ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ಸೇವೆಯನ್ನು ಪಡೆಯಿರಿ. ಅವರಿಗೆ ಉತ್ತಮ ವೇತನ ನೀಡಿ. ಅದರ ಬಿಲ್ ಅನ್ನು ನಾವು ತುಂಬುತ್ತೇವೆ.’ ಹೀಗೆಂದು ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಲೋಕಸಭೆಯಲ್ಲಿ ಶುಕ್ರವಾರ ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಜೆ.ಪಿ. ನಡ್ಡಾ, “ಸ್ತ್ರೀರೋಗ ತಜ್ಞರು ಸೇರಿದಂತೆ ತಜ್ಞವೈದ್ಯರ ಸೇವೆಯನ್ನು ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ರಾಜ್ಯ ಸರ್ಕಾರಗಳೇ ಪಡೆಯಲಿ. ಅವರ ವೇತನದ ಮೊತ್ತವನ್ನು ನಾವು ಪಾವತಿಸುತ್ತೇವೆ,’ ಎಂದಿದ್ದಾರೆ.
ಇದೇ ವೇಳೆ, ದಿವಾಳಿತನ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಸಾಲದ ಸುಸ್ತಿದಾರರಿಗೆ ಕೂಡ ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸುಸ್ತಿದಾರನು ಬಾಕಿ ಉಳಿದ ಬಡ್ಡಿಯನ್ನು ಪಾವತಿಸಿ, ತನ್ನ ಸಾಲದ ಖಾತೆಯನ್ನು ಮತ್ತೆ ಚಾಲ್ತಿಗೆ ತಂದಲ್ಲಿ ಆತನೂ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳಬಹುದು ಎಂದು ವಿಧೇಯಕ ಹೇಳುತ್ತದೆ. ಭಾರತೀಯ ವೈದ್ಯಕೀಯ ಮಂಡಳಿ(ಐಎಂಸಿ)ಯ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ತರುವ ವಿಧೇಯಕವನ್ನೂ ಶುಕ್ರವಾರ ಮಂಡಿಸಲಾಗಿದೆ.
98 ಖಾಸಗಿ ಮಸೂದೆ ಮಂಡನೆ: ಬೀದಿ ಹಸುಗಳ ರಕ್ಷಣೆಗೆ ಪ್ರತ್ಯೇಕ ಮಂಡಳಿ ಸ್ಥಾಪನೆ ಸೇರಿದಂತೆ 98 ವಿವಿಧ ಖಾಸಗಿ ಸದಸ್ಯ ಮಸೂದೆಗಳು ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಿದೆ. ಇದೇ ವೇಳೆ, ಉದ್ಯೋಗವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವಂತೆ ಕೋರಿ ಸಲ್ಲಿಸಲಾಗಿದ್ದ ಖಾಸಗಿ ಸದಸ್ಯ ಮಸೂದೆಯನ್ನು ರಾಜ್ಯಸಭೆ ತಿರಸ್ಕರಿಸಿದೆ. 18ಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉದ್ಯೋಗ ನೀಡುವ ಭರವಸೆಯನ್ನು ಸರ್ಕಾರ ಕೊಡಬೇಕು ಅಥವಾ ಅವರಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಸ್ಪಿ ಸಂಸದರೊಬ್ಬರು ಕೋರಿದ್ದರು. ಈ ವಿಧೇಯಕ ಕೇವಲ 3 ಮತಗಳಿಂದ ಬಿದ್ದುಹೋಯಿತು.
ಜ.1ರಂದು ರಜೆ 2018ರ ಮೊದಲ ದಿನ ಅಂದರೆ ಜ.1ರಂದು ಸಂಸತ್‌ನ ಸದನಗಳಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ, ಜ.2ರಂದು ಕಲಾಪ ನಡೆಯಲಿದೆ. 5ರಂದು ಚಳಿಗಾಲದ ಅಧಿವೇಶನಕ್ಕೆ ತೆರೆಬೀಳಲಿದೆ.
“ದೇಶಪ್ರೇಮದ ದಿನ’ವೆಂದು ಘೋಷಿಸಿ
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜನ್ಮದಿನವಾದ ಜ.23 ಅನ್ನು “ದೇಶಪ್ರೇಮದ ದಿನ’ ಎಂದು ಘೋಷಿಸಿ, ಆ ದಿನ ರಾಷ್ಟ್ರೀಯ ರಜೆಯನ್ನೂ ಘೋಷಿಸಬೇಕು ಎಂಬ ಒತ್ತಾಯ ಕೇ ಳಿಬಂದಿದೆ. ರಾಜ್ಯಸಭೆಯಲ್ಲಿ ಸಿಪಿಎಂ ಮುಖಂಡರಾದ ರಿತಬ್ರತಾ ಬ್ಯಾನರ್ಜಿ ಅವರು ಈ ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ನಿಮ್ಮ ಸಲಹೆಯನ್ನು ಸರ್ಕಾರ ಪರಿಗಣಿಸಬಹುದು. ಆದರೆ, ಸದಸ್ಯರು ಯಾವತ್ತೂ ರಜೆ ಘೋಷಿಸುವಂತೆ ಕೇಳಬಾರದು ಎಂದು ಕಿವಿಮಾತು ನುಡಿದರು.