Advertisement

ಸದೃಢ ಆರೋಗ್ಯಕ್ಕೆ ಮುಂಜಾಗ್ರತೆ ಅವಶ್ಯ: ಶ್ರೀ

11:42 AM Jan 28, 2022 | Team Udayavani |

ಆಳಂದ: ಸದೃಢ ಆರೋಗ್ಯಕ್ಕೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ಮುಗಳಖೋಡ, ಜಿಡಗಾ ನವಕಲ್ಯಾಣ ಮಠದ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಕೋವಿಡ್‌ ಜಾಗೃತಿ ಮತ್ತು ನಿಯಮಾವಳಿ ಪಾಲನೆ, ಭಕ್ತರ ಆರೋಗ್ಯ ಸಂರಕ್ಷಣೆಗಾಗಿ ಉಚಿತ ಯೋಗಾಸನ ತರಬೇತಿ, ಆಯುರ್ವೇದ ಉಪಚಾರ ಶಿಬಿರದ ಸಿದ್ಧತಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕೊರೊನಾ ವೈರಸ್‌ ಸೇರಿದಂತೆ ಹವಾಮಾನದಲ್ಲಿ ಬದಲಾವಣೆಯಿಂದಾಗಿ ಸಾಮಾನ್ಯ ಕಾಯಿಲೆಯಿಂದಲೂ ಜನ ಬಳಲುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಆಹಾರ ಸೇವನೆ, ಮುಂಜಾಗ್ರತೆ, ಆರೋಗ್ಯ ದೃಷ್ಟಿಯಿಂದ ವೈದ್ಯರ ಸಲಹೆ ಪಡೆದು ಹೆಜ್ಜೆ ಇಡಬೇಕಿದೆ ಎಂದರು.

ಜಿಡಗಾ ಮಠದಲ್ಲಿ ಫೆ. 3ರಿಂದ 10ರ ವರೆಗೆ ಪ್ರತಿದಿನ ಬೆಳಗ್ಗೆ 6ರಿಂದ 8 ಗಂಟೆ ವರೆಗೆ ಪರಿಣಿತ ಯೋಗಪಟುಗಳಿಂದ ಉಚಿತ ಯೋಗದ ತರಬೇತಿ ಮತ್ತು ನುರಿತ ತಜ್ಞ ವೈದ್ಯರಿಂದ ಉಪಚಾರ, ಆಯುರ್ವೇದ ಔಷಧೋಪಚಾರ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಾವಯವ ಬೆಳೆ, ಹಣ್ಣು, ತರಕಾರಿ, ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಆಹಾರ ಧಾನ್ಯ ಉತ್ಪಾದನೆಗೆ ತಜ್ಞರು ಮಾಹಿತಿ ನೀಡುವರು. ಕೃಷಿ, ಹೈನುಗಾರಿಕೆ, ಉಪಕಸಬು ಉದ್ಯೋಗ, ಉದ್ಯಮೆಯಲ್ಲಿನ ಸಾಧಕರು ಆಗಮಿಸಿ ಅನುಭವ ಹಂಚಿಕೊಳ್ಳುವರು ಎಂದು ವಿವರಿಸಿದರು. ಶ್ರೀ ಮಠದ ಕಾರ್ಯದರ್ಶಿ ಬಸವರಾಜ ಚೋಪಾಟೆ, ಯಲ್ಲಾಲಿಂಗ ಸಲಗರೆ ಹಾಗೂ ಭಕ್ತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next