್ಲಿ ಪತ್ತೆಯಾಗಿದ್ದು, ಇದರ ವರದಿಯಲ್ಲಿನ ಅಂಶವನ್ನು ತೆಲುಗುದೇಶಂ ಪಕ್ಷದ ಮುಖ್ಯಸ್ಥ, ಆಂಧ್ರ ಸಿಎಂ ನಾಯ್ಡು ಗಂಭೀರವಾಗಿ ಆರೋಪಿಸಿದ್ದರು.
ರಾಜ್ಯಸಭಾ ಸದಸ್ಯ, ನಾಲ್ಕು ವರ್ಷಗಳ ಕಾಲ ಟಿಟಿಡಿಯ ಅಧ್ಯಕ್ಷರಾಗಿದ್ದ ವೈವಿ ಸುಬ್ಬಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಪವಿತ್ರವಾದ ಲಡ್ಡು ಪ್ರಸಾದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಬೆರೆಸುತ್ತಾರೆ ಎಂಬ ಆರೋಪ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಚಂದ್ರಬಾಬು ನಾಯ್ಡು ಅವರ ನೀಚ ಆರೋಪವಾಗಿದೆ ಎಂದು ಕಿಡಿಕಾರಿರುವುದಾಗಿ ವರದಿ ತಿಳಿಸಿದೆ.